ಒಬ್ಬ ವ್ಯಕ್ತಿಯ ಕೈಗೆ ಎಲ್ಲಾ ಅಧಿಕಾರ ನೀಡುವುದು ಅಪಾಯ: ಪ್ರಿಯಾಂಕಾ

ರಾಯ್ಬರೇಲಿ: ನಿನ್ನೆಯಷ್ಟೆ ತಮ್ಮ ಪತಿ ರಾಬಟ್ ವಾದ್ರಾ ಮೇಲೆ ಬಿಜೆಪಿ ನಡೆಸುತ್ತಿರುವ ವೈಯಕ್ತಿಕ ವಾಗ್ದಾಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಿಯಾಂಕಾ ಗಾಂಧಿ, ಎಲ್ಲಾ ಅಧಿಕಾರವನ್ನು ಒಬ್ಬ ವ್ಯಕ್ತಿಯ ಕೈಗೆ ನೀಡುವುದು ತುಂಬಾ ಅಪಾಯಕಾರಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಇಂದು ಪರೋಕ್ಷ ವಾಗ್ದಾಳಿ ನಡೆಸಿದರು.
ಎರಡನೇ ದಿನವೂ ತಮ್ಮ ತಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರ ರಾಯ್ಬರೇಲಿಯಲ್ಲಿ ಪ್ರಚಾರ ಮುಂದುವರೆಸಿರುವ ಪ್ರಿಯಾಂಕಾ, ಸೋನಿಯಾ ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನೀವು ಅವರಿಗಾಗಿ ಅಲ್ಲ, ದೇಶಕ್ಕಾಗಿ ಕಾಂಗ್ರೆಸ್ಗೆ ಮತ ಹಾಕಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಾತ್ಯತೀತಗೆ ಬದ್ಧವಾಗಿದೆ. ಆದರೆ ಪ್ರತಿಪಕ್ಷ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲು ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಮೋದಿಯ ಹೆಸರನ್ನು ಪ್ರಸ್ತಾಪಿಸದೆ, ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲಾಗುತ್ತಿದೆ ಮತ್ತು ಎಲ್ಲಾ ಅಧಿಕಾರಗಳನ್ನು ಅವರಿಗೆ ನೀಡಲಾಗಿದೆ. ಎಲ್ಲಾ ಅಧಿಕಾರವನ್ನು ಒಬ್ಬ ವ್ಯಕ್ತಿಗೆ ನೀಡುವುದು ಎಷ್ಟು ಸರಿ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಹಿಳೆ ವಿರುದ್ಧದ ಮೋದಿ ಗೂಢಚಾರಿಕೆಯನ್ನು ಪ್ರಸ್ತಾಪಿಸಿದ ಪ್ರಿಯಾಂಕಾ, ಕೆಲವು ನಾಯಕರು ಮಹಿಳೆಯರ ದೂರವಾಣಿಯನ್ನು ಕದ್ದಾಲಿಸುತ್ತಾರೆ. ಇದೇನಾ ನೀವು ಮಹಿಳೆಯರಿಗೆ ನೀಡುವ ಅಧಿಕಾರ? ಇಂತಹ ರಾಜಕಾರಣಿಗಳನ್ನು ನೀವು ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ನನ್ನ ಕುಟುಂಬ, ಗಂಡನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಪತಿಯ ವಿರುದ್ಧ ಸಾಕಷ್ಟು ಆರೋಪ ಮಾಡಲಾಗುತ್ತಿದೆ. ಇದರಿಂದ ನನಗೆ ನೋವಾಗಿದೆ ನಿಜ. ಹಾಗಂತ ನಾನು ಹೆದರುವವಳಲ್ಲ. ವಿರೋಧಿಗಳು ತೇಜೋವಧೆಗೆ ಎಷ್ಟು ಪ್ರಯತ್ನಿಸುತ್ತಾರೋ ಅಷ್ಟೇ ನಾನು ಬಲಿಷ್ಠವಾಗುತ್ತಾ ಹೋಗುತ್ತೇನೆ. ಇಂಥ ಆರೋಪಗಳನ್ನೆಲ್ಲ ಹೇಗೆ ಎದುರಿಸಬೇಕೆಂಬುದನ್ನು ನನ್ನ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಕಲಿತಿದ್ದೇನೆ ಎಂದು ಪ್ರಿಯಾಂಕಾ ನಿನ್ನೆ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


