ಈಗಿನ ಸುದ್ದಿ

ಸಾಧುವಿನ 2ನೇ ಕನಸು: ಇನ್ನೊಂದೆಡೆ 2500 ಟನ್ ಚಿನ್ನ ಇದೆಯಂತೆ!

Published On :

ಉನ್ನಾವ್: ಶೋಭನ್ ಸರ್ಕಾರ್ ಸಾಧುವಿನ ಕನಸಿನ ಆಧಾರದಲ್ಲಿ ಉತ್ತರ ಪ್ರದೇಶದ ದೌಂಡಿಯಾ ಖೇಡಾ ಗ್ರಾಮದ ಉನ್ನಾವ್ ಕೋಟೆಯಲ್ಲಿ ಸಾವಿರ ಟನ್ ಚಿನ್ನಕ್ಕಾಗಿ ಉತ್ಖನನ ನಡೆಯುತ್ತಿದ್ದಂತೆ, ಇದೀಗ ಅದೇ ಸಾಧುವಿಗೆ ಇನ್ನೊಂದೆಡೆ 2500 ಟನ್ ಚಿನ್ನ ಇದೆ ಎಂಬ ಕನಸು ಬಿದ್ದಿದೆಯಂತೆ.

ಇಲ್ಲಿನ ಫತೇಪುರ್ ಜಿಲ್ಲೆಯ ಅದಾಂಪುರ್ ಗ್ರಾಮದಲ್ಲಿ 2500 ಟನ್ ಚಿನ್ನದ ನಿಧಿ ಇದೆ ಎಂದು ಸಾಧು ಹೇಳಿದ್ದಾರೆ.

ಏತನ್ಮಧ್ಯೆ, ಸಾಧು ಆ ಬಗ್ಗೆ ಫತೇಪುರ್ ಜಿಲ್ಲಾ ಮೆಜಿಸ್ಟ್ರೇಟ್ ಅಭಯ್ ಕುಮಾರ್ ಅವರಿಗೆ ತಮ್ಮ ಕನಸಿನ ಬಗ್ಗೆ ಪತ್ರವನ್ನೂ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ದಿನ 2: ಮುಂದುವರಿದ ಚಿನ್ನದ ಉತ್ಖನನ
19ನೇ ಶತಮಾನದಲ್ಲಿ ನಿರ್ಮಿಸಲಾದ ಉನ್ನಾವ್ ಕೋಟೆಯಲ್ಲಿರುವ ಸಾವಿರ ಟನ್ ಚಿನ್ನಕ್ಕಾಗಿರುವ  ಉತ್ಖನನ ಕಾರ್ಯ ಎರಡನೇ ದಿನವೂ ಮುಂದುವರಿದಿದೆ. ನಿನ್ನ  ಬೆಳಗ್ಗೆ ಶೋಭನ್ ಸರ್ತಾರ್  ಕೋಟೆಯ ಕೆಳಭಾಗದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದರು. ಬಳಿಕ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಭಾರತೀಯ ಪುರಾತತ್ವ ಇಲಾಖೆಯ 12 ಮಂದಿ ಅಧಿಕಾರಿಗಳ ತಂಡವು ಉತ್ಖನನ ಕಾರ್ಯ ಆರಂಭಿಸಿತ್ತು.

ಪ್ರಸ್ತುತ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರತೀಯ ಪುರಾತತ್ವ ಇಲಾಖೆ ತಂಡ ಠಿಕಾಣಿ  ಹೂಡಿದೆ.

ತಿಂಗಳುಗಳೇ ಬೇಕು
1857ರಲ್ಲಿ ಬ್ರಿಟಿಷರೊಂದಿಗೆ ಹೋರಾಡಿ ಮರಣವನ್ನಪ್ಪಿದ ರಾಜಾ ರಾವ್ ಬಕ್ಸ್ ಸಿಂಗ್ ಎಂಬ ರಾಜನ ಕೋಟೆಇದಾಗಿದೆ.

