ಬೆಂಗಳೂರ್ ಹುಡುಗರನ್ನೇಕೆ ಮದ್ವೆ ಆಗ್ಬಾರ್ದು?

ಬೆಂಗಳೂರು ಹುಡುಗರು ನಿಜಕ್ಕೂ ಒಳ್ಳೆಯವರು. ಆದರೆ ಅವರನ್ನು ಹೆಚ್ಚಿನ ಸಲ ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಹೆಂಡತಿಯರು ಯಾವಾಗಲೂ ತಪ್ಪಾಗಿ ಅರ್ಥ ಮಾಡಿಕೊಳ್ಳುವುದಕ್ಕೇ ಫೇಮಸ್ಸಾಗಿರುವುದರಿಂದ ಇವರು ಒಳ್ಳೆಯವರಾಗಲು ಚಾನ್ಸೇ ಇಲ್ಲ. ಆದರೂ ಹುಡುಗಿಯರಿಗೆ ಬೆಂಗಳೂರಿನ ಹುಡುಗರಲ್ಲಿ ಇಷ್ಟವಾಗದ ಒಂದಷ್ಟು ಖರೇ ಸಂಗತಿಗಳಿವೆ. ಫೇಸ್ಬುಕ್ನಲ್ಲಿ ನಾವು ಈ ಪ್ರಶ್ನೆ ಕೇಳಿದಾಗ ನಮ್ಮ ಇ-ಮೇಲ್ಗೆ ಬಂದ ಕೆಲ ಪ್ರತಿಕ್ರಿಯೆಗಳನ್ನು ಬಳಸಿದ್ದೇವೆ, ಇಷ್ಟವಾಗಬಹುದು ನೋಡಿ.
- ಅವರಿಗೆ ಸಾಫ್ಟ್ವೇರ್ ಬಿಟ್ಟರೆ ಬೇರೆ ಗೊತ್ತಿಲ್ಲ.
- ಧಾರವಾಡಕ್ಕೆ ಹೋಗಿ ಕಲ್ಲೆಸೆದು ಬಂದವರು ಅದನ್ನೊಮ್ಮೆ ಇಲ್ಲೂ ಟೆಸ್ಟ್ ಮಾಡೋಣ ಅಂತ ಎಸೆದರೆ ಅದು ಇವರ ಮೇಲೇ ಬೀಳಬಹುದು.
- ನೀವು ಎಸ್ಎಂಎಸ್ ಕಳಿಸಿದ್ರೆ ನೋಡೋದಿಲ್ಲ. ಅವರು ಕಳಿಸಿದ್ರೆ ನೀವು ಟಪ್ ಅಂತ ನೋಡಿ ರಿಪ್ಲೈ ಮಾಡಬೇಕು. ಇಲ್ಲಾ ಅಂದ್ರೆ 'ಐಟಿ ಸಿಟಿಯಲ್ಲಿದ್ಕೊಂಡು ಇಷ್ಟು ಸ್ಲೋ!' ಅಂತ ರಾಗ ಎಳೀತಾರೆ.
- ಹೆಂಡತಿ ಯಾವಾಗ್ಲೂ ಹಾಟ್ ಆಗಿ ಕಾಣಬೇಕು. ಜೀನ್ಸ್ ಹಾಕಿಕೊಳ್ಳಬೇಕು, ಆದ್ರೆ ಟಾಪ್ ಮೇಲೆ ವೇಲ್ ಇರಬೇಕು. ಹಣೆಗೆ ಕುಂಕುಮ ಇರಲೇಬೇಕು. ಹಿಂಗಿದ್ದರೆ ತಾನು ಡಬ್ಬಾ ಥರಾ ಕಾಣ್ತಿದ್ದೀನಿ ಅಂತ ಅವಳಿಗೆ ಗೊತ್ತಿರುತ್ತದೆ. ಆದರೂ ಇವನಿಗೆ ಅದೇ ಚಂದ.
