ಸಮಾಜಕ್ಕೆ ಕೊಡುಗೆ ನೀಡುವುದೇ ನಮ್ಮ ಏಕಮಾತ್ರ ಉದ್ದೇಶ: ಪ್ರಭಾಕರ್

ಬೆಂಗಳೂರು: ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಮಾಲ್ ಉದ್ಯಮದಲ್ಲಿ ಈಗಾಗಲೇ ಔನ್ನತ್ಯ ಸಾಧಿಸಿರುವ ಗೋಪಾಲನ್ ಎಂಟರ್ಪ್ರೈಸಸ್ ಇಂಡಿಯಾ ಪ್ರೈ.ಲಿಮಿಟೆಡ್, ಹೊಸದಾಗಿ ಆರಂಭಿಸಲಿರುವ ಶಾಲೆ ಮತ್ತು ಆಸ್ಪತ್ರೆಯಿಂದ ಸಮಾಜಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ನೀಡುವ ಉದ್ದೇಶ ಹೊಂದಿರುವುದಾಗಿ ಗೋಪಾಲನ್ ಎಂಟರ್ಪ್ರೈಸಸ್ ಇಂಡಿಯಾ ಪ್ರೈ.ಲಿಮಿಟೆಡ್ ನಿರ್ದೇಶಕ ಸಿ. ಪ್ರಭಾಕರ್ ಅವರು ಹೇಳಿದ್ದಾರೆ.
ಕಳೆದ 30 ವರ್ಷಗಳಿಂದ ನಂಬಿಕೆಯೇ ಬುನಾದಿಯಾಗಿ ಜೀವನದಿಂದ ಸ್ಫೂರ್ಥಿಗೊಂಡು ಮುಂಚೂಣಿಯಲ್ಲಿರುವ ಸಂಸ್ಥೆ ಗೋಪಾಲನ್ ಎಂಟರ್ಪ್ರೈಸಸ್ ಇಂಡಿಯಾ ಪ್ರೈ.ಲಿಮಿಟೆಡ್. ವ್ಯವಹಾರಿಕವಾಗಿ ಪ್ರತಿಯೊಬ್ಬ ಗ್ರಾಹಕರಿಂದಲೂ ಮೆಚ್ಚುಗೆ ಪಡೆದಿರುವ ಗೋಪಾಲನ್ ಎಂಟರ್ಪ್ರೈಸಸ್, ತನ್ನ 30ನೇ ವರ್ಷದಲ್ಲಿ ಇನ್ನಷ್ಟು ಹೊಸ ಯೋಜನೆಗಳೊಂದಿಗೆ ವಿಸ್ತಾರಗೊಳ್ಳಲಿದೆ. ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಮಾಲ್ ಉದ್ಯಮದಲ್ಲಿ ಅತಿ ದೊಡ್ಡ ಹೆಸರು ಮಾಡಿರುವ ಗೋಪಾಲನ್ ಎಂಟರ್ಪ್ರೈಸಸ್ ಇಂಡಿಯಾ ಪ್ರೈ.ಲಿಮಿಟೆಡ್ನ ನಿರ್ದೇಶಕ ಸಿ.ಪ್ರಭಾಕರ್ ಅವರು 2014ರ ತಮ್ಮ ಕನಸುಗಳನ್ನು ಕನ್ನಡಪ್ರಭ.ಕಾಮ್ ನೊಂದಿಗೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಬಿಇ, ಅರ್ಕಿಟೆಕ್ಚೆರ್ ಹಾಗೂ ಹಾರ್ವರ್ಡ್ ವಿವಿಯಲ್ಲಿ ಎಂಬಿಎ ಪದವಿ ಪಡೆದಿರುವ ಪ್ರಭಾಕರ್ ಅವರು, ಶಾಲೆಯ ದಿನಗಳಿಂದಲೇ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಪ್ರಭಾಕರ್ ಅವರು ಜಿಮ್ನ್ಯಾಸ್ಟಿಕ್ಸ್ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದವರು. ಶಾಲಾ ದಿನಗಳಿಂದಲೂ ಓದಿನಷ್ಟೇ ನಿಜ ಜೀವನದ ಕುರಿತು ಅಪಾರ ಪ್ರೀತಿ ಇದ್ದ ಕಾರಣವೇ ಇಂದು ಸಹ ಅವರು ವೃತ್ತಿಪರವಾಗಿ ಯಶಸ್ಸು ಕಾಣಲು ಸಾಧ್ಯವಾಗಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆಯೇ?
