ಕಪ್ಪುಹಣ: ಸುಪ್ರೀಂಗೆ 26 ಖಾತೆದಾರರ ವರದಿ ನೀಡಿದ ಕೇಂದ್ರ

ನವದೆಹಲಿ: ಸ್ವಿಸ್ಬ್ಯಾಂಕ್ನಲ್ಲಿ ಕಪ್ಪು ಹಣ ಇಟ್ಟಿರುವ ದೇಶದ ಒಟ್ಟು 26 ಮಂದಿ ಖಾತೆದಾರರ ಹೆಸರನ್ನು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ಗೆ ನೀಡಿದೆ.
ವಿದೇಶದಲ್ಲಿರುವ ಕಪ್ಪು ಹಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್ಗೆ 26 ಖಾತೆದಾರರ ಹೆಸರನ್ನು ಎರಡು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಕಪ್ಪು ಹಣದ ತನಿಖೆಗೆ ವಿಶೇಷ ತಂಡ ರಚಿಸುವ ಸುಪ್ರೀಂಕೋರ್ಟ್ನ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಕಪ್ಪು ಹಣದ ತನಿಖೆಗೆ ಎಸ್ಐಟಿ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಇದನ್ನು ನಯವಾಗಿ ತಿರಸ್ಕರಿಸಿರುವ ಕೇಂದ್ರ ಸರ್ಕಾರ ತನಿಖೆಗೆ ಯಾವುದೇ ವಿಶೇಷ ತಂಡ ರಚನೆ ಮಾಡುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ ಜರ್ಮನಿ ಬ್ಯಾಂಕ್ನ ಮಾಹಿತಿ ಆಧಾರದ ಮೇಲೆ ಸುಪ್ರೀಂಗೆ ವರದಿ ಸಲ್ಲಿಸಿದ್ದು, ಇದರಲ್ಲಿ 26 ಖಾತೆದಾರರ ಹೆಸರನ್ನು ಉಲ್ಲೇಖಿಸಿದೆ. ಈ 26 ಮಂದಿಯ ಪೈಕಿ 18 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಇದರಲ್ಲಿ ಓರ್ವ ಈಗಾಗಲೇ ಮೃತಪಟ್ಟಿರುವುದಾಗಿ ಹೇಳಿದೆ. ಇನ್ನುಳಿದಂತೆ 8 ಜನರ ಬಳಿ ಕಪ್ಪು ಹಣ ಇರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕೇಂದ್ರ ಸರ್ಕಾರದ ವರದಿಯನ್ವಯ 18 ಖಾತೆದಾರರ ಹೆಸರನ್ನು ಬಹಿರಂಗ ಪಡಿಸಿದ್ದು, ಇದರಲ್ಲಿ ಅಂಬ್ರುನೋವಾ ಟ್ರಸ್ಟ್ನ ಟ್ರಸ್ಟಿಗಳಾದ ದುಪೇಲಿಯಾ ಕುಟುಂಬದ ಐವರು, ಮನಿಚಿ ಟ್ರಸ್ಟ್ನ ನಾಲ್ವರು, ರುವಿಶಾ ಟ್ರಸ್ಟ್ನ ನಾಲ್ವರು, ಕೆಎಂ ಮಮೇನ್ ಆಫ್ ವೆಬ್ಸ್ಟರ್ ಫೌಂಡೆಷನ್ ಹಾಗೂ ಇತರರು ಸೇರಿ ಒಟ್ಟು ನಾಲ್ಕು ಖಾತೆದಾರರ ಹೆಸರು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ ಮೃತ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಅವರ ಹೆಸರು ಪಟ್ಟಿಯಲ್ಲಿದೆ.
ಪ್ರಕರಣದ ವಿಚಾರಣೆಯನ್ನು ಮೇ 1ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