- ಶಾಪಿಂಗ್ ಮಾಡೋದು ಅಂದ್ರೆ ಇವರಿಗೆ ಮೊಬೈಲ್ ಮತ್ತು ಲ್ಯಾಪ್ಟಾಪ್ ತಗೊಳ್ಳೋದು ಮಾತ್ರ. ಅದನ್ನೂ ಇಂಟರ್ನೆಟ್ನಲ್ಲೇ ಇ್ಡಣ ಮಾಡ್ತಾರೆ!
- ಸ್ವಿಮ್ಮಿಂಗ್ ಕ್ಲಾಸಿಗೆ ಹೋಗ್ತೀನಿ, ಭರತನಾಟ್ಯ ಕಲೀತೀನಿ ಅಂದ್ರೂ 'ಆನ್ಲೈನ್ನಲ್ಲಿ ಕಲಿಯೋಕಾಗುತ್ತಾ?' ಅಂತ ಕೇಳ್ತಾರೆ.
- ಮನೇಲಿ ರುಚಿಯಾಗಿ ಏನು ಮಾಡಿದ್ರೂ ಒಂದೇ ಒಂದು ಕಾಂಪ್ಲಿಮೆಂಟ್ ಹೇಳದೆ ತಿನ್ನುತ್ತಾರೆ. ಎಂಟಿಆರ್ನಿಂದ ತಂದಿದ್ದು ಅಂದ್ರೆ, ಸೂಪರ್ರಾಗಿದೆ ಅಂತಾರೆ!
- ಲಕ್ಷಾಂತರ ರುಪಾಯಿ ಸಂಬಳ ಬರೋದ್ರಿಂದ ಹೆಂಡತಿಯರನ್ನು ಕೆಲಸಕ್ಕೆ ಕಳಿಸೋದಿಲ್ಲ. ಕಳಿಸಿದ್ರೂ, ಆಫೀಸ್ 'ಅವರ್'ನಲ್ಲಿ ಸದಾ ಆನ್ಲೈನ್ನಲ್ಲಿರಬೇಕು ಅಂತ ಕಂಡೀಶನ್ ಹಾಕ್ತಾರೆ.
- ಅವರ ಹತ್ರ ಕಾರಿರುತ್ತದೆ. ನೀವು ಬಿ.ಎಂ.ಟಿ.ಸಿ. ಬಸ್ನಲ್ಲೇ ಓಡಾಡಬೇಕು.
- ಜೀನ್ಸ್ ತಗೋಬೇಕು, ಚೂಡಿದಾರ್ ತಗೋಬೇಕು ಅಂದ್ರೂ ಜೊತೆಗೆ ಬರೋದಿಲ್ಲ. ಇಂಟರ್ನೆಟ್ನಲ್ಲಿ ತೋರಿಸಿ 'ಇದಾಗುತ್ತಾ?' ಎಂದು ಕೇಳ್ತಾರೆ.
- ಎಲ್ಲವನ್ನೂ ಕಂಪ್ಯೂಟರ್ನಲ್ಲೇ ಮಾಡುವುದರಿಂದ ಕನ್ನಡಕ ಗ್ಯಾರಂಟಿ.
- ಹೊಸ ಜೋಕ್ ಹೇಳಿ ಅಂದ್ರೆ ಗೂಗಲ್ನಲ್ಲಿ 'ಸಾಫ್ಟ್ವೇರ್ ಜೋಕ್ಸ್' ಅಂತ ಹುಡುಕ್ತಾರೆ.
- ಬೆಂಗಳೂರಿನ ರಸ್ತೆಗಳಲ್ಲಿ ಯಾವಾಗ್ಲೂ ಫ್ಲೈಓವರ್, ಮೆಟ್ರೋ, ಅಂಡರ್ಪಾಸ್ ಅಂತ ಏನಾದರೊಂದು ಕೆಲಸ ನಡೆಯುತ್ತಲೇ ಇರುತ್ತದೆ. ಶಾಪಿಂಗ್ ಕರೆದುಕೊಂಡು ಹೋಗದಿರುವುದಕ್ಕೆ ಗಂಡಂದಿರಿಗೆ ಇದು ಒಳ್ಳೆಯ ಎಕ್ಸ್ಕ್ಯೂಸ್!