-ಖಂಡಿತ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನ ವಾತಾವರಣ ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ರಾಜಕೀಯ ಸ್ಥಿರತೆ ಇದೆ. ಬೆಂಗಳೂರಿನ ಜನರಲ್ಲಿ ಸ್ವೀಕಾರ ಮಾಡುವ ಮನೋಭಾವ ಇದೆ. ಜತೆಗೆ ಸುರಕ್ಷಿತ ವಾತಾವರಣವಿದೆ.
ಬೆಂಗಳೂರಿನಲ್ಲಿರುವ ಮೂಲ ಸೌಕರ್ಯ ತೃಪ್ತಿಕರವಾಗಿದೆಯೇ?
ಬೆಂಗಳೂರು ನಗರದಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಅಭಿವೃದ್ಧಿ ಆಗಿದೆ. ಆದರೆ ಬೇರೆ ನಗರಗಳಿಗೆ ಹೋಲಿಸಿದರ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿಯಾಗುತ್ತಿಲ್ಲ.
ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದರಿಂದ ಇದರ ದುಷ್ಪರಿಣಾಮ ಉದ್ಯಮದ ಮೇಲೆ ಆಗುತ್ತಿದ್ದೆಯೇ?
ಭ್ರಷ್ಟಾಚಾರ ಮೊದಲಿನಿಂದಲೂ ಇದೆ. ಆದರೆ ಇತ್ತೀಚಿಗೆ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗಿರುವುದು ಮತ್ತು ಜನಸಾಮಾನ್ಯರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಸ್ವಲ್ಪಮಟ್ಟಿಗೆ ಸಹಾಯಕಾರಿಯಾಗಿದೆ.
ಮಾಲ್ ಸಂಸ್ಕೃತಿಗೆ ಭವಿಷ್ಯವಿದೆಯೇ?
ಹೌದು ಇದೆ. ಮಾಲ್ಗಳ ಬಗ್ಗೆ ಜನರಿಗೆ ಹೆಚ್ಚಿನ ವಿಶ್ವಾಸವಿದೆ. ಒಂದೇ ಸೂರಿನಲ್ಲಿ ಜನರಿಗೆ ಹಲವು ಬಗೆಯ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಜನ ಮಾಲ್ಗಳ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಜನರ ಬೇಡಿಕೆಗಳಿಗೆ ಅನುಗುಣವಾಗಿ ಮಾಲ್ಗಳು ಸಹ ತಮ್ಮ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಬೇಕು.
ಬೆಂಗಳೂರಿನಲ್ಲಿ ಐದು ಮಾಲ್ಗಳನ್ನು ಹೊಂದಿರುವ ನಿಮ್ಮ ಸಂಸ್ಥೆ, ಹೊಸದಾಗಿ ಮಾಲ್ಗಳನ್ನು ಆರಂಭಿಸಲು ಯೋಜಿಸಿದೆಯೇ?
ಮೈಸೂರು ರಸ್ತೆಯಲ್ಲಿ ಕಟ್ಟಡ ಸಾಮಾಗ್ರಿಗಳಿಗಾಗಿ ವಿಶೇಷ ಮಾಲ್ವೊಂದನ್ನು ಆರಂಭಿಸುವ ಉದ್ದೇಶ ಇದೆ. ಕೆ.ಆರ್.ಪೂರಂ ಬಳಿ ಮತ್ತೊಂದು ಮಾಲ್ ಆರಂಭಿಸಲು ಉದ್ದೇಶಿಸಲಾಗಿದೆ.
ಗೋಪಾಲನ್ ಸಂಸ್ಥೆ ಇದುವರೆಗೆ ಎಷ್ಟು ಅಪಾರ್ಟ್ಮೆಂಟ್ ಯೋಜನೆಗಳನ್ನು ಪೂರ್ಣಗೊಳಿಸಿದೆ?
