ಅಧಿಕಾರಿಗಳೆ, ರಾಜಕಾರಣಿಗಳ ಮೌಖಿಕ ಆದೇಶ ಪಾಲಿಸಬೇಡಿ: ಸುಪ್ರೀಂ

ನವದೆಹಲಿ: ರಾಜಕಾರಣಿಗಳು ನೀಡುವ ಮೌಖಿಕ ಆದೇಶಗಳನ್ನು ಪಾಲಿಸಬೇಡಿ ಎಂದು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.
ರಾಜಕಾರಣಿಗಳ ಹಸ್ತಕ್ಷೇಪದಿಂದ ಅಧಿಕಾರಶಾಹಿ ಕರ್ತವ್ಯಕ್ಕೆ ಧಕ್ಕೆಯಾಗುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಒಂದೇ ಕಡೆ ಕೆಲಸ ನಿರ್ವಹಿಸಲು ಅವಕಾಶ ಸಿಕ್ಕರೆ ಅವರಿಂದ ಉತ್ತಮ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ನಿಶ್ಚಿತ ಅವಧಿವರೆಗೆ ಒಂದೇ ಕಡೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೇವಾ ಅವಕಾಶ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಅಲ್ಲದೆ ಇನ್ನು ಮೂರು ತಿಂಗಳ ಒಳಗಾಗಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸ್ಥಿರ ಅಧಿಕಾರವದಿಯನ್ನು ಕಲ್ಪಿಸಿ ಅದರ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.
ಸ್ಥಿರ ಅಧಿಕಾರ ನೀಡುವುದರಿಂದ ಅಧಿಕಾರಿಗಳ ಮೇಲಿನ ದೊಡ್ಡ ಭಾರವನ್ನು ಇಳಿಸಿದಂತಾಗುತ್ತದೆ. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದಿದ್ದರೆ ಅಧಿಕಾರಿಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶರಾದ ಕೆ.ಎಸ್. ರಾಧಾಕೃಷ್ಣನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ರಾಜಕಾರಣಿಗಳು ಮೌಖಿಕ ಆದೇಶಗಳನ್ನು ನೀಡಿದರೆ ಅಧಿಕಾರಿಗಳು ಅವುಗಳನ್ನು ತಕ್ಷಣ ಸಂಬಂಧಪಟ್ಟ ಫೈಲ್‌ಗಳಲ್ಲಿ ದಾಖಲಿಸಿ, ಮುಂದೆ ಯಾವುದೇ ವ್ಯತಿರಿಕ್ತ ಪರಿಸ್ಥಿತಿ ಎದುರಾದರೆ ಅಂತಹ ಸಂದರ್ಭದಲ್ಲಿ ಈ ಫೈಲ್‌ಗಳು ಪ್ರಯೋಜನಕ್ಕೆ ಬರುತ್ತದೆ ಎಂದರು.
ಅಧಿಕಾರಿಗಳ ಎತ್ತಂಗಡಿ ಕುರಿತಂತೆ ನಿವೃತ್ತ ಸಂಪುಟ ಕಾರ್ಯದರ್ಶಿ ಟಿಎಸ್ಸಾರ್ ಸುಬ್ರಮಣಿಯನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಇತ್ತೀಚೆಗಷ್ಟೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರಗಳು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡುತ್ತಿದ್ದು, ಈ ವೇಳೆ ಕೋರ್ಟ್ ನೀಡಿರುವ ಈ ಆದೇಶದಿಂದ ರಾಜಕಾರಣಿಗಳ ದುರಾಡಳಿತಕ್ಕೆ ಅಂಕುಶ ಹಾಕಿದ್ದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


