ಆಮ್ ಆದ್ಮಿ ಪಕ್ಷಕ್ಕೆ ಪ್ರಮುಖರ ಸಾಥ್

ನವದೆಹಲಿ: ದೆಹಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಗದ್ದುಗೆಗೇರಿರುವ ಆಮ್ ಆದ್ಮಿ ಪಕ್ಷದತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಕೈ ಜೋಡಿಸಲು ಇದೀಗ ದೇಶದ ಪ್ರಮುಖರು ನಾ ಮುಂದೆ ತಾ ಮುಂದೆ ಎಂಬಂತೆ ಬರುತ್ತಿದ್ದಾರೆ. ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಇದೊಂದು ಉತ್ತಮ ಬೆಳವಣಿಗೆ.
ಇದೀಗ ಆಮ್ ಆದ್ಮಿ ಪಕ್ಷದೊಂದಿಗೆ ಕೈ ಜೋಡಿಸಲು ಮುಂದಾಗಿರುವ ಪ್ರಮುಖ ವ್ಯಕ್ತಿಗಳ ಪಟ್ಟಿ ಇಂತಿದೆ.
ಕ್ಯಾಪ್ಟನ್ ಗೋಪಿನಾಥ್ (62)
ಏರ್ ಡೆಕ್ಕನ್ ವಿಮಾನಯಾನ ಆರಂಭಿಸಿದ ಕ್ಯಾಪ್ಟನ್ ಗೋಪಿನಾಥ್ ಜನವರಿ 3ರಂದು ಆಮ್ ಆದ್ಮಿ ಪಕ್ಷ (ಆಪ್) ಗೆ ಸೇರಿದ್ದಾರೆ. ಇವರು 2009ರಲ್ಲಿ ಬೆಂಗಳೂರು ದಕ್ಷಿಣವಲಯದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಎಎಪಿ ಅವರ ಭ್ರಷ್ಟಾಚಾರ ವಿರೋಧಿ ನಿಲುವನ್ನು ಮೆಚ್ಚಿ ತಾನು ಎಎಪಿಗೆ ಸೇರಿರುವುದಾಗಿ ಗೋಪಿನಾಥ್ ಹೇಳಿದ್ದಾರೆ.
ಮಲ್ಲಿಕಾ ಸಾರಾಭಾಯಿ (60)
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಟು ವಿರೋಧಿ, ನೃತ್ಯ ಕಲಾವಿದೆ, ನಟಿ ಹಾಗು ಸಮಾಜಸೇವಕಿ ಮಲ್ಲಿಕಾ ಸಾರಾಭಾಯಿ ಈ ವಾರ ಎಎಪಿಗೆ ಸೇರಿದ್ದಾರೆ. ಗಾಂಧೀನಗರದಿಂದ 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್. ಕೆ ಆಡ್ವಾಣಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಮತ್ತು ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಪುತ್ರಿಯಾದ ಈಕೆ 2002ರ ಗುಜರಾತ್ ಗಲಭೆಯ ಬಗ್ಗೆ ಟೀಕಾಪ್ರಹಾರ ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.
ಅಶತೋಶ್ (47)
ಐಬಿಎವ್7 ವಾಹಿನಿಯ ಹಿರಿಯ ಸಂಪಾದಕ ಮತ್ತು ಖ್ಯಾತ ಟೀವಿ ನಿರೂಪಕ ಅಶತೋಷ್ ಆಪ್ ಜತೆ ಸೇರುವುದಾಗಿ ಟ್ವೀಟ್ ಮಾಡಿದ್ದು, ಇದೀಗ ಎಎಪಿ ಜತೆ ಸೇರಿಸಿಕೊಂಡಿದ್ದಾರೆ.
ಮೀರಾ ಸನ್ಯಾಲ್ (52)
ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ (ಆರ್ಬಿಎಸ್, ಇಂಡಿಯಾ)ದ ಮಾಜಿ ಅಧ್ಯಕ್ಷ ಮತ್ತು ಸಿಇಓ ಮೀರಾ ಸನ್ಯಾಲ್ 2009ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ದಕ್ಷಿಣ ಮುಂಬೈಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಕೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಮತ್ತು ಗ್ರೇಟರ್ ಕೈಲಾಶ್ ಸೀಟಿನ ಅಭ್ಯರ್ಥಿಗಳ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.
