ಈಗಿನ ಸುದ್ದಿ

ಉಪ್ಪಿ ಮೇಲೆ ಚಂದ್ರು ಬ್ರಹ್ಮಾಸ್ತ್ರ

ಉಪ್ಪಿ ಮೇಲೆ ಚಂದ್ರು ಬ್ರಹ್ಮಾಸ್ತ್ರ
Published On :

ಚಿತ್ರ ಬ್ರಹ್ಮರ ಬಹುನಿರೀಕ್ಷಿತ ಚಿತ್ರ ಬ್ರಹ್ಮ. ಚಂದ್ರು ಅವರ ಯಶಸ್ಸಿನ ಹಣೆಬರಹವನ್ನು ಮುಂದುವರಿಸುವುದೇ ಎಂದು ಚಿತ್ರ ನೋಡಿದಾಗ ಇಷ್ಟವಾಗುವುದು ಚಿತ್ರದ ಕ್ಲೈಮಾಕ್ಸ್. ಅಂತಿಮ ಹತ್ತು ನಿಮಿಷಗಳ 'ಮತ್ತು' ಇಡೀ ಚಿತ್ರದಲ್ಲಿದ್ದರೆ ಎಷ್ಟು ಸೊಗಸಿತ್ತು ಎನ್ನಿಸದೇ ಇರದು. ಕಡೆಯ ಕ್ಷಣಗಳಲ್ಲಿ ನಶೆ ಹೊತ್ತಿಸುವ ಚಂದ್ರು ಮೊದಲಾರ್ಧದಲ್ಲಿ ನಿಶೆಯಲ್ಲಿ  ಮುಳುಗಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಲ್ಲಿನ ಗೊಂದಲಕ್ಕೆ ಕಥೆಯಲ್ಲಿ ಕ್ರಮೇಣ ಏರಬೇಕಾದ ಕಾವಿಲ್ಲದಿರುವುದು ಕಾರಣ.

ಸಿಂಪಲ್ಲಾಗ್ ಹೇಳೋದಾದ್ರೆ ಒಂದು ಒಳ್ಳೆಯ ಕೆಲಸ ಮಾಡಲು ಸಾವಿರ ಜನರ ಕೊಲೆ ಮಾಡುವ ಬ್ರಹ್ಮ, ಇವನನ್ನು ಪ್ರೀತಿ ಮಾಡಲು ನಾಯಕಿ, ಚೇಸ್ ಮಾಡಲು ಪೊಲೀಸ್, ಕಾಮಿಡಿಗಾಗಿ ರಂಗಾಯಣ ರಘು, ಸಾಧು ಕೋಕಿಲ, ಇತಿಹಾಸ ಕೆದಕಲು ಒಂದು ಪುಟ್ಟ ಫ್ಲ್ಯಾಷ್ ಬ್ಯಾಕ್, ಮತ್ತು ಇವುಗಳನ್ನೆಲ್ಲ ಕಲಸಲು ರಿವರ್ಸ್ ಸ್ಕ್ರೀನ್ ಪ್ಲೇ. ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್ ಗಳಿವೆ. ಎರಡನೆ ಕ್ಲೈಮ್ಯಾಕ್ಸ್ ಉಪ್ಪಿ ರಾಜಕೀಯಕ್ಕೆ ಧುಮುಕುವುದಕ್ಕೆ ಜೋಪಾನವಾಗಿ ಸೋಪಾನ ಹಾಕಿದಂತಿದೆ. ಮೊದಲ ಕ್ನೈಮ್ಯಾಕ್ಸ್  ತೆಲುಗಿನ 'ಕಿಕ್' ಕೊಟ್ಟರೆ, ಎರಡನೇ ಕ್ಲೈಮ್ಯಾಕ್ಸ್ 'ಸೂಪರ್' ಎನಿಸುತ್ತದೆ. ಹೀಗೆ ಪ್ರೇಕ್ಷಕನಿಗೆ ಒಂದೇ ದಿಖಾವಿನಲ್ಲಿ ಹಲವು ಚಿತ್ರಗಳನ್ನು ಆಸಕ್ತಿಕರವಾಗಿ ತಲುಪಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಉಪ್ಪಿ ಎಂದಿನಂತೆ ಅಬ್ಬರಿಸಿ ಬೊಬ್ಬಿರಿವ ಪಾತ್ರದಲ್ಲಿ ಸಹಜವಾಗಿದ್ದಾರೆ. ಪ್ರಣೀತ ಅಭಿನಯದಲ್ಲಿ ವಿಶೇಷವಿಲ್ಲ. ಕಾಮಿಡಿ ಅಲ್ಲಲ್ಲಿ ಕಿಲಾಡಿತನ ತೋರಿಸಿದೆ. ಮಲೇಶಿಯಾದಲ್ಲಿ ಕುಣಿವಾಗ, ಹಾಡುಗಳ ಹಬ್ಬದಲ್ಲಿ ಕ್ಯಾಮರಾ ಕೆಲಸ ಚೆನ್ನ. ಶೇಖರ್ ಚಂದ್ರ ಮತ್ತು ಆರ್ ಚಂದ್ರು ಕಾಂಬಿನೇಶನ್ ಕ್ಲಿಕ್ ಆಗಿದೆ. ತಾಂತ್ರಿಕ ವರ್ಗದಲ್ಲಿ ತೇಜಸ್, ಜೈರಾಮ್ , ಭದ್ರಾವತಿ ರಾಮಚಂದ್ರ ಕೊಡುಗೆಯಿತ್ತಿದ್ದಾರೆ.  ವೇಗದಲ್ಲಿ ಹೋಗುವ ಎಲ್ಲ ಸಾಧ್ಯತೆ ಇದ್ದ ಚಿತ್ರಕತೆಗೆ  ಕೆ ಎಂ ಪ್ರಕಾಶ್ ರ ಸಂಕಲನ ಪೂರಕವಾಗಿಲ್ಲ. ಪರಭಾಷಾ ನಟರುಗಳಾದ ರಾಹುಲ್ ದೇವ್ , ಶಯಾಜಿ ಶಿಂಧೆ ಇಬ್ಬರಿಗೂ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಸಿಕ್ಕಿಲ್ಲ.

