ಈಗಿನ ಸುದ್ದಿ

ಭಾರತ 'ಔರಂಗ್‌ಝೇಬ್ ಆಡಳಿತ'ಕ್ಕೆ ಒಳಪಟ್ಟಿಲ್ಲ: ಮೊಯ್ಲಿ

ಭಾರತ 'ಔರಂಗ್‌ಝೇಬ್ ಆಡಳಿತ'ಕ್ಕೆ ಒಳಪಟ್ಟಿಲ್ಲ: ಮೊಯ್ಲಿ
Published On :

ನವದೆಹಲಿ: ಭಾರತ ಔರಂಗ್‌ಝೇಬ್ ಆಡಳಿತಕ್ಕೆ ಒಳಪಟ್ಟಿಲ್ಲ, ಭಾರತದಲ್ಲಿ ಕಾನೂನು ಜಾರಿಯಲ್ಲಿದ್ದು, ಅದರ ಪ್ರಕಾರ ಸರ್ಕಾರ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಂ. ವೀರಪ್ಪಮೋಯ್ಲಿ ಶನಿವಾರ ಹೇಳಿದ್ದಾರೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಖ್ಯಾತ ಉದ್ಯಮಿ ಕುಮಾರಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಇದರಿಂದ ಔದ್ಯಮಿಕ ವಲಯದಲ್ಲಿ ಹೂಡಿಕೆದಾರರ ಭಾವನೆಗೆ ಧಕ್ಕೆಯಾಗವ ಆತಂಕ ಎದುರಾಗಿದೆ.

ಈ ಕುರಿತು ಮಾತನಾಡಿದ ಮೋಯ್ಲಿ ಅವರು, ನಮ್ಮ ದೇಶದಲ್ಲಿ ಕಾನೂನು ಎಂಬುದು ಇದೆ. ಸರ್ಕಾರ, ಕೇಂದ್ರಾ ತನಿಖಾ ತಂಡ ಕಾನೂನು ಪ್ರಕಾರ ಕೆಲಸ ನಿರ್ವಹಿಸಲಿದೆ. ಪ್ರಕರಣದಲ್ಲಿ ಅವರ ಹೆಸರು ಪ್ರಸ್ತಾಪವಾದೊಡನೆ ಅವರು ಅಪರಾಧಿಗಳಲ್ಲ. ದೃಢವಾದ ದಾಖಲೆಗಳು ದೊರೆತ ಆಧಾರ ಹಾಗೂ ನ್ಯಾಯಾಲಯದ ತೀರ್ಪಿನ ಮೇಲೆ ಆ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದು. ಕೇವಲ ಅವರ ಹೆಸರು ಕೇಳಿಬಂದೊಡನೆ ಅವರು ಅಪರಾಧಿಯೆಂದು ಪರಿಗಣಿಸಬಾರದು ಎಂದಿದ್ದಾರೆ.

ಬಿರ್ಲಾ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ ಹಾಗೂ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ. ಆದ್ದರಿಂದ ಕೈಗಾರಿಕೋದ್ಯಮಿಗಳು ಆತಂಕ ಪಡುವಂತಿಲ್ಲ. ರಷ್ಯಾ ಮಾದರಿಯಲ್ಲಿ ಇಲ್ಲಿ ಆಡಳಿತ ನಡೆಯುವುದಿಲ್ಲ. ನಾವೆಲ್ಲರು ಕಾನೂನು ಪ್ರಕಾರ ನಡೆದುಕೊಂಡರೆ ಮಾತ್ರ ಜನರು, ಹೂಡಿಕೆದಾರರು ಸುರಕ್ಷಿತವಾಗಿರಬಲ್ಲರು ಎಂದು ಮೋಯ್ಲಿ ತಿಳಿಸಿದ್ದಾರೆ.

ಕಲ್ಲಿದ್ದಲು ಹಂಚಿಕೆ ಬಗ್ಗೆ ನಡೆದ ಪ್ರಾಥಮಿಕ ತನಿಖೆಯ ಬಳಿಕ ಮೊದಲ ಬಾರಿಗೆ ಬಿರ್ಲಾ ಉದ್ದಿಮೆ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಲಾಗಿದೆ.

2005ರ ನ.10ರಂದು ಒಡಿಶಾದ ತಲಬಿರಾದಲ್ಲಿ ಬಿರ್ಲಾ ಸಮೂಹ ಸಂಸ್ಥೆಗೆ 2 ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಮೀಸಲಾಗಿ ಇರಿಸಲಾಗಿದ್ದ ಈ ಕಲ್ಲಿದ್ದಲು ಬ್ಲಾಕ್‌ಗಳನ್ನು ಬಿರ್ಲಾ ಸಮೂಹಕ್ಕೆ ಸೇರಿದ ಹಿಂಡಾಲ್ಕೋಗೆ ನೀಡಲಾಗಿತ್ತು. ಈ ಸಂದಂರ್ಭದಲ್ಲಿ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ ಪಾರೇಖ್ ಹಾಗೂ ಹಿಂಡಾಲ್ಕೋ ಪ್ರತಿನಿಧಿ ಜತೆಗಿನ ಭೇಟಿ ಬಳಿಕ ಒಡಿಶಾದಲ್ಲಿನ ಬ್ಲಾಕ್‌ಗಳು ಹಿಂಡಾಲ್ಕೋ ತೆಕ್ಕೆಗೆ ಬಿದ್ದಿತ್ತು.

ಕೇಂದ್ರ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡ ಬಳಿಕ ದಾಖಲಿಸಿರುವ 14ನೇ ಎಫ್‌ಐಆರ್ ಇದಾಗಿದೆ. ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಕುಮಾರಮಂಗಲಂ ಬಿರ್ಲಾ ಅವರನ್ನು ಆದಿತ್ಯ ಬಿರ್ಲಾ ಸಮೂಹದ ಪ್ರತಿನಿಧಿ ಎಂದು ಹೆಸರಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಸಂಚು, ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.