ಈಗಿನ ಸುದ್ದಿ

ಬಾಲು ಮಹೇಂದ್ರ ಇನ್ನಿಲ್ಲ

ಬಾಲು ಮಹೇಂದ್ರ ಇನ್ನಿಲ್ಲ
(20 May 1939 – 13 February 2014)
Published On :

ಚೆನ್ನೈ: ನೆನಪಿನ ಶಕ್ತಿ ಕಳೆದುಕೊಂಡ ನಾಯಕಿ, ಅವಳ ಆರೈಕೆಯಲ್ಲಿ ಮುಗ್ಧವಾಗಿ ಪ್ರೇಮಿಸುತ್ತ ಹೋಗುವ ನಾಯಕ.  ನಾಯಕಿ ಕೊನೆಗೆ ಅವನನ್ನೇ ಮರೆತು ಹೋದಾಗ ಪ್ರೇಕ್ಷಕನ ಎದೆಗೆ ದುಃಖ ಸಾಗರವನ್ನೇ ತಂದ ಚಿತ್ರ ಕಮಲ ಹಾಸನ್ ಶ್ರೀದೇವಿ ಅಭಿನಯದ - 'ಮೂನ್ರಾಮ್ ಪಿರೈ'.

ಈ ಚಿತ್ರದ ಕಥೆ, ನಿರ್ದೇಶನ, ಛಾಯಾಗ್ರಹಣಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದ ಬಾಲು ಮಹೇಂದ್ರ ಇನ್ನಿಲ್ಲ. ಕಥೆಯನ್ನು ದೃಶ್ಯಕಾವ್ಯದಂತೆ ಹೆಣೆಯುತ್ತಿದ್ದ ಒಬ್ಬ ದೃಶ್ಯ ಕವಿ ಈ ಮೂಲಕ ನಮ್ಮ ನಡುವಿಂದ ಅದೃಶ್ಯವಾಗಿದ್ದಾರೆ. ಛಾಯಾಗ್ರಹಕರಾಗಿ ಪ್ರಸಿದ್ಧರಾಗಿರುವ ಸಂತೋಷ್ ಶಿವನ್, ರವಿ ಕೆ ಚಂದ್ರನ್ ರಿಗೂ ಬಾಲು ಅವರ ಛಾಯಾಗ್ರಹಣ ಸ್ಪೂರ್ತಿ ನೀಡುತ್ತಿತ್ತು.

ಶ್ರೀಲಂಕಾದಲ್ಲಿ ಜನಿಸಿ, ಅಲ್ಲೇ ಬೆಳೆದ ಬಾಲನಾಥನ್ ಬೆಂಜಮಿನ್ ಮಹೇಂದ್ರನ್ ಅಪ್ಪ ಕೊಟ್ಟ ಪುಟ್ಟ ಕ್ಯಾಮರಾದ ಕಾರಣ ಫೋಟೋಗ್ರಫಿಯ ಹುಚ್ಚು ಬೆಳೆಸಿಕೊಂಡರು . ಲಂಡನ್ ಯೂನಿವರ್ಸಿಟಿ ಯಿಂದ ಡಿಗ್ರಿ ಪಡೆದ ಮೇಲೆ ಪುಣೆ ಫಿಲಂ ಇನ್ಸ್ಟಿಟ್ಯೂಟ್ ನಿಂದ ಸಿನಿಮಾಟೋಗ್ರಫಿ ಕೋರ್ಸ್ ಕಲಿತರು. ಚಿನ್ನದ ಪದಕ ಗೆದ್ದು ಕೋರ್ಸ್ ಮುಗಿಸಿದ ಬಾಲು ೧೯೭೧ರಲ್ಲಿ ಮಲಯಾಳಂ ಚಿತ್ರ ' ನೆಲ್ಲು ' ವಿನಿಂದ ತಮ್ಮ ಕೌಶಲ್ಯದ ಕಣ್ಣುಗಳನ್ನು ಜಗತ್ತಿಗೆ ಪರಿಚಯಿಸಿದರು.

ಬಾಲು ಮಹೇಂದ್ರ ಮೊತ್ತ ಮೊದಲ ಬಾರಿಗೆ ನಿರ್ದೇಶಕರಾಗಿದ್ದು 'ಕೋಕಿಲ' (೧೯೭೭) ಚಿತ್ರದಿಂದ. ಈ ಚಿತ್ರದಿಂದಲೇ ಕಮಲ ಹಾಸನ್ ರನ್ನು ಹೋಲುತ್ತಿದ್ದ ಕುಂದಾಪುರದ ಮೋಹನ್ 'ಕೋಕಿಲ ಮೋಹನ್ ' ಎಂದೇ ಪ್ರಸಿದ್ಧರಾದರು. ಬಾಲು ಅವರ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು.

ಸೀತಾ ಕೋಕು ಚಿಲಕ, ಶಂಕರಾಭರಣಂ, ಮನವೂರಿ ಸೇರಿದಂತೆ ಒಟ್ಟಾರೆ ೨೦ ಚಿತ್ರಗಳನ್ನು ನಿರ್ದೇಶಿಸಿದ್ದ ಬಾಲು ಮಹೇಂದ್ರ, ಮಣಿರತ್ನಂ ನಿರ್ದೇಶನದ ಪ್ರಥಮ ಚಿತ್ರ 'ಪಲ್ಲವಿ ಅನುಪಲ್ಲವಿ'ಯ ಛಾಯಾಗ್ರಹಣ ದಿಂದ ಚಿತ್ರಕ್ಕೆ ಹೊಸ ಜೀವಕಳೆ ತಂದಿದ್ದರು.ಮೂನ್ರಾಂ ಪಿರೈ ಚಿತ್ರವನ್ನು ೧೯೮೩ ರಲ್ಲಿ 'ಸದ್ಮಾ' ಹೆಸರಿನಲ್ಲಿ ಹಿಂದಿಯಲ್ಲಿಯೂ ನಿರ್ದೇಶಿಸಿದಾಗ ಬಾಲು ಅವರಿಗೆ ಬೆನ್ನೆಲುಬಾಗಿ ನಿಂತದ್ದು ಖ್ಯಾತ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಮತ್ತು ಗುಲ್ಜಾರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.