ಈಗಿನ ಸುದ್ದಿ

ತೀರ್ಥಯಾತ್ರೆಗೆ ಮೋದಿ ಪತ್ನಿ, ಪತಿ ಪ್ರಧಾನಿಯಾಗಲೆಂದು ಹರಕೆ

ತೀರ್ಥಯಾತ್ರೆಗೆ ಮೋದಿ ಪತ್ನಿ, ಪತಿ ಪ್ರಧಾನಿಯಾಗಲೆಂದು ಹರಕೆ
Published On :

ಉಂಜಾ(ಗುಜರಾತ್): 'ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ನನಗೂ ಒಬ್ಬಳು ಹೆಂಡ್ತಿ ಇದ್ದಾಳೆ. ಆಕೆಯ ಹೆಸರು ಜಶೋದಾಬೇನ್‌' ಎಂದು ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದಂತೆ, ಒಬ್ಬ ಸಾಮಾನ್ಯ ನಿವೃತ್ತ ಶಾಲಾ ಶಿಕ್ಷಕಿಯಾಗಿ ಜೀವನ ಸಾಗಿಸುತ್ತಿದ್ದ ಮೋದಿ ಪತ್ನಿ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ವಡೋದರಾದಲ್ಲಿ ಬುಧವಾರ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮೊದಲ ಬಾರಿಗೆ ಮೋದಿ ತಾವು ಮದುವೆಯಾಗಿರುವುದಾಗಿ ಒಪ್ಪಿಕೊಂಡ ನಂತರ, ಮೋದಿ ಮದ್ವೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಾಧ್ಯಮಗಳು ಜಶೋದಾಬೇನ್ ಬೆನ್ನು ಬಿದ್ದಿವೆ. ಆದರೆ ಮೋದಿ ಪತ್ನಿಯ ಹೆಸರು ಬಹಿರಂಗಪಡಿಸುತ್ತಿದ್ದಂತೆ ಜಶೋದಾಬೇನ್ ನಾಪತ್ತೆಯಾಗಿದ್ದು, ಕುಟುಂಬದ ಸದಸ್ಯರು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವರು ಮಾಧ್ಯಮದಿಂದ ತಪ್ಪಿಸಿಕೊಳ್ಳಲು ಜಶೋದಾಬೇನ್ ಅವರನ್ನು 40 ಮಹಿಳೆಯರೊಂದಿಗೆ 'ಚಾರ್ ಧಾಮ್‌' ತೀರ್ಥಯಾತ್ರೆಗೆ ಕಳುಹಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ನಾನು ಅವರಿಂದ(ಮೋದಿಯಿಂದ) ಏನನ್ನು ಬಯಸುವುದಿಲ್ಲ. ಆದರೆ ಅವರು ನನ್ನನ್ನು ಪತ್ನಿ ಎಂದು ಒಂದು ಸಲ ಒಪ್ಪಿಕೊಂಡರೆ ಸಾಕು ಎಂದು ಕೆಲಸದಿಂದ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ 62 ವರ್ಷದ ಜಶೋದಾಬೇನ್ ತಮ್ಮ ಸಹೋದ್ಯೋಗಿಗಳೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚಿಗೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಅವರು ಪ್ರಧಾನಿಯಾಗಲಿ ಎಂದು ಹಾರೈಸಿ ಕೆಲವು ತಿಂಗಳಿಂದ ಅನ್ನ ತಿನ್ನುವುದನ್ನು ಮತ್ತು ಚಪ್ಪಲಿ ಹಾಕುವುದನ್ನೇ ಬಿಟ್ಟಿದ್ದಾರೆ ಎಂದು ಅವರ ಹತ್ತಿರದ ಸಂಬಂಧಿಗಳು ಹೇಳುತ್ತಿದ್ದಾರೆ.

'ಅವಳ ಪ್ರಾರ್ಥನೆಯ ಫಲದಿಂದಲೋ ಏನೋ ಈಗ ಮೋದಿ ಬಹಿರಂಗವಾಗಿ ಜಶೋದಾಬೇನ್ ತಮ್ಮ ಪತ್ನಿ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ಈಗ ನಾವೇಲ್ಲರೂ ಸೇರಿ ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ' ಎಂದು ಜಶೋದಾಬೇನ್ ಅವರ ಕಿರಿಯ ಸಹೋದರ ಕಮಲೇಶ್ ಮೋದಿ ಹೇಳಿದ್ದಾರೆ. ಕಮಲೇಶ್ ಮೋದಿ ಅವರು ಉಂಜಾದಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದಾರೆ.

45 ವರ್ಷಗಳ ಹಿಂದೆ ಮೋದಿ ಜಶೋದಾಬೇನ್ ಅವರನ್ನು ಬಿಟ್ಟು ಹೋದ ನಂತರ ತಮ್ಮ ಸಹೋದರಿ ಯಾವತ್ತು ಮರು ಮದುವೆಯ ಬಗ್ಗೆ ಯೋಚಿಸಲಿಲ್ಲ ಎಂದು ಕಮಲೇಶ್ ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.