- ಮದುವೆಯಾದ್ಮೇಲೆ ಓದ್ತೀನಿ ಅಂದ್ರೆ, ಆನ್ಲೈನ್ ಕೋರ್ಸ್ ಆದ್ರೆ ಮಾತ್ರ ಓಕೆ ಅಂತಾರೆ.
- ನಿಮ್ಮ ಎಲ್ಲಾ ಫ್ರೆಂಡ್ಗಳೂ (ಮುಖ್ಯವಾಗಿ ಹುಡುಗಿಯರು) ಅವರಿಗೆ ಫೇಸ್ಬುಕ್ನಲ್ಲಿ ಫ್ರೆಂಡ್ ಆಗಿರ್ತಾರೆ. ಮತ್ತು ಅವರ ಜೊತೆ ಚಾಟ್ ಮಾಡಿದ್ದನ್ನು ನಿಮಗೆ ಯಾವತ್ತೂ ಹೇಳೋದಿಲ್ಲ.
- ವೀಕೆಂಡ್ನಲ್ಲಾದ್ರೂ ಮನೇಲಿರ್ತಾರಾ ಅಂದ್ರೆ ಫ್ರೆಂಡ್ಸ್ ಜೊತೆ ಪಾರ್ಟಿಯಲ್ಲಿರ್ತಾರೆ.
- ಅವರಲ್ಲಿರುವ ಜೋಕ್ ಸಂಗ್ರಹ ತುಂಬಾ ಸಣ್ಣದು. ಹೇಳಿದ್ದನ್ನೇ ಪದೇ ಪದೇ ರಿಪೀಟ್ ಮಾಡ್ತಾರೆ. ಆದರೆ ಪ್ರತಿ ಸಲವೂ ನೀವು ನಗಬೇಕೆಂದು ಬಯಸ್ತಾರೆ.
- ಯಾವಾಗ್ಲೂ ನೀಟಾಗಿ ಡ್ರೆಸ್ ಮಾಡ್ಕೋತಾರೆ. ಆಫೀಸಿಂದ ಮನೆಗೆ ಬರುವಾಗ ಫುಟ್ಪಾತ್ನಲ್ಲಿ ಏನಾದ್ರೂ ತಿಂದ್ಕೊಂಡು ಬರ್ತಾರೆ. ಆದರೆ, ನೀವು ಗೋಲಗಪ್ಪ ತಿನ್ನಬೇಕು ಅಂದಾಗ 'ಫುಟ್ಪಾತ್ನಲ್ಲಿ ಮಾರೋದನ್ನು ತಿನ್ನುವುದು ಎಷ್ಟು ಅನ್ಹೈಜಿನಿಕ್!' ಅಂತ ಭಾಷಣ ಬಿಗೀತಾರೆ.
- ಎಲ್ಲದರ ಬಗ್ಗೆಯೂ ಅವರಿಗೊಂದು ಅಭಿಪ್ರಾಯವಿದೆ. ಅದು ಮಾತ್ರ ಸರಿಯಾದ ಅಭಿಪ್ರಾಯವೆಂದು ಅವರಿಗೆ ಬಹಳ ಮೊದಲಿನಿಂದಲೇ ಗೊತ್ತಿದೆ. ತಾವು ಯಾವಾಗಲೂ ಸರಿಯಾದ ನಿರ್ಧಾರವನ್ನೇ ಕೈಗೊಳ್ಳುತ್ತೇವೆಂಬುದರಲ್ಲಿ ಅವರಿಗೆ ಯಾವ ಸಂಶಯವೂ ಇಲ್ಲ.
- ನೀವು ಡ್ರೈವಿಂಗ್ ಕ್ಲಾಸಿಗೆ ಹೋಗಬಹುದು. ಆದರೆ ಅವರ ಹತ್ರ ಇರುವುದು ದುಬಾರಿ ಕಾರಾಗಿರುವುದರಿಂದ ಮತ್ತು 'ಹೆಂಗಸರಿಗೆ ರಿವರ್ಸ್ ತೆಗೆಯುವುದು ಗೊತ್ತಿಲ್ಲ' ಎಂಬ ದೃಢ ನಂಬಿಕೆ ಅವರಲ್ಲಿರುವುದರಿಂದ ನಿಮಗೆ ಕಾರು ಸಿಗುವುದಿಲ್ಲ.
