ಮೈಸೂರಿನಲ್ಲಿ ಜಂಬೂಸವಾರಿಗೆ ಕ್ಷಣಗಣನೆ

ಮೈಸೂರು: ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರಿನಲ್ಲಿ ನಡೆಯಲಿರುವ ಜಂಬುಸವಾರಿಗೆ ಕ್ಷಣಗಣನೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ವಿಜಯ ದಶಮಿ ದಿನಾವದ ಇಂದು ನಡೆಯಲಿದ್ದು, ಈಗಾಗಲೇ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ.
ಇಂದು ಬೆಳಿಗ್ಗೆ ಶ್ರಿಕಂಠದತ್ತ ನರಸಿಂಹರಾಜ ಒಡೆಯರ್ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ್ದಾರೆ. ಸಂಪ್ರದಾಯದಂತೆ ಒಡೆಯರ್ ಅವರು ಬೆಳ್ಳಿ ರಥದಲ್ಲಿ ತೆರಳಬೇಕಿತ್ತು ಆದರೆ ಅವರು ಕಾರಿನಲ್ಲಿ ತೆರಳಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ್ದು, ಯದುವಂಶದ ಸಂಪ್ರದಾಯ ಮುರಿದಂತಾಯಿತು ಎಂದು ಮಾತುಗಳು ಕೇಳಿ ಬಂದಿದೆ.
ಇಂದು ನಡೆಯುವ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಮಧ್ಯಹ್ನ 1.12ರಿಂದ 1.40ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸುವರು. ನಂತರ ಅರಮನೆಯ ಒಳಾವರಣದಲ್ಲಿ ನಿರ್ಮಿಸುವ ವಿಶೇಷ ವೇದಿಕೆಯಲ್ಲಿ ನಿಂತು ಗಜರಾಜ ಅರ್ಜುನ ಹೊರಲಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು.
ನವರಾತ್ರಿ ಉತ್ಸವವು ಮೈಸೂರಿನ ಯದುವಂಶದ ರಾಜರಿಗೆ ವಿಜಯನಗರ ಅರಸರಿಂದ ಬಂದ ಚಳುವಳಿ. ನಾಡಹಬ್ಬದ ಹೆಸರಿನಲ್ಲಿ ರಾಜ್ಯ ಸರ್ಕಾರವೇ ಆಚರಿಸುವ ರಾಜ್ಯದ ಮಹತ್ವಪೂರ್ಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವೇ ದಸರಾ.
ಬಿಗಿ ಬಂದೋಬಸ್ತ್
ಮೆರವಣಿಗೆಗೆ 6000ಕ್ಕೂ ಹೆಚ್ಚು ಪೊಲೀಸ್ ಬಳಸಿಕೊಂಡು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಲ್ಲೆಡೆ ಲೋಹಶೋಧಕ ಯಂತ್ರಗಳ ಮೂಲಕ ತಪಾಸಿಸಿ ಒಳಬಿಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಅರಮನೆ ಸುತ್ತಮುತ್ತ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸುವರು. ಅಲ್ಲಿ ಆಕರ್ಷಕ ಮೋಟಾರ್ ರ್ಯಾಲಿ, ಬಾಣಬಿರುಸುಗಳ ಚಿತ್ತಾರ ನಡೆಯಲಿದೆ. ಇದರೊಂದಿಗೆ ಅ.5ರಿಂದ ನಡೆಯುತ್ತಿರುವ ದಸರೆಗೆ ತೆರೆ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