ಸಮೀರ್ ನಾಯರ್ (49)
ಎನ್ಡಿಟಿವಿ ಮತ್ತು ಸ್ಟಾರ್ ಟೀವಿಯ ಮಾಜಿ ಸಿಇಓ ದೆಹಲಿ ಚುನಾವಣೆಗಿಂತ ಮುನ್ನವೇ ಎಎಪಿ ಸೇರಿದ್ದರು.
ವಿ.ಬಾಲಕೃಷ್ಣನ್ (48)
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಸಾಫ್ಟ್ವೇರ್ ಕಂಪನಿ ಇನ್ಫೋಸಿಸ್ ಬೋರ್ಡ್ ಮೆಂಬರ್ ಸ್ಥಾನದಿಂದ ಕೆಳಗಿಳಿದ ವಿ. ಬಾಲಕೃಷ್ಣನ್ ಸದ್ಯ ಪ್ರೈವೇಟ್ ಈಕ್ವಿಟಿ ಫಂಡ್ ಹೆಚ್ಚಳದ ಬಗ್ಗೆ ಗಮನ ಹರಿಸುತ್ತಿದ್ದಾರೆ. ದೆಹಲಿ ಚುನಾವಣೆಯಲ್ಲಿ ಆಪ್ ಜಯಗಳಿದ್ದು, ಹೊಸ ಕ್ರಾಂತಿಯೇ ಸರಿ. ಅದೇ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಆಪ್ ಪಕ್ಷದ ನಿಜವಾದ ಶಕ್ತಿ ಬಹಿರಂಗವಾಗಲಿದೆ ಎಂಬುದು ಬಾಲಕೃಷ್ಣನ್ ಅವರ ಆತ್ಮವಿಶ್ವಾಸದ ನುಡಿ.
ಕನುಭಾಯಿ ಕಲ್ಸಾರಿಯಾ (60)
ಗುಜರಾತ್ನ ಬಿಜೆಪಿ ಮಾಜಿ ಶಾಸಕ ಕನುಭಾಯಿ ಕಲ್ಸಾರಿಯಾ ಗುಜರಾತ್ನಲ್ಲಿನ ಭೂಮಿ ಮತ್ತು ಪರಿಸರ ಉಳಿಸಿ ಸಂಬಂಧಿ ಪ್ರತಿಭಟನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ.
ಅಲ್ಕಾ ಲಾಂಬಾ (38)
ಎನ್ಎಸ್ಯುಐ ಮಾಜಿ ಸದಸ್ಯೆ ಅಲ್ಕಾ ಲಾಂಬಾ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದ 10 ವರ್ಷಗಳ ನಂಟನ್ನು ತೊರೆದು ಕಳೆದ ವರ್ಷ ಡಿಸೆಂಬರ್ನಲ್ಲಿ ಎಎಪಿ ಸೇರಿದ್ದರು.
ಹೆಚ್ ಎಸ್ ಫೂಲ್ಕಾ (58)
ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆಯಾಗಿದ್ದಾರೆ ಹೆಚ್. ಎಸ್. ಫೂಲ್ಕಾ
ಆದರ್ಶ್ ಶಾಸ್ತ್ರಿ (40)
ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ತಮತು ಕಾಂಗ್ರೆಸ್ ನೇತಾರ ಅನಿಲ್ ಶಾಸ್ತ್ರಿ ಅವರ ಪುತ್ರ ಆದರ್ಶ್ ಶಾಸ್ತ್ರಿ ಆ್ಯಪಲ್ ಇಂಕ್ ಕಂಪನಿಯ ಸೇಲ್ಸ್ ಹೆಡ್ ಆಗಿದ್ದವರು ಪ್ರಸ್ತುತ ನೌಕರಿ ತೊರೆದು ಆಪ್ಗೆ ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