- ಮನೇಲಿದ್ರೂ ಮಾತಾಡೋದಿಲ್ಲ, ಯಾವಾಗ್ಲೂ ಇಂಟರ್ನೆಟ್ನಲ್ಲಿ ಮುಳುಗಿರ್ತಾರೆ.
- ದಿನಾ ಆಫೀಸ್ನಿಂದ ಲೇಟಾಗಿ ಬಂದು 'ಸುಸ್ತಾಗಿದೆ' ಅಂತ ಮಲಕ್ಕೋತಾರೆ. ವೀಕೆಂಡ್ನಲ್ಲಿ ಪಾರ್ಟಿಯಿಂದ ಲೇಟಾಗಿ ಬಂದು ನಿದ್ದೆ ತಡೆಯೋದಕ್ಕಾಗದೆ ಮಲಕ್ಕೋತಾರೆ.
- ಒಂದು ಕಾಲದಲ್ಲಿ ಬೆಂಗಳೂರಿನವರು ಡಾಕ್ಟರ್ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಮಾತ್ರ ಆಗುತ್ತಿದ್ದರು. ಈಗ ಅದರಲ್ಲೇ ಪೋಸ್ಟ್ ಗ್ರಾಜುಯೇಟ್ ಆಗಿರ್ತಾರೆ. ಇನ್ನುಳಿದಿದ್ದೆಲ್ಲಾ ಸೇಮ್.
- ಮದುವೆಯಾದ ಮೇಲೂ ಮ್ಯಾಟ್ರಿಮೋನಿ ಸೈಟ್ಗಳಿಂದ ಪ್ರೊಫೈಲ್ ಡಿಲೀಟ್ ಮಾಡೋದಿಲ್ಲ.
- ಫೇಸ್ಬುಕ್ನಲ್ಲಿ ಸಿಂಗಲ್ ಸ್ಟೇಟಸ್ ತೆಗೆದು ಮ್ಯಾರೀಡ್ ಅಂತ ಅಪ್ಡೇಟ್ ಮಾಡಲು ನೆನಪಿಸಬೇಕು. ಇಲ್ಲಾ ಅಂದ್ರೆ ವರ್ಷ ಕಳೆದರೂ ಹಾಗೇ ಇರುತ್ತದೆ.
- ಕನ್ನಡ ಸರಿಯಾಗಿ ಗೊತ್ತಿಲ್ಲದೇ ಇರಬಹುದು, ಆದ್ರೆ ಕನ್ನಡದ ಸಮಸ್ತ ಬೈಗುಳಗಳೂ ಚೆನ್ನಾಗಿ ಗೊತ್ತಿರುತ್ತವೆ. ಹೆಂಡತಿಗೆ ಅದನ್ನು ಬಳಸದೇ ಇದ್ದರೂ ಅವಳ ಮುಂದೆ ಬೇರೆಯವರಿಗೆ ಬೈಯುವುದಕ್ಕಾದ್ರೂ ಬಳಸುತ್ತಾರೆ.
- ಕಂಪ್ಯೂಟರ್ನಲ್ಲಿ ಕೆಲಸ ಮಾಡ್ಬೇಕು ಅಂದ್ರೆ ಕುಳಿತುಕೊಂಡೇ ಇರಬೇಕಾಗುವುದರಿಂದ ಸೊಂಟ ಬಹಳ ದಿನ ಬಾಳಿಕೆ ಬರೋದಿಲ್ಲ.
- ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ. ಪ್ರತಿದಿನ ಬೆಳಿಗ್ಗೆ ಎಲ್ಲಾ ಟೀವಿ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳನ್ನೂ ತಪ್ಪದೇ ನೋಡ್ತಾರೆ. ತಮ್ಮ ಲ್ಯಾಪ್ಟಾಪ್ನಲ್ಲೂ ಕುಂಡಲಿ ಸಾಫ್ಟ್ವೇರ್ ಇಟ್ಟುಕೊಂಡಿರ್ತಾರೆ. ಆದ್ರೆ ಅವರಿಗೆ ಮೂಢನಂಬಿಕೆ ಅಂದ್ರೆ ಆಗೋದಿಲ್ಲ!
