ಮೇವು ಹಗರಣ: ಲಾಲು ಸೇರಿ 45 ಮಂದಿ ತಪ್ಪಿತಸ್ಥರು

ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 'ಮೇವು' ತಿಂದದ್ದು ಸಾಬೀತಾಗಿದ್ದು, ಅವರ ಲೋಕಸಭಾ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ.
18 ವರ್ಷಗಳ ಹಿಂದೆ ಲಾಲು ವಿರುದ್ಧ ದಾಖಲಾಗಿದ್ದ 900 ಕೋಟಿ ರುಪಾಯಿ ಮೊತ್ತದ ಮೇವು ಹಗರಣದ ಅಂತಿಮ ತೀರ್ಪು ಸೋಮವಾರ ಹೊರಬಿದ್ದಿದ್ದು, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಸೇರಿದಂತೆ 45 ಮಂದಿ ತಪ್ಪಿತಸ್ಥರು ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳ ಪೈಕಿ, ಒಂದರ ತೀರ್ಪನ್ನು ಇಂದು ಜಾರ್ಖಂಡ್ನ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.
ಲಾಲು ವಿರುದ್ಧದ 37 ಕೋಟಿ ರುಪಾಯಿ ಅಕ್ರಮವಾಗಿ ಪಡೆದ ಆರೋಪ ಸಾಬೀತಾಗಿದ್ದು, ಅವರಿಗೆ ಕನಿಷ್ಟ ಮೂರು ವರ್ಷ ಹಾಗೂ ಗರಿಷ್ಟ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಎರಡು ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆಗೆ ಒಳಗಾದ ಶಾಸಕರು ಮತ್ತು ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪು ಹಾಗೂ ಇದರ ವಿರುದ್ಧ ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಲಾಲು ಮೇವು ಹಗರಣದ ತೀರ್ಪು ಪ್ರಕಟಗೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಲಾಲು ಅವರಲ್ಲದೆ, ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಬಿಹಾರನ ಮತ್ತೊರ್ವ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ, ಮೂವರು ಶಾಸಕರು ಹಾಗೂ ಪಶು ಸಂಗೋಪನಾ ಇಲಾಖೆ ಅಂದಿನ ಕಾರ್ಯದರ್ಶಿ ಸೇರಿದಂತೆ 45 ಮಂದಿಯನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಒಟ್ಟು 56 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಆದೆರ ವಿಚಾರಣೆ ವೇಳೆ ಏಳು ಆರೋಪಿಗಳು ಮೃತಪಟ್ಟಿದ್ದರಿಂದ ಅವರನ್ನು ಪ್ರಕರಣದಿಂದ ಕೈ ಬಿಡಲಾಗಿದೆ ಮತ್ತು ಇಬ್ಬರು ಆರೋಪಿಗಳನ್ನು ನಿದೋಷಿ ಎಂದು ಘೋಷಿಸಲಾಗಿದೆ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ: ಲಾಲು ಪುತ್ರ ತೇಜಸ್ವಿ ಯಾದವ್
ತಮ್ಮ ತಂದೆ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು, ರಾಂಚಿ ಸಿಬಿಐ ಕೋರ್ಟ್ ತೀರ್ಪು ಪ್ರಶ್ನಿಸಿ, ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


