ಈಗಿನ ಸುದ್ದಿ

ಮದುವೆ Online, ದಾಂಪತ್ಯ Offline

ಮದುವೆ Online, ದಾಂಪತ್ಯ Offline
Published On :

ಈಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಆನ್‌ಲೈನ್ ಮದುವೆಯವು. ಅಂದರೆ, ಒಂದು ನ್ಯಾಯಾಲಯಕ್ಕೆ ವಾರಕ್ಕೆ 10 ಡೈವೋರ್ಸ್ ಕೇಸು ಬರುತ್ತದೆ ಎಂದಾದರೆ, ಅದರಲ್ಲಿ ಐದು ಕೇಸು ಮ್ಯಾಟ್ರಿಮೋನಿ ವೆಬ್‌ಸೈಟ್ ಮುಖಾಂತರ ನಡೆದ ಮದುವೆಯದ್ದಾಗಿರುತ್ತದೆ. ಅಫ್‌ಕೋರ್ಸ್, ಈ ಪ್ರಮಾಣ ನಗರ ಪ್ರದೇಶಗಳಲ್ಲೇ ಹೆಚ್ಚು.

ಮ್ಯಾಟ್ರಿಮೋನಿ ವೆಬ್‌ಸೈಟಲ್ಲಿ ಮದುವೆಯಾದರೆ ಡೈವೋರ್ಸ್ ಸಾಧ್ಯತೆ ಹೆಚ್ಚಂತೆ ಹೌದಾ?
ಫ್ಲಿಪ್‌ಕಾರ್ಟ್ ಡಾಟ್‌ಕಾಮ್ ಶಾಪಿಂಗ್ ವೆಬ್‌ಸೈಟಿನಲ್ಲಿ ಬುಕ್‌ಮಾಡಿ ಮೊಬೈಲ್ ತರಿಸಿಕೊಳ್ಳುತ್ತೀರಿ. ಡ್ಯಾಮೇಜ್ ಇದ್ದರೆ ಕಂಪನಿಗೆ ಕಾಲ್ ಮಾಡುತ್ತೀರಿ. ಅವರು ಬಂದು ಹಣ ಕೊಟ್ಟು ಮೊಬೈಲ್ ವಾಪಸ್ ತೆಗೆದುಕೊಂಡು ಹೋಗುತ್ತಾರೆ.

ಇಂದು ಬಹಳ ಹುಡುಗ ಹುಡುಗಿಯರು ಮ್ಯಾಟ್ರಿಮೋನಿ ವೆಬ್‌ಸೈಟ್ ಅಥವಾ ಸೋಷಿಯಲ್ ಮೀಡಿಯಾ ವೆಬ್‌ಸೈಟುಗಳಲ್ಲಿ ಭೇಟಿಯಾಗಿ ಮದುವೆಯಾಗುತ್ತಾರೆ. ಯಾಕೋ ದಾಂಪತ್ಯ ದಡ ಹತ್ತುವುದಿಲ್ಲ ಎಂದಿಟ್ಟುಕೊಳ್ಳಿ. ಮ್ಯಾಟ್ರಿಮೋನಿ ಕಂಪನಿಯವರಿಗೆ ಅಥವಾ ಫೇಸ್‌ಬುಕ್‌ನವರಿಗೆ ಫೋನ್ ಮಾಡಿದರೆ ಗಂಡನನ್ನೋ ಹೆಂಡತಿಯನ್ನೋ ವಾಪಸ್ ತಗೊಂಡು ಹೋಗುತ್ತಾರಾ? ನೋ ಚಾನ್ಸ್!
ಇದೇ ಸಮಸ್ಯೆ. ವೆಬ್‌ಸೈಟಿನಲ್ಲಿ ಮಾಹಿತಿ ಹಂಚಿಕೊಂಡು ಮದುವೆಯಾದವರಲ್ಲಿ ಇಂದು ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಸ್ವತಃ ಮ್ಯಾಟ್ರಿಮೋನಿ ವೆಬ್‌ಸೈಟುಗಳು ಕೂಡ ಇದನ್ನು ಒಪ್ಪಿಕೊಂಡು ದಾಂಪತ್ಯವನ್ನು ಸರಿದಾರಿಗೆ ತರಲು ಉಚಿತ ಕೌನ್ಸೆಲಿಂಗ್, ಪುಸ್ತಕ ವಿತರಣೆ ಮುಂತಾದ ಕಸರತ್ತಿಗೆ ಕೈಹಾಕಿವೆ. ಏಕೆಂದರೆ ಅವುಗಳ ಬಿಸಿನೆಸ್ ಉಳಿಯಬೇಕಲ್ಲ!

ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ, ಈಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಆನ್‌ಲೈನ್ ಮದುವೆಯವು. ಅಂದರೆ, ಒಂದು ನ್ಯಾಯಾಲಯಕ್ಕೆ ವಾರಕ್ಕೆ 10 ಡೈವೋರ್ಸ್ ಕೇಸು ಬರುತ್ತದೆ ಎಂದಾದರೆ, ಅದರಲ್ಲಿ ಐದು ಕೇಸು ಮ್ಯಾಟ್ರಿಮೋನಿ ವೆಬ್‌ಸೈಟ್ ಮುಖಾಂತರ ಆದ ಮದುವೆಯದ್ದು ಆಗಿರುತ್ತದೆ. ಅಫ್‌ಕೋರ್ಸ್ ಈ ಪ್ರಮಾಣ ನಗರ ಪ್ರದೇಶಗಳಲ್ಲೇ ಹೆಚ್ಚು. ಹಳ್ಳಿಗಳಲ್ಲಿ ಇನ್ನೂ ಸಾಂಪ್ರದಾಯಿಕ ರೀತಿಯಲ್ಲಿ ಅರೇಂಜ್ಡ್ ಮದುವೆಯೇ ಹೆಚ್ಚಿನ ಸಂಖ್ಯೆಯಲ್ಲಿ ಆಗುವುದರಿಂದ ಮತ್ತು ನಗರಗಳಲ್ಲಿ ಹೆಚ್ಚು ಮದುವೆಗಳು ವೆಬ್‌ಸೈಟುಗಳ ಮುಖಾಂತರ ಆಗುವುದರಿಂದ ನಗರ ಪ್ರದೇಶಗಳಲ್ಲೇ ಆನ್‌ಲೈನ್ ಸಂಬಂಧದಿಂದ ಪ್ರೇರಿತವಾದ ವಿಚ್ಛೇದನಗಳು ಹೆಚ್ಚು. ಸಹಜ ವಿಚ್ಛೇದನಗಳೂ ನಗರ ಪ್ರದೇಶದಲ್ಲೇ ಜಾಸ್ತಿ ಎಂಬುದು ಬೇರೆ ವಿಚಾರ.
ದೆಹಲಿಯ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿರುವ ಹಾಗೂ ಸೈಬರ್ ಕಾನೂನಿನಲ್ಲಿ ಪರಿಣತರಾಗಿರುವ ತಜ್ಞರೊಬ್ಬರು ಇತ್ತೀಚೆಗೆ ನೀಡಿದ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅವರ ಪ್ರಕಾರ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ವಿಚ್ಛೇದನ ಪ್ರಕರಣಗಳು ಏಕಾಏಕಿ ಹೆಚ್ಚಿವೆ. ಅವುಗಳಲ್ಲಿ ಶೇ.70ರಷ್ಟು ಪ್ರಕರಣಗಳು ಆನ್‌ಲೈನ್ ತಾಣಗಳಲ್ಲಿ ಪರಿಚಯವಾಗಿ ಮದುವೆಯಾದವರದ್ದೇ ಆಗಿರುತ್ತವೆ.

ಆನ್‌ಲೈನ್ ಮದುವೆ ಸುತ್ತಮುತ್ತ
ಇವತ್ತು ಯುವಕ ಯುವತಿಯರೆಲ್ಲಾ ನಗರದಲ್ಲಿದ್ದಾರೆ. ಅವರ ಅಪ್ಪ ಅಮ್ಮಂದಿರು ಊರಲ್ಲಿದ್ದಾರೆ. ವಯಸ್ಸಿಗೆ ಬಂದ ಮಗನ ಮದುವೆ ಮಾಡಬೇಕೆಂದು ಅವರು ಮಾತಾಡಿಕೊಳ್ಳುತ್ತಿದ್ದರೆ ಪೇಟೆಯಲ್ಲಿರುವ ಮಗನಿಗೆ ಫೇಸ್‌ಬುಕ್‌ನಲ್ಲಿ ಸಂಗಾತಿ ಸಿಕ್ಕಿರುತ್ತಾಳೆ. ಮಗಳಿಗೆ ಅಮ್ಮ ಫೋನ್‌ಮಾಡಿ 'ಈ ವರ್ಷ ಜಾತಕ ಹೊರಹಾಕೋಣವಾ?' ಎಂದು ಕೇಳಿದರೆ ಮಗಳು 'ಈಗ್ಲೇ ಬೇಡ ಮಮ್ಮಿ. ಮುಂದಿನ ವರ್ಷ ನಾನೇ ಶಾದಿ ಡಾಟ್‌ಕಾಮ್‌ನಲ್ಲಿ ಪ್ರೊಫೈಲ್ ಅಪ್‌ಲೋಡ್ ಮಾಡ್ತೀನಿ. ನೀವ್ಯಾಕೆ ತೊಂದರೆ ತಗೋತೀರಾ' ಎನ್ನುತ್ತಾಳೆ.

