ತಂದೂರ್ ಹತ್ಯೆ; ಸುಶೀಲ್ಗೆ ಗಲ್ಲು ಬದಲು ಜೀವಾವಧಿ ಶಿಕ್ಷೆ
ನವದೆಹಲಿ: 1995ರ ತಂದೂರ್ ಹತ್ಯೆ ಪ್ರಕರಣದ ದೋಷಿ ಮಾಜಿ ಯುವ ಕಾಂಗ್ರೆಸ್ ಮುಖಂಡ ಸುಶೀಲ್ ಶರ್ಮಾ ಅವರಿಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಭೀತಾಗಿದ್ದರಿಂದ ಕೆಳ ನ್ಯಾಯಾಲಯ ಶರ್ಮಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಈ ತೀರ್ಪನ್ನು ದೆಹಲಿ ಹೈಕೋರ್ಟ್ ಸಹ ಎತ್ತಿಹಿಡಿದಿತ್ತು. ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಶೀಲ್ ಶರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ. ಸದಾಶಿವಂ ಅವರನ್ನು ಒಳಗೊಂಡ ಸುಪ್ರೀಂ ಪೀಠ, ಇಂದು ತನ್ನ ಅಂತೀಮ ತೀರ್ಪು ಪ್ರಕಟಿಸಿದೆ. ಸುಶೀಲ್ ಶರ್ಮಾ ಮಾಡಿದ ಹತ್ಯೆ ತೀರಾ ಅಪರೂಪದ್ದಲ್ಲ. ಸಮಾಜದ ವಿರುದ್ಧ ಮಾಡಿದ್ದ ಅಪರಾಧವಲ್ಲ. ಹೆಂಡತಿಯೊಂದಿಗಿನ ವೈವಾಹಿಕ ಸಂಬಂಧ ಹಳಸಿದ್ದರಿಂದ ಈ ಕೊಲೆ ಮಾಡಿದ್ದಾರೆ. ಹೀಗಾಗಿ ಮರಣದಂಡನೆಯ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾಗಿದ್ದ ಸುಶೀಲ್ ಶರ್ಮಾ 1995ರಲ್ಲಿ ಪತ್ನಿ ನೈನಾ ಸಹಾನಿ ಅವರನ್ನು ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ರೆಸ್ಟಾರೆಂಟ್ವೊಂದರ ಒಲೆಯಲ್ಲಿ ಸುಡಲು ಯತ್ನಿಸಿದ್ದಾನೆ. ರಾತ್ರಿಯ ವೇಳೆ ಚಿಮಣಿಯಿಂದ ದಟ್ಟ ಹೊಗೆ ಬರುತ್ತಿದ್ದರಿಂದ ಅನುಮಾನಗೊಂಡ ಗಸ್ತು ಪೊಲೀಸರು ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಸುಶೀಲ್ ಶರ್ಮಾ ಆಕೆಯನ್ನು ಕೊಲೆಮಾಡಿದ್ದರು. ತಾವು ಯುವ ಕಾಂಗ್ರೆಸ್ ಮುಖಂಡರಾಗಿದ್ದ ಸಂದರ್ಭದಲ್ಲಿ ಅದೇ ಪಕ್ಷದ ಕಾರ್ಯಕರ್ತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಶರ್ಮಾಗೆ ಇತ್ತು. ಅದೇ ಕಾರಣದಿಂದಾಗಿ ಕೋಪದಲ್ಲಿ ಆತ ಪತ್ನಿಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಸೆಷನ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ದೀರ್ಘಕಾಲ ನಡೆದಿತ್ತು. 2003ರಲ್ಲಿ ಕೆಳ ನ್ಯಾಯಾಲಯವು ಸುಶೀಲ್ ಶರ್ಮಾನನ್ನು ದೋಷಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶರ್ಮಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸಹ ತೀರ್ಪನ್ನು ಎತ್ತಿಹಿಡಿದಿತ್ತು. ಹೀಗಾಗಲೇ ಶರ್ಮಾ ಅವರು ಸುಮಾರು 18 ವರ್ಷಗಳಿಂದ ಜೈಲಿನಲ್ಲಿದ್ದು, ಇದೀಗ ಸುಪ್ರೀಂಕೋರ್ಟ್ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿರುವುದರಿಂದ ಶರ್ಮಾ ಶೀಘ್ರದಲ್ಲೇ ಬಂಧಮುಕ್ತವಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

