50 ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣದ ಕಂಪು

Published On :
ನವದೆಹಲಿ: ಲೋಕಸಭಾ ಚುನಾವಣೆ ಅನೇಕ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಘಟಾನುಘಟಿಗಳ ನೇರ ಹಣಾಹಣಿಯಷ್ಟೇ ಅಲ್ಲ ಕುಟುಂಬ ರಾಜಕಾರಣದ ದೃಷ್ಟಿಯಿಂದಲೂ ಕುತೂಹಲ ಕೆರಳಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಭಿಜಿತ್ರಿಂದ ಹಿಡಿದು ಲಾಲು ಪುತ್ರಿ ಮಿಸಾ ಭಾರ್ತಿ ವರೆಗೆ ಸುಮಾರು 50 ಲೋಕಸಭಾ ಕ್ಷೇತ್ರಗಳು ರಾಜಕಾರಣಿಗಳ ಮಕ್ಕಳ ಕದನಕ್ಕೆ ಸಾಕ್ಷಿಯಾಗಲಿದೆ.
ವಂಶಪಾರಂಪರ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ಮುಂದಿದೆ. ಕಾಂಗ್ರೆಸ್
ಎಂಪಿಯಾಗಿರುವ ಅಭಿಜಿತ್ ಮುಖರ್ಜಿ ಪುನಃ ಆಯ್ಕೆ ಬಯಸಿ ತಮ್ಮ ಎಂದಿನ ಜಂಗಿಪುರ್ ಲೋಕಸಭ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಉತ್ತರಪ್ರದೇಶದ ಅಮೇಥಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಹುಲ್ ಅವರ ತಾಯಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
ನೆಹರು ಕುಟುಂಬದ ಮತ್ತೊಬ್ಬ ಸೊಸೆ, ಮಧ್ಯಪ್ರದೇಶದ ಹಾಲಿ ಎಂಪಿ ಬಿಜೆಪಿಯ ಮನೇಕಾ ಗಾಂಧಿ ಅವರನ್ನು ಬಿಜೆಪಿ ಮಧ್ಯಪ್ರದೇಶದ ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ. ಮನೇಕಾ ಅವರ ಪುತ್ರ ವರುಣ್ ಗಾಂಧಿ ಬಿಜೆಪಿ ಅಭ್ಯರ್ಥಿಯಾಗಿ ಸುಲ್ತಾನ್ ಪುರ್ ಕ್ಷೇತ್ರದಿಂದ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ವಿತ್ತಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಕೂಡ ಚುನಾವಣಾ ಅಖಾಡಕ್ಕಿಳಿದಿದ್ದು, ತಮ್ಮ ತಂದೆ ಪಿ.ಚಿದಂಬರಂ ಪ್ರತಿನಿಧಿಸುತ್ತಿದ್ದ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಮೊದಲ ಚುನಾವಣೆ.
ಬಿಜೆಪಿಯ ಹಿರಿಯ ಮುಖಂಡರಲ್ಲೊಬ್ಬರಾದ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾರ ಪುತ್ರ ಜಯಂತ್ ಜಾರ್ಖಂಡ್ ನ ಹಝಾರಿಭಾಗ್ ಲೋಕಸಭಾ ಕ್ಶೇತ್ರದಿಂದ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ನ ಹಲವಾರು ಮುಖಂಡರ ಮಕ್ಕಳು ಈ ಸಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ದಿ.ಮಾಧವ ರಾವ್ ಸಿಂಧಿಯಾ ಪುತ್ರ, ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ. ಅದೆ ರೀತಿ ದಿ.ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್ ರಾಜಸ್ಥಾನದ ಆಜ್ಮೀರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿನ್ ಪೈಲಟ್ ಪ್ರಸ್ತುತ ಮಂತ್ರಿಮಂಡಲದಲ್ಲಿ ಕಾರ್ಪೋರೇಟ್ ವ್ಯವ್ಯಹಾರಗಳ ಸಚಿವರಾಗಿದ್ದಾರೆ.
ದಿ.ಜಿತೇಂದ್ರ ಪ್ರಸಾದರ ಪುತ್ರ ಜಿತಿನ್ ಪ್ರಸಾದ್, ಉತ್ತರಪ್ರದೇಶದ ಧೌರಾಹ್ರ ಲೋಕಸಭಾ ಕ್ಷೇತ್ರದಿಂದ ಮರುಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಮುಖಂಡ ಮುರಳಿ ದಿಯೋರಾರ ಪುತ್ರ ಮಿಲಿಂದ್ ದಿಯೋರ ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತರ ಪುತ್ರ ಸಂದೀಪ್ ಪೂರ್ವ ದೆಹಲಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ, ಸಂದೀಪ್ ಕೂಡ ಪ್ರಸ್ತುತ ಎಂಪಿಯಾಗಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಪುತ್ರ ದೀಪೇಂದರ್, ರೋಹಟಕ್ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿದ್ದಾರೆ. ದೀಪೇಂದರ್ ಕೂಡ ಹಾಲಿ ಎಂಪಿ.
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೊಯ್ ಪುತ್ರ ಗೌರವ್ ಕಾಲಿಯಬೋರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಪುತ್ರ ಅಭಿಷೇಕ್ ರಾಜ್ ನಂದಗಾವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


