ಈಗಿನ ಸುದ್ದಿ

ಮಾರ್ಕ್ವೆಜ್ ಮಾಯಾ ಲೋಕದಲ್ಲಿ

ಮಾರ್ಕ್ವೆಜ್ ಮಾಯಾ ಲೋಕದಲ್ಲಿ
Published On :

ಶತಮಾನದ ಅದ್ಭುತ ಕಾದಂಬರಿಕಾರ, 'ಮ್ಯಾಜಿಕ್ ರಿಯಲಿಸಂ' ನ ಹರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಇನ್ನಿಲ್ಲ.

ತನ್ನ ೮೭ ನೇ ವಯಸ್ಸಿನಲ್ಲಿ ಮೆಕ್ಸಿಕೋ ದಲ್ಲಿ ಗುರುವಾರ ತೀರಿಕೊಂಡ ಮಾರ್ಕ್ವೆಜ್ ಹಲವಾರು ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು, ಆತ್ಮಕಥೆಯನ್ನು ಬರೆದು  ೧೯೮೨ ರಲ್ಲಿ 'one hundred years of  solitude' ಕಾದಂಬರಿಗೆ ನೊಬೆಲ್ ಪ್ರಶಸ್ತಿ ಪಡೆದಿದ್ದ. ಬರೆಯುತ್ತಾ ಬದುಕಿದ, ಬರೆದು ಸಂಭ್ರಮಿಸಿದ ಮಾರ್ಕ್ವೆಜ್ ನನ್ನು ಕನ್ನಡಿಗರು ಕೂಡಾ ಮರೆಯಲು ಸಾಧ್ಯವಿಲ್ಲ.

ಕನ್ನಡದ ಪ್ರಮುಖ ಕಥೆಗಾರರಾದ ಎಸ್. ದಿವಾಕರ್ ಮೊಟ್ಟ ಮೊದಲ ಬಾರಿಗೆ ಮಾರ್ಕ್ವೆಜ್ ನನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಮತ್ತು 'ಮಾಯಾ ವಾಸ್ತವಿಕತೆ' ಎಂಬ ಕನ್ನಡ ಪದವನ್ನು ಕೊಟ್ಟಿದ್ದು. ಈ ಮೂಲಕ ಮಾರ್ಕ್ವೆಜ್ ನ 'ಮ್ಯಾಜಿಕ್ ರಿಯಲಿಸಂ' ಕನ್ನಡಿಗರ ಕಣ್ಣಿಗೆ ಬಿತ್ತು. ನಂತರ ಮಾರ್ಕ್ವೆಜ್ ನ ಪ್ರಭಾವಕ್ಕೊಳಗಾಗಿ ಕನ್ನಡದ ಅನೇಕ ಕಥೆಗಳು ಬಂದವು.

ಕನ್ನಡಕ್ಕೆ ಮಾರ್ಕ್ವೆಜ್ ನ ಬರಹಗಳನ್ನು ಅನುವಾದಿಸಿದವರಲ್ಲಿ ಪ್ರಮುಖವಾಗಿ - ಎಲ್ ಎಸ್ ಶೇಷಗಿರಿರಾವ್ ( chronicle of a death foretold - ಒಂದು ಸಾವಿನ ವೃತ್ತಾಂತ- ಕಾದಂಬರಿ ), ಎ ಎನ್ ಪ್ರಸನ್ನ (one hundred years of  solitude - ನೂರು ವರುಷಗಳ ಏಕಾಂತ- ಕಾದಂಬರಿ), ನರಹಳ್ಳಿ ಬಾಲಸುಬ್ರಮಣ್ಯ, ಜಿ ಎನ್ ರಂಗನಾಥ ರಾವ್, ಉಮಾ ರಾವ್ ಮತ್ತು ಎಸ್ ದಿವಾಕರ್ ಪ್ರಮುಖರು.

'ಯಶಸ್ವೀ ಲೇಖಕರಿಗಾಗಿ ಸಿದ್ಧವಿಲ್ಲದ ಒಂದು ಭೂ ಖಂಡದಲ್ಲಿ, ಸಾಹಿತ್ಯಿಕ ಯಶಸ್ಸಿನ ಪರಿಚಯವಿಲ್ಲದ ಒಬ್ಬ ಲೇಖಕನ ಕೃತಿಗಳು ಬಿಸಿ ಕೇಕುಗಳಂತೆ ಮಾರಾಟವಾಗುವುದಕ್ಕಿಂತ ಕೆಟ್ಟದ್ದು ಅವನಿಗೆ ಬೇರೊಂದಿಲ್ಲ. ಆ ರೀತಿಯ ಸಾರ್ವಜನಿಕ ಪ್ರದರ್ಶನ ನನಗೆ ಅಸಹ್ಯ ತರುತ್ತದೆ. ಟೆಲಿವಿಶನ್, ಸಮ್ಮೇಳನಗಳು, ಕಾನ್ಫರೆನ್ಸ್ ಗಳು.,ದುಂಡು ಮೇಜಿನ ಗೋಷ್ಟಿಗಳು ಎಲ್ಲವನ್ನೂ ನಾನು ದ್ವೇಷಿಸುತ್ತೇನೆ' (ಕೃಪೆ: ಉಮಾ ರಾವ್ ಅನುವಾದಿಸಿದ ಮಾರ್ಕ್ವೆಜ್ ನ ಸಂದರ್ಶನ) ಎಂದಿದ್ದ ಮಾರ್ಕ್ವೆಜ್ ನನ್ನು ಮತ್ತೆ ಓದೋಣ. ಫೇಸ್ಬುಕ್ ಇತ್ಯಾದಿ ಸಾರ್ವಜನಿಕ ಪ್ರದರ್ಶನಗಳ ಲೋಕದಲ್ಲಿ ಮುಳುಗಿರುವ ನಾವು ಮಾರ್ಕ್ವೆಜ್ ನ 'ಮಾಯಾಲೋಕ' ಮತ್ತೊಮ್ಮೆ ಪ್ರವೇಶಿಸುವುದೇ ಅವನಿಗೆ ತೋರಬಹುದಾದ ಶ್ರದ್ಧಾಂಜಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.