ತಮ್ಮ ಸಂಸ್ಥೆ ಇದುವರೆಗೆ ಸುಮಾರು 90 ಅಪಾರ್ಟ್ಮೆಂಟ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಧ್ಯಮ ವರ್ಗ ಮತ್ತು ಉದ್ಯೋಗಸ್ಥರೇ ನಮ್ಮ ಸಂಸ್ಥೆಯ ಪ್ರಮುಖ ಗ್ರಾಹಕರು.
ನಿಮ್ಮ ಉದ್ಯಮವನ್ನು ಬೆಂಗಳೂರಿನಿಂದ ಹೊರಗೆ ವಿಸ್ತರಿಸುವ ಯೋಜನೆ ಇದೆಯೇ?
ಎರಡನೇ ಹಂತದ ನಗರಗಳಲ್ಲಿ ವಿಶೇಷವಾಗಿ ಮೈಸೂರು ನಗರದಲ್ಲಿ ಉತ್ತಮ ಅವಕಾಶಗಳಿವೆ. ಅದೇ ರೀತಿ ಬೆಂಗಳೂರಿನ ಹೊರವಲಯದಲ್ಲಿ ಬಿಡದಿ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಮತ್ತು ಮಾಲ್ಗಳ ನಿರ್ಮಾಣಕ್ಕೆ ಉತ್ತಮ ಅವಕಾಶವಿದ್ದು, ಈ ದಿಸೆಯಲ್ಲಿ ಸಂಸ್ಥೆ ಕಾರ್ಯನ್ಮೋಖವಾಗಿದೆ.
ನಿರ್ಮಾಣ ಕ್ಷೇತ್ರ ಹೊರತುಪಡಿಸಿ, ಬೇರೆ ಯಾವ ಕ್ಷೇತ್ರದಲ್ಲಿ ತಮ್ಮ ಸಂಸ್ಥೆ ಸಕ್ರಿಯವಾಗಿದೆ?
ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಈಗಾಗಲೇ ಸಕ್ರಿಯವಾಗಿದ್ದು, 2 ಶಾಲೆ, 1 ಇಂಜಿನಿಯರಿಂಗ್ ಕಾಲೇಜ್, 1 ವಾಸ್ತು ಶಾಸ್ತ್ರದ ಕಾಲೇಜ್ ಮತ್ತು 1 ಪಿಯು ಕಾಲೇಜ್ ಹೊಂದಿದೆ. ನಮ್ಮ ಶಾಲೆಯಲ್ಲಿ ಬುದ್ದಿವಂತಿಕೆಗಿಂತ ಬದುಕುವ ಕಲೆಯ ಕುರಿತು ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಸಾವಯುವ ಕೃಷಿಗೆ ಉತ್ತೇಜನ ನೀಡುವ ಅಗತ್ಯವಿದ್ದು, ಈ ವಿಚಾರದಲ್ಲಿ ರೈತರಿಗೆ ಅಗತ್ಯ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.
ನಿಮ್ಮ ಸಂಸ್ಥೆಯಲ್ಲಿ ಒಟ್ಟು ಎಷ್ಟು ಜನರಿಗೆ ಉದ್ಯೋಗ ಅವಕಾಶ ದೊರೆತಿದೆ?
ನಮ್ಮ ಸಂಸ್ಥೆಯಲ್ಲಿ ನೇರವಾಗಿ 3500 ಉದ್ಯೋಗಿಗಳಿದ್ದು, ಪರೋಕ್ಷವಾಗಿ ಅಷ್ಟೆ ಸಂಖ್ಯೆಯ ಜನರಿಗೆ ಉದ್ದೋಗ ಲಭ್ಯವಾಗಿವೆ.
ಮುಂದಿನ ಯೋಜನೆಗಳು?
