ನಾರಾಯಣಮೂರ್ತಿ, ಮಲಾಲಾಗೆ 'ಬಸವಶ್ರೀ' ಪ್ರದಾನ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದ ವತಿಯಿಂದ ನೀಡಲಾಗುವ 2014ನೇ ಸಾಲಿನ 'ಬಸವಶ್ರೀ' ಪ್ರಶಸ್ತಿಯನ್ನು ಪಾಕಿಸ್ತಾನದ ಮಕ್ಕಳ ಹಕ್ಕು ಮತ್ತು ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯುಸಫ್ ಝೈ ಅನುಪಸ್ಥಿತಿಯಲ್ಲೇ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.
ನಾರಾಯಣಮೂರ್ತಿ ಅವರಿಗೆ ಶಿವಮೂರ್ತಿ ಮುರಾಘಾ ಶರಣರು ಇಂದು 'ಬಸವಶ್ರೀ' ಪ್ರಶಸ್ತಿ ಪ್ರದಾನ ಮಾಡಿದರು.
ಭದ್ರತೆಯ ಕಾರಣದಿಂದ ಮಲಾಲಾ ಅವರು ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ತಾವು ಖುದ್ದಾಗಿ ಲಂಡನ್‌ಗೆ ತೆರಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದಾಗಿ ಶ್ರೀಗಳು ತಿಳಿಸಿದ್ದಾರೆ.
ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮಠದಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಲಾಲಾಗೆ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.
16 ವರ್ಷ ವಯಸ್ಸಿನ ಪಾಕಿಸ್ತಾನದ ಸ್ವಾಟ್ ಜಿಲ್ಲೆಯ ಬಾಲಕಿ ಮಲಾಲಾ ಯುಸಫ್ ಝೈ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಈಕೆ ಧರ್ಮಾಂಧರ ಕುಕೃತ್ಯಕ್ಕೆ ತುತ್ತಾಗಿ ಸಾವಿನ ದವಡೆಯಿಂದ ಪಾರಾಗಿ ಸದ್ಯ ಇಂಗ್ಲೆಂಡ್‌ನಲ್ಲಿ ಶಿಕ್ಷಣ ಮುಂದುವರಿಸಿದ್ದಾಳೆ.
5 ಲಕ್ಷ ನಗದು: ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ತತ್ತ್ವ ಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರಿಗೆ ಹಾಗೂ ಶರಣರ ಆದರ್ಶಗಳನ್ನಾಧರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನ ಮಾಡುವ ಸಲುವಾಗಿ ಮುರುಘಾಮಠ ಸ್ಥಾಪಿಸಿರುವ ಪ್ರಶಸ್ತಿ ಇದಾಗಿದ್ದು, ಐದು ಲಕ್ಷ ರುಪಾಯಿಗಳ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
1997 ರಲ್ಲಿ ಆರಂಭಿಸಿದ ಈ ಪ್ರಶಸ್ತಿಯನ್ನು ಈ ಹಿಂದೆ ಬೆಲ್ದಾಳ ಶರಣರು, ದಿವಂಗತ ಹಿರೇಮಲ್ಲೂರು ಈಶ್ವರನ್, ಡಾ. ಎಚ್. ಸುದರ್ಶನ್, ಸಮಾಜ ಸೇವಕ ಅಣ್ಣಾ ಹಜಾರೆ, ಹೋರಾಟಗಾರ್ತಿ ಮೇಧಾ ಪಾಟ್ಕರ್, ಬೌದ್ಧ ಗುರು ದಲಾಯಿಲಾಮಾ, ಕ್ರಾಂತಿಕಾರಿ ಕವಿ ಗದ್ದರ್, ಡಾ. ವಂದನಾ ಶಿವ, ನೈಸರ್ಗಿಕ ಕೃಷಿಯ ಹರಿಕಾರ ಸುಭಾಷ್ ಪಾಳೇಕರ್, ಖ್ಯಾತ ಕಲಾವಿದೆ ಹಾಗೂ ಸಮಾಜ ಸೇವಾಕರ್ತೆ ಶಬಾನಾ ಆಜ್ಮಿ, ಕ್ರಾಂತಿಕಾರಿ ಸಮಾಜ ಸುಧಾರಕ ಸ್ವಾಮಿ ಅಗ್ನಿವೇಶ್, ಡಾ. ಕಿರಣ್ ಬೇಡಿ, ಪಿ.ಟಿ. ಉಷಾ ಮತ್ತು ಡಾ.ಎ.ಟಿ. ಆರ್ಯರತ್ನೆ, ರೈತ ಚಳವಳಿಯ ಇತಿಹಾಸದ ಧ್ರುವತಾರೆ ದಿ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹಾಗೂ ಶಂಕರ ಬಿದರಿ ಅವರಿಗೆ ನೀಡಿಗೌರವಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


