ಈಗಿನ ಸುದ್ದಿ

ಉಪ್ಪಿಯ 'ಬ್ರಹ್ಮ' ಯಾಕೆ ಹಿಟ್ ಆಗದೇ ಇರಬಹುದು?

ಉಪ್ಪಿಯ 'ಬ್ರಹ್ಮ' ಯಾಕೆ ಹಿಟ್ ಆಗದೇ ಇರಬಹುದು?
Published On :

ಉಪೇಂದ್ರ, ಪ್ರಣೀತ ಅಭಿನಯದ, ತಾಜ್‌ಮಹಲ್ ಚಂದ್ರು ನಿರ್ದೇಶನದ 'ಬ್ರಹ್ಮ' ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. 'ಬ್ರಹ್ಮ' ಯಾಕೆ ಹಿಟ್ಟಾಗದೇ ಇರಬಹುದು ಅನ್ನುವುದಕ್ಕೆ ಚಿತ್ರರಂಗದಲ್ಲಿ ಕೆಲವು ಥಿಯರಿ ಗಳು ಹುಟ್ಟಿವೆ. ಗಾಂಧಿನಗರದ ಈ ಚರ್ಚೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದೇವೆ. ಬ್ರಹ್ಮ ಚಿತ್ರಕ್ಕೆ ಯಾರೇ ಏನೇ ಹಣೆಬರಹ ಬರೆದರೂ ಹಿಟ್ ಆದಲ್ಲಿ ನಮಗಿಂತ ಖುಷಿ ಇನ್ಯಾರಿಗಾಗಲು  ಸಾಧ್ಯ?


1. ಜನ ಚೇಂಜ್ ಕೇಳ್ತಾರೆ
'ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ' ತರದ ಡಯಲಾಗುಗಳಿರುವ ಅನೇಕ ಚಿತ್ರಗಳು ತೋಪೆದ್ದು ಹೋಗಿವೆ, ಆದರೆ ಮೊದಲ ಬಾರಿ ಅದನ್ನು ಬಳಸಿದ್ದ ಉಪೇಂದ್ರ ಟ್ರೆಂಡ್ ಸೆಟ್ಟರ್ ಆದರು. 'ಓಂ', 'ಏ', 'ಉಪೇಂದ್ರ' ರೀತಿಯ ಆಫ್‌ಬೀಟ್ ಚಿತ್ರಗಳನ್ನು ಮಾಡಿ ಗೆದ್ದರು ಉಪೇಂದ್ರ. ಆದರೆ ಈಗ ಕಾಲ ಬದಲಾಗಿದೆ 'ಮುಂಗಾರು ಮಳೆ'ಯಂತಹ, ಉಪ್ಪಿ ಪುಸ್ತಕದ ಬದನೆಕಾಯಿಯೆಂದು ಹೇಳಿದ ಸಬ್ಜೆಕ್ಟ್ ಉಳ್ಳ ಚಿತ್ರಗಳೂ ಹಿಟ್ಟಾಗಿವೆ, ರಿಯಲಿಸ್ಟಿಕ್ ಆಗಿರುವ, ರಿಯಲಿಸಂಗೆ ಹೊಸ ಅರ್ಥ ಕೊಟ್ಟ ಸೂರಿಯ ಚಿತ್ರಗಳೂ ಹಿಟ್ಟಾಗಿವೆ. ಹೀಗೆ ಅರ್ಥಗಳು ಬದಲಾವಣೆಗೊಂಡಿರುವ ಕಾಲದಲ್ಲಿ 'ರಿಯಲ್ ಸ್ಟಾರ್‌' ಉಪೇಂದ್ರ ಮತ್ತೆ ಆಫ್‌ಬೀಟ್ ಚಿತ್ರಗಳನ್ನು ಮಾಡದ ಹೊರತು ಬೇರೆ ದಾರಿಯಿಲ್ಲ. ತಮ್ಮದೆ ನಿರ್ದೇಶನದ 'ಸೂಪರ್‌' ಬಿಟ್ಟರೆ ಅವರ ಬೇರೆ ಯಾವ ಚಿತ್ರಗಳೂ ಹೇಳಿಕೊಳ್ಳುವಷ್ಟು ಹಿಟ್ಟಾಗಿಲ್ಲ. ಉಪ್ಪಿ ಪುನಃ 'ಏ', 'ಉಪೇಂದ್ರ' ತರಹದ ಚಿತ್ರಗಳನ್ನು ಮಾಡಿದರೂ ಕಷ್ಟ, ಇನ್ನೇನಿದ್ದರೂ ಹೊಸತನ್ನೆ ಕೊಡಬೇಕು. 'ಲೂಸಿಯಾ' ಹುಳ ಬಿಟ್ಟ ಪವನ್ ಕುಮಾರ್ ಹೊಸತೊಂದು ಟ್ರೆಂಡ್ ಹುಟ್ಟು ಹಾಕಿದ್ದಾರೆ. ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ ಎಂಬುದನ್ನು ಇದು ಪ್ರೂವ್ ಮಾಡಿದೆ. ಡಯಲಾಗ್ ಹೇಳುವ ಧಾಟಿ ಇರಬಹುದು, ಚಿತ್ರಕತೆಯಿರಬಹುದು ಬಹಳ ಬದಲಾಗಿದೆ. 'ಸಿಂಪಲ್ಲಾಗೊಂದ್ ಲವ್ ಸ್ಟೋರಿ', 'ಗೊಂಬೆಗಳ ಲವ್‌', 'ಉಳಿದವರು ಕಂಡಂತೆ'ನಂತಹ ವಿಭಿನ್ನ ಚಿತ್ರಗಳನ್ನು ಕೊಡಬೇಕೆನ್ನುವ ಜಿದ್ದಿರುವ ಯುವ ಪಡೆಯೇ ಗಾಂಧಿನಗರದಲ್ಲಿ ಸನ್ನದ್ಧವಾಗಿದೆ. ನಟ ಶಿವರಾಜ್ ಕುಮಾರ್ ಕೂಡ ಹೊಸಬರ ಚಿತ್ರಗಳನ್ನು ಒಪ್ಪಿಕೊಂಡು ವಿಭಿನ್ನ ಚಿತ್ರಗಳನ್ನು ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. 'ಕಡ್ಡಿಪುಡಿ', 'ಭಜರಂಗಿ' ಇದಕ್ಕೆ ಸಾಕ್ಷಿ. ಬಹಳ ಹಿಂದೆಯೇ 'ಬುದ್ಧಿವಂತರಿಗೆ ಮಾತ್ರ' ಎಂದು ಹುಳ ಬಿಟ್ಟಿದ್ದ ಉಪ್ಪಿ ಈಗ 'ಅತಿ ಬುದ್ಧಿವಂತರಿಗೆ ಮಾತ್ರ' ಎಂದು ಹುಳ ಬಿಡಬೇಕಾಗಿದೆ. ತಮ್ಮ ಅದೇ ಹಳೆಯ ಗಡಸು ದನಿಯ ಧಾಟಿಯನ್ನು, ನಟನಾಶೈಲಿಯನ್ನು ಬದಲಾಯಿಸಿಕೊಂಡು ಹೊಸತನದೆಡೆಗೆ ತುಡಿಯಬೇಕಾಗಿದೆ.