ಅಂತರ್ಜಾಲದಲ್ಲಿ ಎಲ್ಲವೂ ಮೆಕ್ಯಾನಿಕಲ್. ಅಲ್ಲಿ ಭಾವನೆಗಳಿಗೆ ಜಾಗವಿಲ್ಲ. ಇದ್ದರೂ ಅದು ಕ್ಷಣಭಂಗುರ. ಅಲ್ಲಿ ಮದುವೆಯಾದ ಹುಡುಗ ಹುಡುಗಿಗೆ ಅಪ್ಪ ಅಮ್ಮಂದಿರ ಹೆದರಿಕೆಯಿರುವುದಿಲ್ಲ. ಏಕೆಂದರೆ, ಅದು ಹಿರಿಯರು ಮಾಡಿಸಿದ ಮದುವೆಯೇ ಅಲ್ಲ. ಇವರೇ ಮಾಡಿಕೊಂಡಿದ್ದು. ಹಾಗಾಗಿ ಏನೇ ಆದರೂ ಜವಾಬ್ದಾರಿ ನಮ್ಮದೇ ಎಂಬ ಹುಂಬು ಧೈರ್ಯವೊಂದು ಹುಡುಗ ಹುಡುಗಿಯಲ್ಲಿರುತ್ತದೆ. ಅಪ್ಪ ಅಮ್ಮ ಮಾತುಕತೆ ನಡೆಸಿ ಮಾಡಿದ ಮದುವೆಆಗಿದ್ದರೆ, ನಾವೀಗ ಡೈವೊರ್ಸ್ ಕೊಟ್ಟುಕೊಂಡರೆ ಅವರಿಗೆ ಬೇಜಾರಾಗುತ್ತದೆ ಎಂಬ ಕಾರಣಕ್ಕಾದರೂ ಹಿಂಜರಿಯುವ ಸಾಧ್ಯತೆಯಿರುತ್ತದೆ. ಆದರೆ ತಾವೇ ಸಂಗಾತಿಯನ್ನು ಹುಡುಕಿಕೊಂಡವರು, 'ಹೇಗಿದ್ದರೂ ಇದು ನಾವೇ ಮಾಡಿದ ತಪ್ಪಲ್ಲವೇ? ಈಗ ಬೇರೆಯಾದರೆ ಅಪ್ಪ ಅಮ್ಮನೇನೂ ನೊಂದುಕೊಳ್ಳುವುದಿಲ್ಲ' ಎಂಬ ಹುಸಿ ನಂಬಿಕೆಗೆ ಜೋತುಬೀಳುತ್ತಾರೆ. ಮಕ್ಕಳು ಡೈವೊರ್ಸ್ ಕೊಟ್ಟುಕೊಂಡರೆ ಯಾವ ಅಪ್ಪ ಅಮ್ಮಂದಿರಿಗೆ ನೋವಾಗುವುದಿಲ್ಲ ಹೇಳಿ?!

ಆನ್‌ಲೈನ್ ಮೂಲಕ ನಡೆಯುವ ಮದುವೆಯ ಬಹುದೊಡ್ಡ ಸಮಸ್ಯೆ ಏನೆಂದರೆ, ಅಲ್ಲಿ ಮದುವೆಗೆ ಮುನ್ನ ಹುಡುಗ ಹಾಗೂ ಹುಡುಗಿ ಯಥೇಚ್ಛವಾಗಿ ಸುಳ್ಳುಗಳನ್ನು ಹೇಳಿಕೊಳ್ಳಬಹುದು. ಡೈವೋರ್ಸ್‌ಗೆ ಹೆಚ್ಚಿನ ಸಲ ಕಾರಣವಾಗುವುದು ಇದೇ. ಸಂಬಳ, ಮನೆತನದ ಹಿನ್ನೆಲೆ, ಆಸ್ತಿಪಾಸ್ತಿ, ಜಾತಿ, ವಯಸ್ಸು ಸೇರಿದಂತೆ ಎಲ್ಲದರ ಬಗ್ಗೆಯೂ ಅಲ್ಲಿ ಸುಳ್ಳು ಮಾಹಿತಿ ನೀಡಬಹುದು. ಇಂಟರ್ನೆಟ್‌ನಲ್ಲಿ ಏನೇ ವ್ಯವಸ್ಥೆಯಿದ್ದರೂ ಅದರಲ್ಲಿ ಅಪ್‌ಲೋಡ್ ಮಾಡುವ ಮಾಹಿತಿ ಸುಳ್ಳೋ ನಿಜವೋ ಎಂದು ಪರೀಕ್ಷಿಸುವ ಲೈ ಡಿಟೆಕ್ಟರ್ ವ್ಯವಸ್ಥೆ ಇನ್ನೂ ಬಂದಿಲ್ಲ. ಹಾಗಾಗಿ ಸ್ಕ್ರೀನ್ ಮೇಲೆ ಕಾಣಿಸುವುದನ್ನೇ ನಂಬಿ ನಡೆಯುವ ಮದುವೆಗಳು ಬಹಳ ಶಿಥಿಲವಾಗಿರುತ್ತವೆ. ಜೋರಾಗಿ ಗಾಳಿ ಬೀಸದಿದ್ದರೆ ಗಟ್ಟಿಯಾಗೇ ಇದ್ದಂತೆ ಕಾಣುತ್ತವೆ, ಆದರೆ ಗಾಳಿ ಬೀಸಿದರೆ ಕುಸಿದುಬೀಳುತ್ತವೆ.