ಆರ್ಗಾನಿಕ್ ಫಾರ್ಮಿಂಗ್ನಲ್ಲಿ ಕಳೆದ 5 ವರ್ಷಗಳಲ್ಲಿ ವಿಶೇಷ ಅಧ್ಯಯನ ನಡೆಸಿ, ನಾವು ಕೂಡ ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಇದು ಹೊಸತಾದರೂ ಅತ್ಯಂತ ಉನ್ನತಿಯನ್ನು ಸಾಧಿಸುವ ಹಂಬಲ ನಮ್ಮದು. ಈ ವರ್ಷಾಂತ್ಯಕ್ಕೆ ಹೊಸ ಆಸ್ಪತ್ರೆಯೊಂದರ ಪಾಲುದಾರಿಕೆ ಹಾಗೂ ವಿಶೇಷವಾದ ಮಕ್ಕಳಿಗಾಗಿ ಶಾಲೆಯೊಂದರ ಆರಂಭಿಸುವ ಯೋಜನೆ ಇದೆ.
ರಿಯಲ್ ಎಸ್ಟೇಟ್ ಮತ್ತು ಮಾಲ್ ಈಗಾಗಲೇ ಸ್ಥಾಪಿತ ಉದ್ಯಮವಾಗಿದ್ದು, ಇದರಲ್ಲಿ ನಾವು ಕಳೆದುಕೊಳ್ಳುವುದು ಏನು ಇಲ್ಲ. ಹೊಸದಾಗಿ ಆರಂಭಿಸಬೇಕಿರುವ ಶಾಲೆಯಿಂದ ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡುವುದೇ ನಮ್ಮ ಏಕಮಾತ್ರ ಉದ್ದೇಶವಾಗಿದೆ. ಇಲ್ಲಿ ವ್ಯಾಪರಕ್ಕಿಂತ ನನಗೆ ಮುಖ್ಯವಾಗಿರುವುದು ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿ ಇದೆ. ಹೀಗಾಗಿಯೇ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದೇವೆ ಮತ್ತು ಇದಕ್ಕಾಗಿ ಒಂದು ಕ್ರೀಡಾ ಸಂಕೀರ್ಣವನ್ನೇ ಆರಂಭಿಸಿದ್ದೇವೆ. ಅಲ್ಲದೆ 50 ಕ್ರೀಡಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ.
ತಂದೆಯಿಂದ ಕಲಿತ ಪಾಠ?
ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆ
ಬದುಕಿನಲ್ಲಿ ಅವಿಸ್ಮರಣೀಯ ಘಟನೆ?
ನಮ್ಮ ಶಾಲೆಯ ಮಕ್ಕಳು ಅಲ್ಲಿಯೇ ಓದಿ ಬೆಳೆದು ದೊಡ್ಡವರಾಗಿ ಎಲ್ಲೋ ಸಿಕ್ಕಿ ತಮ್ಮ ಸಾಧನೆಯನ್ನು ಹೇಳಿಕೊಂಡಾಗ ಆಗುವ ಆನಂದಕ್ಕೆ ಸಮವಾದದ್ದು ಯಾವುದು ಇಲ್ಲ.
ನಿಮ್ಮ ನೆಚ್ಚಿನ ಚಿತ್ರ ನಟ?
ರಿಯಲ್ ಸ್ಟಾರ್ ಉಪೇಂದ್ರ ನನ್ನ ನೆಚ್ಚಿನ ನಟ. ಏಕೆಂದರೆ ಅವರ ಚಿತ್ರಗಳು ತುಂಬಾ ವಿಭಿನ್ನವಾಗಿ ಮತ್ತು ಕ್ರಿಯಾತ್ಮಕವಾಗಿರುತ್ತವೆ.
ಕನ್ನಡ ಚಿತ್ರಗಳಿಗೆ ನಿಮ್ಮ ಉತ್ತೇಜನ?
ಗೋಪಾಲನ್ ಸಿನಿಮಾಗಳಲ್ಲಿ ಶೇ.80ರಷ್ಟು ಕನ್ನಡ ಚಿತ್ರಗಳೇ ಪ್ರದರ್ಶನವಾಗುತ್ತಿವೆ. ಜತೆಗೆ ಕನ್ನಡ ಚಿತ್ರಗಳ ಉತ್ತೇಜನಕ್ಕೆ ನಮ್ಮ ಮಾಲ್ಗಳಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.
-ಲಿಂಗರಾಜ್ ಬಡಿಗೇರ್
ಕನ್ನಡಪ್ರಭ.ಕಾಮ್
lingaraj@kannadaprabha.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


