ಈಗಿನ ಸುದ್ದಿ

ಚಿನ್ನದ 'ಅಂಬಾರಿ' ಹೊತ್ತು ಸಾಗಿದ ಅರ್ಜುನ

ಚಿನ್ನದ 'ಅಂಬಾರಿ' ಹೊತ್ತು ಸಾಗಿದ ಅರ್ಜುನ
Published On :

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಅವರು ಅದ್ಧೂರಿ ಚಾಲನೆ ನೀಡಿದರು.

ಮೊದಲಿಗೆ ಬಲರಾಮ ದ್ವಾರದ ಮುಂದೆ ಇರುವ ನಂದಿಧ್ವಜಕ್ಕೆ ಪೂಜೆ ನೆರವೇರಿಸಿ, ನಂತರ ತಾಯಿ ಚಾಮುಂಡೇಶ್ವರಿದೇವಿ ವಿಗ್ರಹ ಸಹಿತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಚಾಲನೆ ನೀಡಿದರು.

ಜಂಬೂಸವಾರಿಗೆ ಚಾಲನೆ ಸಿಗುತ್ತಿದ್ದಂತೆ 750 ಕೆಜಿ ತೂಗದ ಚಿನ್ನದ ಅಂಬಾರಿ ಹೊತ್ತ ಗಜರಾಜ ಅರ್ಜುನಾ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಅರ್ಜುನನ ಅಕ್ಕ ಪಕ್ಕದಲ್ಲಿ ಸರಳಾ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡುತ್ತಿವೆ. ಸಾಲಾನೆಗಳಾಗಿ ಪಟ್ಟದ ಆನೆ ಗಜೇಂದ್ರ, ಶ್ರೀರಾಮ, ಹರ್ಷ, ಕಾವೇರಿ, ವಿಜಯ, ದುರ್ಗಾಪರಮೇಶ್ವರಿ ಆನೆಗಳು ಭಾಗಿಯಾಗಿವೆ.

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದ್ದು ಉತ್ತಮ ಬೆಳೆಯಾಗುವ ನಿರೀಕ್ಷೆಯಿದೆ. ನಾಡಿನ ಸಮೃದ್ದಿಗಾಗಿ ಮತ್ತು ನಾಡಿನ ಜನರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಎಂದಿನಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 30 ಜಿಲ್ಲೆಗಳು ಮತ್ತು 12 ಇಲಾಖೆಗಳ ಸುಮಾರು 40ಕ್ಕೂ ಸ್ತಬ್ಧ ಚಿತ್ರಗಳನ್ನು ಕಾಣಬಹುದಾಗಿದೆ. ಆಯಾ ಜಿಲ್ಲೆಗಳ ಪ್ರಮುಖ ಆಕರ್ಷಣಿಯ ಪ್ರವಾಸಿ ಕ್ಷೇತ್ರಗಳ ವಿವಿಧ ಕಾಲಾಕೃತಿಯ ಚಿತ್ರಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ ನಾಡಪ್ರಭು ಕೆಂಪೇಗೌಡ ಅವರ ಸ್ತಬ್ಧ ಚಿತ್ರ, ಬಿಜಾಪುರ ಜಿಲ್ಲೆಯ ಆದಿಲ್ಶಾ ದರ್ಬಾರಿನ ಸ್ತಬ್ಧ ಚಿತ್ರ, ಕಾಕನಕೋಟೆ ಸ್ತಬ್ಧ ಚಿತ್ರ, ಕೋಲಾರದಿಂದ ಮಾಸ್ತಿ ಅವರ ಸ್ತಬ್ಧ ಚಿತ್ರಗಳನ್ನು ಪ್ರದರ್ಶನಗೊಂಡವು.

ನಾಡಿನ ಪ್ರಮುಖ ಕುಣಿತ ಪ್ರಕಾರಗಳಾದ ಡೊಳ್ಳು ಕುಣಿತ, ಕಂಸಾಳೆ ಕುಣಿತ, ಬೀಸೂ ಕಂಸಾಳೆ ಕುಣಿತ, ಗೊಂಬೆ ಕುಣಿತ, ವೀರಗಾಸೆ, ಗೀಗೀಪದ, ತಮಟೆ ನಗಾರಿ ಮತ್ತು ಲಂಬಾಣಿ ನೃತ್ಯಗಳು ಪ್ರದರ್ಶನಗೊಂಡವು.

ಈ ಬಾರಿಯ ದಸರಾ ಉತ್ಸವಕ್ಕೆ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಅರಮನೆಯ ಆವರಣದಲ್ಲಿ ಬೀಡುಬಿಟ್ಟಿದ್ದಾರೆ. ಸುಮಾರು 12 ಸಾವಿರ ಮಂದಿ ಜಂಬೂಸವಾರಿ ವಿಕ್ಷೀಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜಂಬೂಸವಾರಿ ಸಾಗುವ ಪ್ರಮುಖ ರಸ್ತೆಗಳು ಸೇರಿದಂತೆ ಲಕ್ಷಾಂತರ ಜನರು ಸೇರಿದ್ದು, ತಾಯಿ ಚಾಮುಂಡಿ ದೇವಿಯನ್ನು ಹೊತ್ತ ಅರ್ಜುನ ಹಾಗೂ ಆತನೊಂದಿಗೆ ಗಂಭೀರವಾಗಿ ನಡೆಯುತ್ತಿರುವ ಗಜಪಡೆಯನ್ನು ಕಂಡು ಜನರು ಕಣ್ ತುಂಬಿಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.