ವಿಚ್ಛೇದನಕ್ಕೆ ಬರುವ ದಂಪತಿಗಳು ಇಂದು ಕೋರ್ಟಿಗೆ ಅಥವಾ ವಕೀಲರಿಗೆ ತೋರಿಸುವ ದಾಖಲೆಗಳೂ ಎಲೆಕ್ಟ್ರಾನಿಕ್ ದಾಖಲೆಗಳೇ. ಫೇಸ್‌ಬುಕ್ ಅಥವಾ ಜಿ-ಮೇಲ್‌ನಲ್ಲಿ ಮಾಡಿಕೊಂಡ ಚಾಟಿಂಗ್‌ನ ಪ್ರಿಂಟೌಟ್, ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರೊಫೈಲು, ಎಸ್‌ಎಂಎಸ್‌ಗಳು, ಫೋಟೋಗಳು, ಇ-ಮೇಲುಗಳನ್ನೇ  ಹೆಚ್ಚಾಗಿ ತೋರಿಸಲಾಗುತ್ತದೆ. ಇದರರ್ಥ, ಇಂಟರ್ನೆಟ್‌ನಲ್ಲಿ ಅಥವಾ ಮೊಬೈಲುಗಳಲ್ಲಿ ವಿನಿಮಯ ಮಾಡಿಕೊಂಡ ದಾಖಲೆಗಳನ್ನೇ ಇವರು ನಂಬಿ ಮದುವೆಯಾಗಿದ್ದಾರೆ.

500 ಕೋಟಿ ಬಿಸಿನೆಸ್ಸು!
ಇಂದು ಭಾರತದಲ್ಲಿ ಶಾದಿ ಡಾಟ್‌ಕಾಮ್, ಭಾರತ್ ಮ್ಯಾಟ್ರಿಮೋನಿಯಲ್ ಡಾಟ್‌ಕಾಮ್, ಸಿಂಪ್ಲಿಮ್ಯಾರಿ ಡಾಟ್‌ಕಾಮ್‌ನಂತಹ ಹತ್ತಾರು ಮ್ಯಾಟ್ರಿಮೋನಿಯಲ್ ವೆಬ್‌ಸೈಟುಗಳು ಸೇರಿ ವರ್ಷಕ್ಕೆ 500 ಕೋಟಿ ರು. ವಹಿವಾಟು ನಡೆಸುತ್ತಿವೆ. ಆನ್‌ಲೈನ್ ಮದುವೆಗಳು ಹೆಚ್ಚಿದಂತೆ ಇವರ ಬಿಸಿನೆಸ್ಸೂ ಹೆಚ್ಚುತ್ತಿದೆ. ಹಳ್ಳಿಗಳಿಂದ ಯುವಕರ ವಲಸೆ ನಗರ ಪ್ರದೇಶದತ್ತ ಹೆಚ್ಚಾಗುತ್ತ ಹೋದಂತೆ ಆನ್‌ಲೈನ್ ಮದುವೆಗಳೂ ಹೆಚ್ಚುತ್ತಿವೆ. ಇದೊಂದು ಸರಣಿ ಪ್ರಕ್ರಿಯೆ.
ಕೆಲ ಜನಪ್ರಿಯ ವಿವಾಹ ವೆಬ್‌ಸೈಟುಗಳಲ್ಲಿ ದಿನಕ್ಕೆ ಸರಾಸರಿ 10 ಸಾವಿರ ಜನರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ, ಹತ್ತರಲ್ಲಿ ಒಬ್ಬರಿಗೆ ಮದುವೆಯಾಗುತ್ತದೆ ಎಂದು ಇಟ್ಟುಕೊಂಡರೂ ದಿನಕ್ಕೆ ಒಂದು ಸಾವಿರ ಜನರಿಗೆ ಮದುವೆಯಾಯಿತು! ಆರಂಭದಲ್ಲಿ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳುವ ವೆಬ್‌ಸೈಟುಗಳು, ನಂತರ ಸಂಭವನೀಯ ಸಂಗಾತಿಗಳ ಸಂಪರ್ಕ ವಿಳಾಸ ಬೇಕೆಂದರೆ ಸಾವಿರದ ಲೆಕ್ಕದಲ್ಲಿ ಶುಲ್ಕ ಕೀಳುತ್ತವೆ. ಅಂದರೆ, ಇವುಗಳ ವ್ಯವಹಾರ ಎಷ್ಟು ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಮದುವೆ ರಿಪೇರಿ ಅಂಗಡಿ
ಹೀಗೆ ಬೃಹತ್ ಸಂಖ್ಯೆಯಲ್ಲಿ ಆನ್‌ಲೈನ್ ಮದುವೆಗಳು ನಡೆದು, ಬೃಹತ್ ಸಂಖ್ಯೆಯಲ್ಲಿ ವಿಚ್ಛೇದನಗಳೂ ನಡೆಯುತ್ತಿರುವುದು ಅಂತಿಮವಾಗಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟುಗಳಿಗೂ ಹೊಡೆತ. (ಬಹುದೊಡ್ಡ ಹೊಡೆತ ಹೀಗೆ ಮದುವೆಯಾದವರಿಗೆ!). ಇದೇ ಟ್ರೆಂಡ್ ಮುಂದುವರೆದರೆ ಇನ್ನೊಂದು ಐದಾರು ವರ್ಷಗಳಲ್ಲಿ ಇವುಗಳ ಬಿಸಿನೆಸ್ಸು ಗಣನೀಯವಾಗಿ ಇಳಿಯುವುದರಲ್ಲಿ ಅನುಮಾನವಿಲ್ಲ. ಅದಕ್ಕೆಂದೇ ಈ ವೆಬ್‌ಸೈಟುಗಳು ಈಗ 'ಮದುವೆ ರಿಪೇರಿ' ಅಂಗಡಿಗಳನ್ನೂ ತೆರೆದಿವೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟುಗಳು ಈಗ ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಉಚಿತ ಮ್ಯಾರೇಜ್ ಕೌನ್ಸೆಲಿಂಗ್ ನೀಡುತ್ತಿವೆ. ಮದುವೆ ಯಶಸ್ವಿಯಾಗಬೇಕಿದ್ದರೆ ಗಂಡ-ಹೆಂಡತಿ ಹೇಗಿರಬೇಕು?, ಹೇಗೆ ಸಂಸಾರ ಮಾಡಬೇಕು? ಎಂಬ ಬಗ್ಗೆ ಪುಸ್ತಕಗಳನ್ನು ತಮ್ಮಲ್ಲಿ ಮದುವೆಯಾಗುವವರಿಗೆ ಉಚಿತವಾಗಿ ಹಂಚುತ್ತಿವೆ. ವೆಬ್‌ಸೈಟುಗಳಲ್ಲಿ ಭೇಟಿಯಾದ ನಂತರ ಕನಿಷ್ಠ ಆರೇಳು ತಿಂಗಳಾದರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಿ, ನಂತರ ಮದುವೆಯಾಗಿ ಎಂದು ಸಲಹೆ ನೀಡುತ್ತಿವೆ.

