ಈಗಿನ ಸುದ್ದಿ

ವಿದ್ಯುನ್ಮಾನ ಮತಯಂತ್ರಗಳಲ್ಲಿ ವಿವಿಪಿಎಟಿ ಅಳವಡಿಸಿ: ಸುಪ್ರೀಂ

Published On :

ನವದೆಹಲಿ: 2014ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳಲ್ಲಿ ಹಂತ-ಹಂತವಾಗಿ ಮತಪತ್ರ ತಾಳೆ ಪರಿಶೋಧನಾ ವ್ಯವಸ್ಥೆ(ವಿವಿಪಿಎಟಿ) ಮತ್ತು ರಶೀದಿ ಸೌಲಭ್ಯವನ್ನು ಅಳವಡಿಸಿ ಎಂದು ಮಂಗಳವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ವಿದ್ಯುನ್ಮಾನ ಮತ ಯಂತ್ರಗಳಲ್ಲಿ ವಿವಿಪಿಎಟಿ ಅಳವಡಿಕೆಯಿಂದ ಮುಕ್ತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಇದನ್ನು ಅಳವಡಿಸುವುದರಿಂದ ವಿವಾದಗಳನ್ನು ಇತ್ಯರ್ಥ ಪಡಿಸಲು ಸಹಕಾರಿಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರನ್ನೊಳಗೊಂಡ ವಿಭಾಗಿಯ ಪೀಠ ಸೂಚಿಸಿದ್ದು, ಇದರಿಂದ ಮುಕ್ತ ಹಾಗೂ ಪಾರದರ್ಶಕ ಮತದಾನ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಮತಯಂತ್ರಗಳಲ್ಲಿ ಮತಪತ್ರ ತಾಳೆ ಪರಿಶೋಧನಾ ವ್ಯವಸ್ಥೆಯನ್ನು ಅಳವಡಿಸಲು ಚುನಾವಣಾ ಆಯೋಗಕ್ಕೆ ಸೂಕ್ತ ಹಣಕಾಸಿನ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಇವಿಎಂಗಳಲ್ಲಿ ರಶೀದಿ ಸೌಲಭ್ಯ ಅಳವಡಿಸಲು ಹಾಗೂ ಪ್ರತಿಯೊಬ್ಬ ಮತದಾರನಿಗೂ ಅದನ್ನು ನೀಡಲು ಚುನಾವಣಾ ಮೇಲ್ವಿಚಾರಣೆ ಸಂಸ್ಧೆಗೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಫ್ರೆಬ್ರುವರಿ ತಿಂಗಳಲ್ಲಿ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 21 ಮತ ಕೇಂದ್ರಗಳಲ್ಲಿ ವಿವಿಪಿಎಟಿ ಬಳಕೆ ಮಾಡಲಾಗಿತ್ತು. ಇದು ಯಶಸ್ವಿ ಹಾಗೂ ಸಮರ್ಪಕವಾಗಿತ್ತು ಎಂದು ಚುನಾವಣಾ ಆಯೋಗ ಇದಕ್ಕೂ ಮುನ್ನು ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೆ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲ್ಲಿದ್ದು ಅಲ್ಲಿ ಹಂತ ಹಂತವಾಗಿ ಇದನ್ನು ಅಳವಡಿಸಲು ಸಾಧ್ಯವಿದೆ. ಇದಕ್ಕಾಗಿ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಆಯೋಗ ತಿಳಿಸಿತ್ತು.

ಮತದಾರನು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ನೀಡುವ ಬಟ್ಟನ್ (ಗುಂಡಿ) ಒತ್ತಿದ ಕೂಡಲೇ ಅಭ್ಯರ್ಥಿಯ ಕ್ರಮಸಂಖ್ಯೆ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಒಳಗೊಂಡ ಮತಪತ್ರ ಮುದ್ರಣಗೊಳ್ಳುತ್ತದೆ. ಈ ವೇಳೆ ಅಭ್ಯರ್ಥಿಯು ಅದನ್ನು ಪರಿಶೀಲಿಸಿ ತನ್ನ ಆಯ್ಕೆಯನ್ನು ಕುರಿತು ತಿಳಿಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.