- ಸ್ಪೋರ್ಟ್ಸ್ ಅಂದ್ರೆ ಕ್ರಿಕೆಟ್ ಮಾತ್ರ. ಅದನ್ನೂ ಆಡುವುದಿಲ್ಲ. ಟೀವಿಯಲ್ಲಿ ಮಾತ್ರ ನೋಡ್ತಾರೆ.
- ಲ್ಯಾಪ್ಟಾಪನ್ನು ಯಾವಾಗ್ಲೂ ತೊಡೆ ಮೇಲಿಟ್ಟುಕೊಂಡರೆ ಮಕ್ಕಳಾಗೋದಿಲ್ಲ ಅಂತ ಕೆಲವು ಸಮೀಕ್ಷೆಗಳು ಹೇಳಿವೆ. ಲ್ಯಾಪ್ಟಾಪ್ ಬಳಸದ ಹುಡುಗರು ಬೆಂಗಳೂರಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದ.
- ಅವರು ಹಾಸಿಗೆ ಹಾಸೋದಿಲ್ಲ, ಬೆಳಿಗ್ಗೆ ಕಿಟಕಿ ಓಪನ್ ಮಾಡೋದಿಲ್ಲ ಅಥವಾ ಬೆಡ್ ಕಾಫಿ ಮಾಡೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸೊಳ್ಳೆ ಪರದೆ ಕಟ್ಟಲು ಹೆಲ್ಪ್ ಮಾಡೋದಿಲ್ಲ. ಇದು ಮದುವೆಯ ಮೂಲ ಉದ್ದೇಶವನ್ನೇ ಅಲ್ಲಾಡಿಸುತ್ತದೆ!
- ಮನೆಯಲ್ಲೇ ಕಂಪ್ಯೂಟರ್, ಇಂಟರ್ನೆಟ್, ಪ್ರಿಂಟರ್ ಎಲ್ಲಾ ಇದ್ರೂ ಮಕ್ಕಳಿಗೆ ಬೇಕಾದ ಸ್ಟಡಿ ಮಟೀರಿಯನ್ನೆಲ್ಲ ಆಫೀಸಿನಿಂದಲೇ ಪ್ರಿಂಟೌಟ್ ತೆಗೆದುಕೊಂಡು ಬರ್ತಾರೆ.
- ಯು.ಬಿ. ಸಿಟಿಯಲ್ಲಿ ಕಾರು ಪಾರ್ಕಿಂಗ್ ಮಾಡೋದಕ್ಕೆ ತಕರಾರಿಲ್ಲದೆ ಸಾವಿರ ರು. ನೋಟು ಕೊಡ್ತಾರೆ. ಕಟಿಂಗ್ ಷಾಪಲ್ಲಿ 50 ರು. ಜಾಸ್ತಿಯಾಯ್ತು ಅಂತ ಪ್ರತಿಸಲ ಜಗಳವಾಡ್ತಾರೆ.
- ಕಡ್ಡಾಯವಾಗಿ ಬಿಯರ್ ಕುಡೀತಾರೆ. ಆದರೆ ಎರಡು ಬಾಟಲ್ಗೇ ಚಿತ್ ಆಗ್ತಾರೆ. ಹುಡ್ಗೀರು ಬಿಯರ್ ಕುಡಿದ್ರೆ ತಪ್ಪೇನಿಲ್ಲ ಅಂತ ಹೇಳುತ್ತಾರಾದ್ರೂ, ಕುಡೀತೀನಿ ಅಂದ್ರೆ ಈಗ ಬೇಡ ಅಂತ
- ಮುಂದೂಡ್ತಾರೆ.
- ಯಾವಾಗಲೂ ಅಮ್ಮ ಮಾಡುತ್ತಿದ್ದ ಅಡುಗೆಯನ್ನೇ ನೆನಪಿಸಿಕೊಳ್ತಾರೆ.