ಸಾಂಪ್ರದಾಯಿಕ ಮದುವೆಯೇ ಬೆಸ್ಟು
ಕಾಲ ಬದಲಾದಂತೆ ಆನ್‌ಲೈನ್ ಮದುವೆ, ಲಿವ್ ಇನ್ ರಿಲೇಷನ್‌ಶಿಪ್ ಹೀಗೆ ಬಂಧಗಳು ಬೇರೆ ಬೇರೆ ರೀತಿಯಲ್ಲಿ ಬೆಸೆದುಕೊಳ್ಳುತ್ತಿವೆ, ಬೇರೆ ಬೇರೆ ರೀತಿಯಲ್ಲಿ ಕೊಂಡಿ ಕಳಚಿಕೊಳ್ಳುತ್ತಿವೆ. ಈಗ ಎಲ್ಲವೂ ಫಟಾಫಟ್. ಒಂದು ನಿಮಿಷವೂ ಪುರುಸೊತ್ತಿಲ್ಲದಂತೆ ಓಡುವ ನಗರದ ಬದುಕಿನಲ್ಲಿ ಇನ್‌ಸ್ಟಂಟ್ ಆಗಿ ಎಲ್ಲವೂ ಕೈಗೆಟುಕಬೇಕು. ಇಲ್ಲಿ ಸಂಬಂಧಗಳು ಏರ್ಪಡುವುದೂ ಬೇಗ, ಮುರಿಯುವುದೂ ಬೇಗ. ಮೊದಲಾದರೆ ಕಾಲೇಜು ಹುಡುಗರು ಮಾತ್ರ ಒಂದೇ ನೋಟದಲ್ಲಿ ಲವ್ವಿಗೆ ಬೀಳುತ್ತಿದ್ದರು. ಇಂದು ಕಾರ್ಪೊರೇಟ್ ಕಚೇರಿಗಳಲ್ಲೂ ಇಂತಹ ಫಟಾಫಟ್ ಸಂಬಂಧಗಳು ಗೊತ್ತೇ ಇಲ್ಲದಂತೆ ಶುರುವಾಗಿಬಿಡುತ್ತವೆ. ಇವೆಲ್ಲವೂ ಮದುವೆ ಎಂಬ ಅನಾದಿಕಾಲದ ಸುಂದರ ವ್ಯವಸ್ಥೆಯ ಮೂಲ ಆಶಯಕ್ಕೇ ಹೊಡೆತ ಹಾಕುತ್ತಿವೆ.
ಕೊಂಚ ಸೂಕ್ಷ್ಮವಾಗಿ ಗಮನಿಸಿ ನೋಡಿ. ಸಾಂಪ್ರದಾಯಿಕವಾಗಿ ಮದುವೆಯಾದ ದಂಪತಿಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗಂತ ಇವರಲ್ಲಿ ವಿರಸ ಏರ್ಪಡುವುದಿಲ್ಲ ಎಂದಲ್ಲ. ಇವರೂ ಜಗಳವಾಡುತ್ತಾರೆ. ಇವರಲ್ಲೂ ಭಿನ್ನಾಭಿಪ್ರಾಯಗಳು ಬರುತ್ತವೆ. ಹೆಂಡತಿ ಸಿಟ್ಟು ಮಾಡಿಕೊಂಡು ತವರು ಮನೆಗೆ ಹೋಗುವ ಸೀನ್ ಇಲ್ಲೂ ಇರುತ್ತದೆ. ಆದರೆ, ಇವು ತೀರಾ ಡೈವೊರ್ಸ್ ತನಕ ಹೋಗುವ ಪ್ರಮಾಣ ಕಡಿಮೆ. ಏಕೆಂದರೆ ಹೀಗೆ ಮದುವೆಯಾದವರು ಲವ್ ಮ್ಯಾರೇಜಾದವರಿಗಿಂತ, ಆನ್‌ಲೈನ್‌ನಲ್ಲಿ ಸಂಗಾತಿಯನ್ನು ಹುಡುಕಿಕೊಂಡು ಮದುವೆಯಾದವರಿಗಿಂತ ಅಥವಾ ಲಿವ್ ಇನ್ ಸಂಬಂಧದಲ್ಲಿ ಇರುವವರಿಗಿಂತ ಸಮಾಜಕ್ಕೆ ಹೆಚ್ಚು ಹೆದರುತ್ತಾರೆ. ಇವರಿಗೆ ಅಪ್ಪ ಅಮ್ಮ, ಹಿರಿಯರು, ನೆಂಟರಿಷ್ಟರ ಮುಲಾಜು ಸ್ವಲ್ಪ ಹೆಚ್ಚಿಗೆ ಇರುತ್ತದೆ. ನಾವು ಬೇರೆಯಾದರೆ ಇವರೆಲ್ಲ ಏನೆಂದುಕೊಳ್ಳುತ್ತಾರೋ ಎಂಬ ಅಂಜಿಕೆಯಲ್ಲಾದರೂ ಇವರು ಡೈವೊರ್ಸ್ ನಿರ್ಧಾರವನ್ನು ಮುಂದೆ ಹಾಕುತ್ತ ಹೋಗುತ್ತಾರೆ. ಒಂದು ದಿನ ತನ್ನಿಂತಾನೇ ಅವರ ಸಂಬಂಧ ಸರಿಹೋಗಿಬಿಡಬಹುದು.

