ಈಗಿನ ಸುದ್ದಿ

ಧೋನಿ 'ವಿರಾಟ' ದರ್ಶನ: ಆಸೀಸ್‌ಗೆ 304 ರನ್ ಗುರಿ

ಧೋನಿ 'ವಿರಾಟ' ದರ್ಶನ: ಆಸೀಸ್‌ಗೆ 304 ರನ್ ಗುರಿ
Published On :

ಮೊಹಾಲಿ: ಇಲ್ಲಿ ನಡೆಯುತ್ತಿರುವ ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ  303 ರನ್ ಕಲೆ ಹಾಕಿದೆ.

ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಜೇಯ 139 ರನ್ ಪ್ರಸ್ತುತ ಪಂದ್ಯದ ಹೈಲೈಟ್.

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆರಂಭಿಕ ದಾಂಡಿಗರಾಗಿ ಕ್ರೀಸ್‌ಗಿಳಿದಿದ್ದು, 2ನೇ ಓವರ್‌ನಲ್ಲೇ ಭಾರತದ ಮೊದಲ ವಿಕೆಟ್ ಪತನವಾಗಿದೆ. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಶತಕ ವಂಚಿತರಾಗಿದ್ದ ಧವನ್ ಕೇವಲ ಎಂಟು ರನ್ ಗಳಿಸಿ ಮಾಕ್‌ಕೇ ಬಾಲ್‌ಗೆ ವಿಕೆಟ್ ಕಳೆದುಕೊಂಡರು. ಎರಡು ಬೌಂಡರಿಗಳನ್ನು ಬಾರಿಸಿದ ರೋಹಿತ್ ಶರ್ಮಾ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿದ್ದರೂ ವಾಟ್ಸನ್ ಬಾಲ್‌ಗೆ ಬಲಿಯಾಗುವ ಮೂಲಕ ಶರ್ಮಾ ಪೆವಿಲಿಯನ್‌ಗೆ ಮರಳಿದರು. 22 ಬಾಲ್‌ಗಳನ್ನೆದುರಿಸಿದ್ದ ಶರ್ಮಾ 11 ರನ್ ಗಳಿಸಿದ್ದಾರೆ.

7ನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ತಂಡಕ್ಕೆ ಆಶ್ರಯವಾಗಿ ಬಂದಿದ್ದು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿಯ ಆವೇಶದ ಆಟ ಭಾರತದ ರನ್ ಏರಿಕೆಯಾಗಲು ಸಹಾಯವಾಯಿತು. ಕೊಹ್ಲಿಗೆ ಸಾಥ್ ನೀಡಿದ್ದ ಸುರೇಶ್ ರೈನಾ 17 ರನ್ ಗಳಿಸಿ ಪೆವಿಲಿಯನ್ ಮರಳಿದಾಗ ಭಾರತದ ಸ್ಕೋರ್ 76 ಆಗಿತ್ತು.  ರೈನಾ ನಂತರ ಕ್ರೀಸ್‌ಗಿಳಿದ ಯುವರಾಜ್ ಸಿಂಗ್ ಡಕ್ ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದರು.

ಯುವರಾಜ್ ನಂತರ ಕೊಹ್ಲಿಗೆ ಜತೆಯಾದದ್ದು ಮಹೇಂದ್ರ ಸಿಂಗ್ ಧೋನಿ. ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಧೋನಿ -ಕೊಹ್ಲಿ ಜತೆಯಾಟ ಆಕರ್ಷಕವಾಗಿತ್ತು. ಆದರೆ ಮೇಕ್ಸ್‌ವೆಲ್ ಬೌಲ್‌ಗೆ ಕೊಹ್ಲಿ ವಿಕೆಟ್ ಕಳೆದುಕೊಂಡರು. 9 ಬೌಂಡರಿಗಳನ್ನು ಬಾರಿಸಿದ್ದ ಕೊಹ್ಲಿ 73 ಬಾಲ್‌ಗಳಲ್ಲಿ 68 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಪ್ರಸ್ತುತ ಪಂದ್ಯದಲ್ಲಿ ಹೊಡೆಬಡಿಯ ಪ್ರದರ್ಶನ ನೀಡಿದ್ದು, ಭಾರತದ ರನ್ ಗತಿ ಏರಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಕೊಹ್ಲಿ ನಂತರ ಕ್ರೀಸ್‌ಗಿಳಿದ ಬ್ಯಾಟ್ಸ್‌ಮನ್‌ಗಳ್ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಜಡೇಜಾ (2) ಅಶ್ವಿನ್ (28), ಕುಮಾರ್ (10), ವಿನಯ್ ಕುಮಾರ್ ಶೂನ್ಯ ಸಂಪಾದಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದಾಗ ಅಲ್ಲಿ ಧೋನಿ ಮಾತ್ರ ಏಕೈಕ ಹೋರಾಟಗಾರನಾಗಿ ಭಾರತದ ರನ್ ಏರಿಸುವಲ್ಲಿ ಯಶಸ್ವಿಯಾದರು.

ಕೊನೆಯ ದಾಂಡಿಗ ಇಶಾಂತ್ ಶರ್ಮಾ ಕ್ರೀಸ್‌ಗಿಳಿದಿದ್ದರೂ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

ಪಂದ್ಯದ ಕೊನೆಯ ಓವರ್‌ನ ಕೊನೆಯ ಬಾಲ್‌ನ್ನು ಬೌಂಡರಿಗೆ ಅಟ್ಟುವ ಮೂಲಕ ಧೋನಿ 139 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಧೋನಿ  121 ಬಾಲ್‌ಗಳನ್ನೆದುರಿಸಿದ್ದು 12 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.