- ಪಾರ್ಕಿಗೆ ಹೋಗುವುದಿಲ್ಲ. ಒತ್ತಾಯ ಮಾಡಿ ಕರೆದುಕೊಂಡು ಹೋದ್ರೂ ಅಲ್ಲಿ ಕೆಲಸವಿಲ್ಲದೆ ಕುಳಿತಿರುವ ಮುದುಕರನ್ನು ನೋಡಿ ಆಡಿಕೊಳ್ಳೋದ್ರಲ್ಲೇ ಟೈಂ ವೇಸ್ಟ್ ಮಾಡ್ತಾರೆ. ರೊಮ್ಯಾನ್ಸ್ಗೆ ಮಾತು ಎತ್ತಿದರೆ 'ಮದುವೆ ಆಯ್ತಲ್ಲ, ಇನ್ನೇನು!' ಅಂತಾರೆ.
- ಫ್ರೆಂಚ್ ಗಡ್ಡ ಬಿಡೋದೇ ಗಾಂಭೀರ್ಯದ ಲಕ್ಷಣ ಎಂದು ಭಾವಿಸಿದ್ದಾರೆ. ಕೂದಲು ಬೆಳ್ಳಗಾದರೆ ಹೇರ್ಡೈ ಮಾಡಿಕೊಳ್ಳಲು ಹಿಂದೇಟು ಹಾಕ್ತಾರೆ. ಏಕೆಂದರೆ, 'ಹಾಗಿದ್ದರೆ ಮಾತ್ರ ಇಂಟಲೆಕ್ಚುವಲ್ ಥರ ಕಾಣ್ತೀರಾ!' ಅಂತ ಅವರಿಗೆ ಬಹಳ ಹಿಂದೆಯೇ ಹೇಳಿ ನಂಬಿಸಲಾಗಿದೆ.
- ಮನೇಲಿರೋದಕ್ಕಿಂತ ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ನಲ್ಲಿರ್ತಾರೆ.
- ಜಗತ್ತಿನ ಸಮಸ್ತವನ್ನೂ ಡೌನ್ಲೋಡ್ ಮಾಡುವ ತಾಕತ್ತು ಅವರಿಗಿದೆ. ಆದರೆ ನಿಮಗೆ ಬೇಕಾದ ಸುಪ್ರಭಾತವನ್ನೋ, ಹಳೆ ಕನ್ನಡ ಸಿನಿಮಾಗಳ ಕ್ಲಾಸಿಕ್ ಹಾಡನ್ನೋ ಯಾವತ್ತೂ ಡೌನ್ಲೋಡ್ ಮಾಡಿಕೊಡುವುದಿಲ್ಲ.
- ಬೆಂಗಳೂರು ಬಿಟ್ಟು ಬೇರೆ ಯಾವ ಊರಿಗೂ ಹೋಗುವುದಿಲ್ಲ. ಹೋಗಲೇಬೇಕು ಅಂತಾದ್ರೆ ಅಮೆರಿಕಕ್ಕೆ ಹೋಗ್ತಾರೆ. ಕೆನಡಾ, ಜರ್ಮನಿ, ಫ್ರಾನ್ಸ್ಗೂ ಹೋಗಬಹುದು, ಆದರೆ ನಿಮ್ಮನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ.
- ಲವ್ ಮಾಡುವಾಗ ಎಷ್ಟು ಸಲ ಬೇಕಾದ್ರೂ ನಂದಿಬೆಟ್ಟ, ಬನ್ನೇರುಘಟ್ಟ, ವಂಡರ್ಲಾ, ರಂಗನತಿಟ್ಟಿಗೆ ಕರೆದುಕೊಂಡು ಹೋಗ್ತಾರೆ. ಮದುವೆ ಆದಮೇಲೆ ಎಲ್ಲಾ ಬಂದ್.
- ಸಿನಿಮಾಕ್ಕೆ ಹೋಗೋಣ ಅಂದ್ರೆ ಯಾವ ಸಿನಿಮಾ ಅಂತ ಕೇಳ್ಕೊಂಡು ಆವತ್ತು ಸಂಜೆ ಆಫೀಸ್ನಿಂದ ಬರೋವಾಗ ಅದನ್ನು ಡೌನ್ಲೋಡ್ ಮಾಡ್ಕೊಂಡು ಬಂದಿರ್ತಾರೆ. 'ಥಿಯೇಟರ್ನಲ್ಲಿ ಕೂತ್ಕೊಳ್ಳೋದು ಮಹಾನ್ ಬೋರು!'.