ಆದರೆ, ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾದವರು ಅಥವಾ ಅಪ್ಪ ಅಮ್ಮನಿಗೆ ಗಂಡು / ಹೆಣ್ಣು ಹುಡುಕುವ ತೊಂದರೆ ಕೊಡದೆ ತಾವೇ ಮ್ಯಾಟ್ರಿಮೋನಿ ವೆಬ್‌ಸೈಟಿನಲ್ಲಿ ಸಂಗಾತಿಯನ್ನು ಹುಡುಕಿಕೊಂಡವರಿಗೆ ಈ 'ಹಿರಿಯರು ಏನೆಂದುಕೊಳ್ಳುತ್ತಾರೋ' ಎಂಬ ಹಿಂಜರಿಕೆಯಿಲ್ಲ. ಏಕೆಂದರೆ ಮದುವೆಯ ನಿರ್ಧಾರ ಕೈಗೊಂಡವರೇ ಇವರು. ನನ್ನ ಮದುವೆ, ನನ್ನ ಖುಷಿ ಎಂಬ ಒಣಜಂಭವೊಂದು ಇವರಿಗಿರುತ್ತದೆ. ಹಾಗಾಗಿ ನಾನು ಡೈವೋರ್ಸ್ ಕೊಟ್ಟರೆ ಯಾರಿಗೇನು ಎಂಬ ಡೋಂಟ್ ಕೇರ್ ಪ್ರವೃತ್ತಿಯೇ ಗೆಲ್ಲುತ್ತದೆ.

ಆನ್‌ಲೈನ್ ಮದುವೆಗೆ ಆರು ಸೂತ್ರಗಳು
ಮ್ಯಾಟ್ರಿಮೋನಿ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಬಳಸಿ ಮದುವೆಯಾಗುವವರಿಗೆ ಮ್ಯಾರೇಜ್ ಕೌನ್ಸೆಲರ್‌ಗಳು ಒಂದಷ್ಟು ಸಲಹೆ ನೀಡುತ್ತಾರೆ.

1.ಆನ್‌ಲೈನ್‌ನಲ್ಲಿ ಪರಿಚಯವಾಗಿ ಒಂದು-ಎರಡು ತಿಂಗಳಲ್ಲೇ ಮದುವೆಯಾಗಬೇಡಿ. ಕನಿಷ್ಠ 10 ತಿಂಗಳು ತೆಗೆದುಕೊಳ್ಳಿ. ಅಷ್ಟರಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.

2. 'ಸಾವಿರ ಸುಳ್ಳು ಹೇಳಿ ಮದುವೆ ಮಾಡು' ಎಂಬ ಗಾದೆ ಇವತ್ತಿಗೆ ಹೊಂದುವುದಿಲ್ಲ. ಯಾವುದೇ ಕಾರಣಕ್ಕೂ ನಿಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಬೇಡಿ. ಮುಂದೆ ಇದೇ ಡೈವೋರ್ಸ್‌ಗೆ ಕಾರಣವಾಗಬಹುದು.

