ಈಗಿನ ಸುದ್ದಿ

ಬೋನಿಗೆ ಬಿತ್ತು ನರಭಕ್ಷಕ ಹುಲಿ

ಬೋನಿಗೆ ಬಿತ್ತು ನರಭಕ್ಷಕ ಹುಲಿ
Published On :

ಚಾಮರಾಜನಗರ: ಚಾಮರಾಜನಗರ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಅಂತು ಇಂತೂ ಗುರುವಾರ ಬೋನಿಗೆ ಬಿದ್ದಿದ್ದು, ಅಲ್ಲಿನ ಜನತೆ ನಿರಾಳರಾಗಿದ್ದಾರೆ.

ಕಳೆದ ಆರು ದಿನಗಳಿಂದ ಕಾರ್ಯಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಮದ್ದೂರು ಬಳಿ ಇರಿಸಿದ್ದ ಬೋನಿಗೆ ಹುಲಿ ಬಿದ್ದಿದೆ. ಆನೆಗಳ ಸಹಾಯದಿಂದ ಹುಲಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸುತ್ತಿದ್ದಾರೆ.

ಎಚ್.ಡಿ. ಕೋಟೆ ಬಳಿಯ ಮದ್ದೂರು ಕಾಲೋನಿಯಲ್ಲಿ ಕಳೆದ ಎಂಟು ದಿನಗಳ ಹಿಂದೆ ದನ ಮೇಯಿಸುತ್ತಿದ್ದ ಜವರಯ್ಯ ಎಂಬುವರ ಮೇಲೆ ದಾಳಿ ಮಾಡಿದ್ದ ವ್ಯಾಘ್ರ, ಆತನನ್ನು ಕಾಡಿನೊಳಗೆ ಓತ್ಯೋಯ್ದು ತಿಂದು ಹಾಕಿತ್ತು. ಈ ನರಭಕ್ಷಕ ನನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಡಿ. 25ರಂದು ಕಾರ್ಯಾಚರಣೆ ಆರಂಭಿಸಿತ್ತು.

ಇದಕ್ಕಾಗಿ ಬಂಡೀಪುರದಿಂದ ಆನೆ ಅಭಿಮನ್ಯುವನ್ನು ಕೂಡ ಕಾರ್ಯಚರಣೆಗಾಗಿ ಕರೆಸಿಕೊಳ್ಳಲಾಗಿತ್ತು. ಹುಲಿ ಹಿಡಿಯಲು ಬೋನ್ ಇಟ್ಟು ಎರಡು ಕರುಗಳನ್ನು ಕಟ್ಟಿ ಹುಲಿಯ ಸೆರೆಗಾಗಿ ಕಾಯಲಾಗಿತ್ತು. ಇದಕ್ಕಾಗಿ ಸಿಸಿ ಟಿವಿಗಳನ್ನು ಸಹ ಅರಣ್ಯ ಇಲಾಖೆ ಅಳವಡಿಸಿತ್ತು. ಡಿ.26ರಂದು ಕಾಡಿನಲ್ಲಿ ಅಲೆಯುತ್ತಿದ್ದ ಹುಲಿ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವೇಳೆ ಹುಲಿಯ ಕಾಲಿಗೆ ಕಬ್ಬಿಣದ ಸರಳು ಸಿಕ್ಕಿಕೊಂಡು ಗಾಯವಾಗಿ ನಡೆಯಲು ಆಯಾಸ ಪಡುತ್ತಿದ್ದ ದೃಶ್ಯ ಸೆರೆಯಾಗಿತ್ತು.

ಗಾಯಗೊಂಡ ಹುಲಿ ದೂರ ಓಡಲು ಸಾಧ್ಯವಿಲ್ಲ ಎಂದು ತಿಳಿದ ಅರಣ್ಯ ಸಿಬ್ಬಂದಿ ನಾಲ್ಕು ಆನೆಗಳ ಸಹಾಯದಿಂದ ಸೆರೆ ಹಿಡಿಯುವ ಕಾರ್ಯ ನಡೆಸಿದ್ದರು. ಡಿ.31ರಂದು ಬೋನಿಗೆ ಬೀಳಬೇಕಿದ್ದ ಹುಲಿ ಅಲ್ಲಿ ಕಟ್ಟಿಹಾಕಿದ್ದ ಕರುಗಳನ್ನು ತಿಂದು ಹಾಕಿ ತಪ್ಪಿಸಿಕೊಂಡಿತ್ತು.

ಹುಲಿ ಬೋನಿಗೆ ಬಿದ್ದಿದೆ ಎಂಬ ಸುದ್ದಿ ಕೇಳಿದ ಜನರು ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸುತ್ತಿದ್ದರು. ಆದರೆ ಅಧಿಕಾರಿಗಳು ಹುಲಿಯನ್ನು ಗ್ರಾಮಸ್ಥರಿಗೆ ತೋರಿಸಿದೆ ಅದನ್ನು ಉದ್ಯಾನವನಕ್ಕೆ ಸಾಗಿಸುತ್ತಿರುವುದರಿಂದ ಆಕ್ರೋಶಗೊಂಡ ಜನರು ಅರಣ್ಯ ಇಲಾಖೆಯ ವಾಹನವೊಂದನ್ನು ದ್ವಂಸ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.