- ಮಾರ್ಕೆಟ್ ಅಂದಾಕ್ಷಣ ಅವರ ತಲೆಗೆ ಮೊದಲು ಬರುವುದು ಶೇರ್ಮಾರ್ಕೆಟ್. ನಂತರ ಫ್ಯೂಚರ್ ಮಾರ್ಕೆಟ್. ಆಮೇಲೆ ಸೆಕೆಂಡ್ ಹ್ಯಾಂಡ್ ಕಾರ್ ಮಾರ್ಕೆಟ್. ತರಕಾರಿ ಮಾರ್ಕೆಟ್ಗೆ ಯಾವತ್ತೂ ಹೋಗಲು ಇಷ್ಟಪಡೋದಿಲ್ಲ.
- ಕಿವಿಗೆ ಸದಾ ಇಯರ್ಫೋನ್ ಇರೋದ್ರಿಂದ ನಲವತ್ತಾಗುತ್ತಿದ್ದಂತೆ ಕಿವಿ ಡಮ್ ಅನ್ನೋದೂ ಗ್ಯಾರಂಟಿ.
- ಮದುವೆಯಲ್ಲಿ ಇವರಿಗೆ ನಂಬಿಕೆಯಿಲ್ಲ.
- ಆಫೀಸಿನಿಂದ ಬಂದಾಕ್ಷಣ ಟೀವಿ ರಿಮೋಟ್ ಅವರ ಕೈಗೆ ಹೋಗುತ್ತದೆ. ರಾತ್ರಿ ಮಲಗುವವರೆಗೂ ಅದು ಬೇರಾರಿಗೂ ಸಿಗುವುದಿಲ್ಲ. ಆದರೆ, ಆಫೀಸಿನ ಫೋನ್ ಕಾಲ್ ಮುಗಿಯುವುದಿಲ್ಲ. ಹಾಗಾಗಿ ಒಂದು ಕೈಲಿ ಮೊಬೈಲ್, ಇನ್ನೊಂದು ಕೈಲಿ ರಿಮೋಟ್ ಹಿಡಿದು ಕುಳಿತಿರುತ್ತಾರೆ. ಇದು ದೇಶದ ಎಲ್ಲಾ ಗಂಡಸರ ಜಾಯಮಾನ ಎಂದೂ ಹೇಳಲಾಗಿದೆ.
- ಬೆಂಗಳೂರು ಹುಡುಗರನ್ನು ಲವ್ ಮಾತ್ರ ಮಾಡಬೇಕು. ಬೇರೆ ಊರಿನವರನ್ನು ಮದುವೆಯಾಗಬೇಕು ಎಂದು ಹಳೆ ಹೆಂಗಸರು ಗುಟ್ಟಾಗಿ ಮಾತನಾಡಿಕೊಳ್ತಾರೆ.
- ಔಟಿಂಗ್ ಹೋಗೋಣ ಅಂದ್ರೆ ಚಾಮರಾಜಪೇಟೆಯಲ್ಲಿರುವ, ನಿಂತ್ಕೊಳೊದಕ್ಕೂ ಜಾಗವಿಲ್ಲದ, ಬರೀ ಇಡ್ಲಿ ಮತ್ತು ಕಾಫಿ ಮಾತ್ರ ಸಿಗುವ ಕಾಫಿ ಬಾರ್ಗೆ ಕರೆದುಕೊಂಡು ಹೋಗ್ತಾರೆ.
- ಎಷ್ಟು ಸಾಧ್ಯವೋ ಅಷ್ಟು ದುಡ್ಡು ಮಾಡಿಕೊಂಡು ಯಾವುದಾದ್ರೂ ಹಳ್ಳಿಗೆ ಹೋಗಿ ಜಮೀನು ತಗೊಂಡು ಇರಬೇಕು ಅಂತ ಕನಸು ಕಾಣ್ತಾರೆ. ಆದರೆ ಯಾವತ್ತೂ ಆ ಕೆಲಸ ಮಾಡುವುದಿಲ್ಲ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