3.ಸಂಗಾತಿಯನ್ನು ಹುಡುಕುವುದು ಆನ್‌ಲೈನ್‌ನಲ್ಲಾಗಿದ್ದರೂ ನಂತರ ಅಪ್ಪ ಅಮ್ಮ, ಹಿರಿಯರನ್ನೂ ಮದುವೆಯ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಿ. ಹಿರಿಯರು ನಿಮ್ಮ ಪರವಾಗಿ ಮಾತುಕತೆ ನಡೆಸಲಿ.

4. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಹಾಕಿರುವ ಪ್ರೊಫೈಲಿನಲ್ಲಿ ಏನೇನು ಮಾಹಿತಿಇದೆಯೋ ಅದನ್ನು ನಿಮ್ಮದೇ ಮೂಲಗಳಿಂದ ಒಮ್ಮೆ ಕ್ರಾಸ್‌ಚೆಕ್ ಮಾಡಿಕೊಳ್ಳಿ.

5. 'ಹುಡುಗ ದೂರದ ದೇಶದಲ್ಲಿದ್ದಾನೆ. ಹಾಗಾಗಿ ಫೋಟೋ, ವೀಡಿಯೋ ನೋಡಿ ಮದುವೆ ಫೈನಲ್ ಮಾಡಿಬಿಡೋಣ. ಅವನಿಗೆ ರಜೆ ಸಿಕ್ಕಿ ಊರಿಗೆ ಬಂದಾಕ್ಷಣ ಮದುವೆ ಆಗೋಣ' ಎಂಬ ಆತುರದ ನಿರ್ಧಾರ ಬೇಡ. ಹುಡುಗ- ಹುಡುಗಿ ಮುಖತಃ ಭೇಟಿಯಾಗಿ ಮಾತನಾಡಿದ ಮೇಲಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.

6.ಆನ್‌ಲೈನ್‌ನಲ್ಲಿ ಮದುವೆಯಾಗುವವರೇ ಇರಲಿ, ಸಾಂಪ್ರದಾಯಿಕವಾಗಿ ಮದುವೆಯಾಗುವವರೇ ಇರಲಿ, ಒಂದು ಮಾತನ್ನು ಯಾವತ್ತೂ ನೆನಪಿಡಬೇಕು. ಯಾವುದೇ ಮದುವೆ ನೂರಕ್ಕೆ ನೂರು ಯಶಸ್ವಿಯಲ್ಲ. ಇಬ್ಬರು ವ್ಯಕ್ತಿಗಳಿದ್ದಾರೆ ಅಂದರೆ ಅವರಲ್ಲಿ ಅಭಿಪ್ರಾಯ ಭೇದಗಳೂ ಇರುತ್ತವೆ. ಮದುವೆ ಯಶಸ್ವಿಆಗಲು ಇರುವ ದಾರಿ ಎರಡೇ: ಒಂದು ಪ್ರೀತಿ, ಇನ್ನೊಂದು ಹೊಂದಾಣಿಕೆ.


ಒಂದು ಆನ್‌ಲೈನ್ ಮದುವೆಯ ಕತೆ
ಆಕೆ ಶುಭಾ (ಹೆಸರು ಬದಲಿಸಲಾಗಿದೆ). ವಯಸ್ಸು 34. ಊರು ತುಮಕೂರು. ಕೆಲಸ- ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್. ಶುಭಾ ಈಗ ಡೈವೊರ್ಸ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ಅವಳಿಗೆ ಗಂಡನ ಜತೆ ಇರುವ ಸಮಸ್ಯೆ- ಜಾತಿ ಮತ್ತು ಅಪನಂಬಿಕೆ. ಶುಭಾಗೆ ಮೂವತ್ತಾದರೂ ಮದುವೆಯಾಗಿರಲಿಲ್ಲ. ಇಪ್ಪತ್ತೈದು ವರ್ಷದಲ್ಲಿದ್ದಾಗಲೇ ಮನೆಯಲ್ಲಿ ಗಂಡು ಹುಡುಕಲು ಆರಂಭಿಸಿದ್ದರು. ಅವಳ ದುರದೃಷ್ಟಕ್ಕೆ ಯಾವ ಗಂಡೂ ಒಪ್ಪಿಕೊಂಡಿರಲಿಲ್ಲ. ನರ್ಸ್ ಕೆಲಸದಿಂದ ಸಾಕಷ್ಟು ಸಂಬಳ ಬರುತ್ತಿತ್ತು. ಅದನ್ನು ನೋಡಿಯೂ ಯಾರೂ ಒಪ್ಪಿಕೊಳ್ಳಲಿಲ್ಲ. ಕೊನೆಕೊನೆಗೆ ತನಗೆ ಮದುವೆಯೇ ಆಗುವುದಿಲ್ಲವೇನೋ ಎಂದು ಆತಂಕಪಡತೊಡಗಿದ್ದಳು.
ಆಗ ಅವಳ ಫ್ರೆಂಡ್ ಒಬ್ಬಳು ಒತ್ತಾಯ ಮಾಡಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟಿಗೆ ಪ್ರೊಫೈಲ್ ಅಪ್‌ಲೋಡ್ ಮಾಡಿಸಿದಳು. ಒಂದೇ ತಿಂಗಳಲ್ಲಿ ಪ್ರೊಪೋಸಲ್ ಬಂತು. ಹುಡುಗನ ಜೊತೆ ಭೇಟಿಯಾಯಿತು. ಆತ ಬೆಂಗಳೂರಲ್ಲೇ ಕೆಲಸದಲ್ಲಿದ್ದಾನೆ. ಇವಳದೇ ಜಾತಿ. ಆದರೆ ಅಪ್ಪ ಅಮ್ಮ ಇಲ್ಲ. ಶುಭಾಳ ಮನೆಯವರಿಗೂ ಒಪ್ಪಿಗೆಯಾಯಿತು. ವೆಬ್‌ಸೈಟ್‌ನಲ್ಲಿ ಸಂಪರ್ಕ ಸಿಕ್ಕ ಮೂರು ತಿಂಗಳಲ್ಲಿ ಮದುವೆಯಾಗಿ ಶುಭಾ ಗಂಡನ ಮನೆಯಲ್ಲಿದ್ದಳು.

