ಈಗಿನ ಸುದ್ದಿ

ಕೆಪಿಎಸ್ಸಿ ಆಯ್ಕೆ ಪಟ್ಟಿ ರದ್ದು

ಕೆಪಿಎಸ್ಸಿ ಆಯ್ಕೆ ಪಟ್ಟಿ ರದ್ದು
Published On :

ಕ.ಪ್ರ.ವಾರ್ತೆ ಬೆಂಗಳೂರು ಆ.7
ಭ್ರಷ್ಟಾಚಾರ ಸಾಬೀತುಗೊಂಡ ಹಿನ್ನೆಲೆಯಲ್ಲಿ 2011ರಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆಗೊಂಡ 362 ರಾಜ್ಯ ಪತ್ರಾಂಕಿತ ಅಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿ ರದ್ದುಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಂತಿಮ ಪಟ್ಟಿ ರದ್ದುಗೊಳಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚಿಸಲಾಯಿತು. ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ತನ್ನ 26 ಸಂಪುಟಗಳ ವರದಿಯಲ್ಲಿ ಅಭಿಪ್ರಾಯಪಟ್ಟಿರುವುದರಿಂದ ಆಯ್ಕೆಗೊಂಡ 362 ಮಂದಿಯ ಅಂತಿಮ ಪಟ್ಟಿಯನ್ನು ರದ್ದುಗೊಳಿಸುವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬರಲಾಯಿತು.

ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸಂದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ ಈ ವಿಷಯ ತಿಳಿಸಿದ್ದು, ಇದೇ ಮೊದಲ ಬಾರಿಗೆ ಕೆಪಿಎಸ್‌ಸಿ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಐಡಿ ವರದಿ ನೀಡಿದೆ. ಈ ಬಗ್ಗೆ ಮರು ಮೌಲ್ಯಮಾಪನ ಅಥವಾ ಮರುಪರೀಕ್ಷೆ ನಡೆಸಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದ್ದರೂ, ಕೆಪಿಎಸ್‌ಸಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಕೆಪಿಎಸ್‌ಸಿ ಸದಸ್ಯರ ಮೇಲೂ ಕ್ರಿಮಿನಲ್ ಮೊಕದ್ದಮೆ ಹಾಕಲಾಗಿತ್ತು. ಇಷ್ಟೆಲ್ಲ ಬೆಳವಣಿಗಗಳು ಆದ ನಂತರ ಈ ಪಟ್ಟಿಯನ್ನು ಒಪ್ಪಿಕೊಳ್ಳುವುದು ತರವಲ್ಲ ಎಂದು ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ್ದರಿಂದ ಅಂತಿಮ ಪಟ್ಟಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಹೊಸ ನೇಮಕ ಪ್ರಕ್ರಿಯೆ ನಡೆಸಲಾಗುವುದು. ಆಗ 2011ರಲ್ಲಿ ಪರೀಕ್ಷೆ ಬರೆದ 1 ಲಕ್ಷ ಅಭ್ಯರ್ಥಿಗಳಿಗೆ ವಯೋ ಮಿತಿಯಲ್ಲಿ ಸಡಿಲಿಕೆ ಮಾಡುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಸಂಬಂಧ ಸಂಪುಟ ಸಭೆಯಲ್ಲಿ 3 ಬಾರಿ ಚರ್ಚೆ ನಡೆದಿತ್ತು ಎಂದರು.

ಸರ್ಕಾರದ ನಿರ್ಧಾರ ದುರದೃಷ್ಟಕರ. ರೈತ, ಹಿಂದುಳಿದವರ ಪರ ಎನ್ನುವ ಸರ್ಕಾರದ ನಿಜ ಬಣ್ಣ ಬಯಲಾಗಿದೆ. ಗಣ್ಯರ ಮಕ್ಕಳು ಎಸಿ ಕಾರಿನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ಕೆಟ್ಟ ನಿರ್ಧಾರ ಮಾಡಿದೆ. ಮುಂದಿನ ಹೋರಾಟದ ಬಗ್ಗೆ ಶೀಘ್ರ ಸಂಘಟನೆಗಳೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ.
-ಪುಟ್ಟಣ್ಣಯ್ಯ, ರೈತ ಹೋರಾಟಗಾರ

ಪ್ರತಿಭಾನ್ವಿತರಿಗೆ ಅನ್ಯಾಯವಾಗಿದೆ. ತಪ್ಪು ಮಾಡಿದವರನ್ನು ಶಿಕ್ಷಿಸುವುದು ಬಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಶಿಕ್ಷೆ ವಿಧಿಸಿರುವುದು ದುರಂತ. ಈ ನಿರ್ಧಾರ ವಾಪಸ್ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳ ಪರ ನ್ಯಾಯಾಂಗ ಸಮರಕ್ಕೆ ನಾವು ಸಾಥ್ ನೀಡುತ್ತೇವೆ. ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳದಿದ್ದರೆ ಹೋರಾಟ ನಡೆಸುತ್ತೇವೆ.
-ಸಿ.ಟಿ ರವಿ, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.