ನಾಯಕ ಉಪ್ಪಿ ಗೆ ಈ ಸಿನಿಮಾದಲ್ಲಿ ಸಿಕ್ಕಷ್ಟು ವಿಲನ್ ಗಳು, ಬಹುಷಃ ಅವರ ಯಾವ ಚಿತ್ರದಲ್ಲೂ ಸಿಕ್ಕಿಲ್ಲ. ಜೀಪಿನಲ್ಲಿ ಲಾಂಗುಗಳನ್ನು ಝಳಪಿಸಿಕೊಂಡು ಬರುವ ವಿಲನ್ ಗಳು, ಕುರ್ಚಿ, ಗಾಜು, ಮೇಜುಗಳು ಥ್ರಿಲ್ಲರ್ ಮಂಜು ಸಾಹಸದಲ್ಲಿ ಪುಡಿಪುಡಿಯಾಗಿವೆ. ಈ ರೀತಿಯಲ್ಲಿ  ತಮ್ಮ ಬ್ರಹ್ಮ ವಿದ್ಯೆಯನ್ನು ಥ್ರಿಲ್ಲರ್ ಪ್ರದರ್ಶಿಸಿದ್ದರೂ ಆ ಪುಡಿಗಳೆಲ್ಲ ಪ್ರೇಕ್ಷಕನಿಗೇ ನಾಟುವುದರಿಂದ ಅದರಿಂದ ಹೊರಗೆ ಬರುವುದು ಅಷ್ಟು ಸುಲಭವಾಗುವುದಿಲ್ಲ. ಉಪ್ಪಿಯ "ಲಾಂಗ್ ' ಜಂಪ್ ಅಭಿಮಾನಿಗಳ ಎದೆಯಲ್ಲಿ ಅಳಿಸದ ಮಾರ್ಕ್ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಂದ್ರು ಆಯುಧ ಪೋಸ್ಟರ್ ಗಳಲ್ಲಿ ರಾರಾಜಿಸಿದ್ದರೂ  ತೆರೆ ಮೇಲೆ ಕಾಣಿಸುವುದು ಎರಡೇ ನಿಮಿಷ ಮಾತ್ರ! ಆದರೂ ಚಂದ್ರು ಆಯುಧ ಅತಿ ತೀಕ್ಷ್ನವಾಗಿರುವುದರಿಂದ ಬ್ರಹ್ಮಾಸ್ತ್ರದಂತೆ ಬಳಸುವಲ್ಲಿ ಅಪಾರ ಯಶಸ್ಸು ಕಂಡಿದ್ದಾರೆ. ಆದರೆ ಚಿತ್ರಕತೆಯಲ್ಲಿ ಬಿಗಿ ಇಲ್ಲದೆ ಆಯುಧ ಆಗಾಗ ಹೊಳಪು ಕಳೆದುಕೊಳ್ಳುವುದು ಖರೆ.

ಚಿತ್ರಬ್ರಹ್ಮರ ನೆಚ್ಚಿನ ಚಂದ್ರು ಚಿತ್ರರಸಿಕರ ಪಾಲಿಗೆ ಬಾದ್ ಷಾ ಆಗುವ ಕಮರ್ಷಿಯಲ್ ಹೆಜ್ಜೆಯನ್ನು ಇಲ್ಲಿ ಗುರುತಿಸಬಹುದು. ಕತೆಯ ನಡುವೆ ಉಪ್ಪಿಯ ಬಾಯಲ್ಲಿ ಹೋಟೆಲೊಂದರ ಜಾಹಿರಾತನ್ನು ಕಮರ್ಷಿಯಲ್ ಆಗಿ ಹೇಳಿಸಿರುವ ಚಂದ್ರು ರ ವ್ಯಾಪಾರೀ ಮನೋಭಾವವನ್ನು ಮೆಚ್ಚಲೇಬೇಕು. ಆದರೆ ಚಿತ್ರಕತೆ ಎಂಬ ಹೋಂವರ್ಕ್ ಜತನದಿಂದ ಮಾಡುವ ಜರೂರತ್ತಂತೂ ಇದೆ ಎಂಬುದನ್ನು ಮರೆಯಬಾರದು. ೨ ಗಂಟೆ ೨೦ ನಿಮಿಷದ ಈ ಚಿತ್ರಕ್ಕೆ ಹಿನ್ನೆಲೆ  ಸಂಗೀತ ಬಹುದೊಡ್ಡ ಕೊರತೆ ಆಗಿದೆ. ಗುರುಕಿರಣ್ ತಮ್ಮ ಝಂಕಾರ್ ಬೀಟ್ಸ್ ಬಿಡದೆ ಮುಂದುವರಿಸಿದ್ದಾರೆ.

ಉಪ್ಪಿ ಮತ್ತು ಚಂದ್ರು ಜೋಡಿಯ ಈ ಚಿತ್ರ ಅನೇಕರಿಗೆ ಭ್ರಮನಿರಸನ ತಂದರೂ ಅವರ ಹಿಂದಿನ ಚಿತ್ರಗಳನ್ನು ಮೆಚ್ಚುವವರಿಗೆ ಕಿಚ್ಚು ಹತ್ತಿಸುವಲ್ಲಿ ಯಶಸ್ವಿಯಾಗಿದೆ.


- ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಂ ಗಾಗಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.