ಒಂದು ವರ್ಷ ಯಾವ ಸಮಸ್ಯೆಯೂ ಇರಲಿಲ್ಲ. ನಂತರ ಒಂದು ದಿನ ಬೆಳಗ್ಗೆ ವೃದ್ಧ ದಂಪತಿಯೊಂದು ಶುಭಾಳ ಮನೆಗೆ ಬಂದು ಬಾಗಿಲು ಬಡಿಯಿತು. ಕೈಯಲ್ಲೆರಡು ದೊಡ್ಡ ಬ್ಯಾಗ್‌ಗಳಿದ್ದವು. ಅವರು ಶುಭಾಳ ಗಂಡನ ಅಪ್ಪ ಅಮ್ಮ! ತಾನು ಅನಾಥ ಎಂದು ಗಂಡ ಸುಳ್ಳು ಹೇಳಿದ್ದ. ಆಮೇಲೆ ಗೊತ್ತಾಯಿತು, ಅವರು ಶುಭಾಳ ಜಾತಿಯವರೂ ಅಲ್ಲವೆಂದು. ಆಕೆಗೆ ಡಬಲ್ ಶಾಕ್.

'ಏಕೆ ಸುಳ್ಳು ಹೇಳಿದಿರಿ?' ಎಂದು ಕೇಳಿದರೆ ನಂಬುವಂತಹ ಒಂದೇ ಒಂದು ಕಾರಣವನ್ನೂ ಗಂಡ ನೀಡಲಿಲ್ಲ. ಹಾಗಂತ ಅವನು ಕೆಟ್ಟವನೇನೂ ಆಗಿರಲಿಲ್ಲ. ಶುಭಾಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅವನ ಅಪ್ಪ ಅಮ್ಮನೂ ಆಕೆಗೆ ತೊಂದರೆ ಕೊಡಲಿಲ್ಲ. ಆದರೆ ಅವರ ಸಂಪ್ರದಾಯಗಳು ಇವಳಿಗೆ ಸರಿಬರುತ್ತಿರಲಿಲ್ಲ. ಶುಭಾ ಡೈವೋರ್ಸ್‌ಗೆ ಅರ್ಜಿ ಹಾಕಿದಳು. ಅವಳು ಮನಸ್ಸು ಮಾಡಿದ್ದರೆ ಗಂಡನ ಜೊತೆ ಇರಬಹುದಿತ್ತು. ಅವನೇನೂ ಹೊಡೆಯುತ್ತಿರಲಿಲ್ಲ ಅಥವಾ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಆದರೆ, 'ಮದುವೆಯಂತಹ ಸುದೀರ್ಘ ಸಂಬಂಧವೊಂದನ್ನು ಬೆಸೆದುಕೊಳ್ಳಲು ಅವನು ತನಗೆ ಇಷ್ಟೊ ದೊಡ್ಡ ಸುಳ್ಳು ಹೇಳಿದ್ದಾನೆ. ತಾನು ಮೋಸಹೋದೆ. ಹೇಗೆ ಅವನ ಮುಖ ನೋಡಲಿ? ಹೇಗೆ ಅವನನ್ನು ಪ್ರೀತಿಸಲಿ?' ಎಂಬುದು ಅವಳ ಪ್ರಶ್ನೆ. ಅವಳು ಡೈವೋರ್ಸ್‌ಗೆ ನೀಡಿದ ಕಾರಣವೂ ಅದೇ- ನಂಬಿಕೆದ್ರೋಹ. ಹೆಣ್ಣು, ಹೊಡೆಯುವ ಗಂಡನನ್ನಾದರೂ ಸಹಿಸಿಕೊಂಡಾಳು. ಆದರೆ ನಂಬಿಕೆಯನ್ನು ಘಾಸಿಗೊಳಿಸಿದವನ ಜೊತೆ ಬಾಳುವುದು ಕಷ್ಟ.

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40137 ಗೆ ಭೇಟಿನೀಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.