ಇತ್ತೀಚೆಗಷ್ಟೇ ಈ ರಾಜನು ಸಾಧುವಿನ ಕನಸಲ್ಲಿ ಬಂದು, ತಾನು ಕೋಟೆಯ ಸುತ್ತ ಒಂದು ಸಾವಿರ ಟನ್ ಚಿನ್ನವನ್ನು ಹುದುಗಿಸಿಟ್ಟಿದ್ದಾಗಿಯೂ, ಅದನ್ನು ಹೊರತೆಗೆದು ಸಂರಕ್ಷಿಸಬೇಕೆಂದೂ ಕೇಳಿಕೊಂಡಿದ್ದ. ಈ ವಿಚಾರವನ್ನು ಸಾಧು ಬಹಿರಂಗಪಡಿಸಿ, ಕೇಂದ್ರ ಸಚಿವರ ಮನವೊಲಿಸಿ ಉತ್ಖನನ ಕಾರ್ಯಕ್ಕೆ ಮುಂದಾಗುವಂತೆ ಮಾಡಿದ್ದರು. ಈಗ ಶೋಧ ಕಾರ್ಯ ಆರಂಭವಾಗಿದ್ದು, ಇದು ಪೂರ್ಣಗೊಳ್ಳಲು ಇನ್ನು ಒಂದು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

31 ಸಾವಿರ ಕೋಟಿ ಮೌಲ್ಯ
ಒಂದು ವೇಳೆ ಸಾಧುವಿನ ಕನಸಿನಲ್ಲಿ ಕಂಡಂತೆ ಅರಮನೆಯ ಅವಶೇಷಗಳಡಿ ಸಾವಿರ ಟನ್ ಚಿನ್ನ ಸಿಕ್ಕಿದ್ದೇ ಆದಲ್ಲಿ ದೇಶಕ್ಕೆ ಅದೃಷ್ಟ ಖುಲಾಯಿಸಿದಂತೆಯೇ ಸರಿ ಎಂದು ಹೇಳಲಾಗುತ್ತಿದೆ. ಏಕೆಂದರೆ ಸಾವಿರ ಟನ್ ಚಿನ್ನದ ದರ ಸುಮಾರು 31 ಸಾವಿರ ಕೋಟಿ ಆಗುತ್ತದೆ. ಒಂದು ವರ್ಷಕ್ಕೆ ಭಾರತವು ಆಮದು ಮಾಡಿಕೊಳ್ಳುವ ವಸ್ತುಗಳ ದರವನ್ನು ಇದರಿಂದ ತುಂಬಬಹುದಾಗಿದೆ.

ಸುಪ್ರೀಂ ಒಪ್ಪಿಗೆ
ಉತ್ಖನನದ ವೇಳೆ ಚಿನ್ನ ಪತ್ತೆಯಾದರೆ ಅದು ಕಣ್ಮರೆಯಾಗುವ ಸಾಧ್ಯತೆಯಿದೆ. ಹಾಗಾಗಿ ಈ ಕಾರ್ಯದ ಮೇಲ್ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಹಿಸಬೇಕು ಎಂದು ಕೋರಿ ವಕೀಲ ಎಂ.ಎಲ್. ಶರ್ಮಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಮುಗಿಬಿದ್ದ ಮಾಧ್ಯಮಗಳು
ಸಾವಿರ ಟನ್ ಚಿನ್ನಕ್ಕಾಗಿ ಉತ್ಖನನ ಆರಂಭವಾಗುತ್ತಿದ್ದಂತೆಯೇ ದೇಶ-ವಿದೇಶಗಳ ಮಾಧ್ಯಮ ಪ್ರತಿನಿಧಿಗಳು ದೌಂಡಿಯಾ ಖೇಡಾ ಗ್ರಾಮಕ್ಕೆ ಮುಗಿಬಿದ್ದಿದ್ದಾರೆ. ಈವರೆಗೆ ಯಾರಿಗೂ ಗೊತ್ತಿಲ್ಲದ ಹಳ್ಳಿಯೊಂದು ದಿನಬೆಳಗಾಗುತ್ತಿದ್ದಂತೆ ವಿಶ್ವಾದ್ಯಂತ ಹೆಸರು ಮಾಡಿದೆ. ಶೋಧ ಕಾರ್ಯವನ್ನು ನೋಡಲೆಂದು ಸುತ್ತಮುತ್ತಲಿನ ಗ್ರಾಮಸ್ಥರೂ ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲೆಂದು ಕೋಟೆಯ ಸುತ್ತಲೂ ಬ್ಯಾರಿಕೇಡ್‌ಗಳು ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆದಾಗ್ಯೂ, ಉನ್ನಾವ್‌ನಲ್ಲಿ ನಿಧಿ ಇದೆ ಎಂಬ ಸಾಕ್ಷ್ಯ ಲಭಿಸಿದ್ದರಿಂದಲೇ ಉತ್ಖನನ ಕಾರ್ಯ ಶುರು ಮಾಡಿದ್ದೇವೆಯೇ ಹೊರತು ಸಾಧುವೊಬ್ಬರ ಕನಸನ್ನು ಬೆನ್ನು ಹತ್ತಿ ಈ ಕಾರ್ಯಕ್ಕಿಳಿದಿಲ್ಲ ಎಂದು  ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.