ಈಗಿನ ಸುದ್ದಿ

ನ್ಯಾಷನಲ್ ಹೆರಾಲ್ಡ್ ವಿವಾದ: ಸೋನಿಯಾ, ರಾಹುಲ್‌ಗೆ ನಿರಾಳ

ನ್ಯಾಷನಲ್ ಹೆರಾಲ್ಡ್ ವಿವಾದ: ಸೋನಿಯಾ, ರಾಹುಲ್‌ಗೆ ನಿರಾಳ
Published On :

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೊಂಚ ರಿಲೀಫ್ ಸಿಕ್ಕಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಲೀಕತ್ವ ಹಸ್ತಾಂತರ ಪ್ರಕರಣದಲ್ಲಿ ಹಣ ದುರ್ಬಳಕೆ ಮತ್ತು ವಂಚನೆ ಆರೋಪದ ವಿಚಾರಣೆಗೆ ಹಾಜರಾಗುವಂತೆ ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಮೂರ್ತಿ ಗೋಮತಿ ಮನೋಚಾ ಅವರು ಸಮನ್ಸ್ ಜಾರಿಗೊಳಿಸಿದ್ದು, ಆಗಸ್ಟ್ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಕೆಳಹಂತ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕೆಳಹಂತದ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಆಗಸ್ಟ್ 7ರೊಳಗೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ಪಟಿಯಾಲ ಕೋರ್ಟ್ ಸಮನ್ಸ್ ನೀಡಿತ್ತು. ಈ ಸಮನ್ಸ್‌ಗೆ ದೆಹಲಿ ಹೈಕೋರ್ಟ್ ಆ. 13ರವರೆಗೆ ತಡೆ ನೀಡಿದ್ದು, ಇದರಿಂದಾಗಿ ನಾಳೆ ಕೆಳಹಂತದ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಬೇಕಿದ್ದ ಸೋನಿಯಾ ಹಾಗೂ ರಾಹುಲ್‌ಗೆ ವಿನಾಯಿತಿ ಸಿಕ್ಕಿದೆ.

ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಲ್ಲದೆ, ಆಸ್ಕರ್ ಫರ್ನಾಂಡಿಸ್, ಮೊತಿಲಾಲ್ ವೊರಾ ಮತ್ತು ಸ್ಯಾಮ್ ಪಿತ್ರೋಡ್ ಸೇರಿದಂತೆ ಇತರೆ ಐವರು ಕಾಂಗ್ರೆಸ್ ನಾಯಕರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.

ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್‌' ಪತ್ರಿಕೆಗೆ ಸೇರಿದ ಸುಮಾರ 1,600 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿ ಪಟಿಯಾಲ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

''ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‌ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ,'' ಎಂದು ಸ್ವಾಮಿ ದೂರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.