2. ಸೌಂಡ್‌ಟ್ರ್ಯಾಕು ಸೌಂಡ್ ಮಾಡ್ತಿಲ್ಲ
ಬ್ರಹ್ಮ ಚಿತ್ರದ ಹಾಡುಗಳ್ಯಾವುವೂ ಜನರ ಬಾಯಲ್ಲಿ ನಲಿಯುತ್ತಿಲ್ಲ. ಯಾವುದೆ ಚಿತ್ರವಾದರೂ ಬಿಡುಗಡೆಗೆ ಮುಂಚೆ ಅದರ ಹಾಡುಗಳು ಹಿಟ್ಟಾಗಬೇಕು ಮೊದಲು. ಆಗಲೇ ಜನರಿಗೆ ಕೊಂಚವಾದರೂ ಚಿತ್ರದ ಬಗ್ಗೆ ಆಸಕ್ತಿ ಮೂಡುವುದು ಎಂಬುದು ಇತ್ತೀಚಿನ ಟ್ರೆಂಡ್.  ಹಾಡುಗಳು ಗೆದ್ದರೆ ಚಿತ್ರ ಅರ್ಧ ಗೆದ್ದಂತೆ ಎಂಬ ಮಾತಿದೆ. ಹಿಟ್ ಹಾಡುಗಳಿಂದ ಚಿತ್ರ ಹಿಟ್ಟಾಗುತ್ತದೆ ಎನ್ನಲಾಗದಿದ್ದರೂ ಎಲ್ಲಾ ಹಿಟ್ ಚಿತ್ರಗಳ ಯಶಸ್ಸಿನ ಹಿಂದೆ ಹಿಟ್ ಹಾಡುಗಳಿವೆ ಎನ್ನುವುದು ಗಾಂಧಿನಗರದ ಫಾರ್ಮ್ಯುಲಾ. ಯಾವುದೆ ಹಿಟ್ ಚಿತ್ರಗಳ ಉದಾಹರಣೆ ತೆಗೆದುಕೊಂಡರೂ ಅದರಲ್ಲಿನ ಹಾಡುಗಳು ಚೆನ್ನಾಗಿವೆ ಎಂಬುದು ಸುಳ್ಳಲ್ಲ. 'ಮುಂಗಾರು ಮಳೆ', 'ದುನಿಯಾ', 'ಜಾಕಿ' ಮುಂತಾದವುಗಳನ್ನು ಈ ಸಾಲಿಗೆ ಸೇರಿಸಬಹುದು. ಯೋಗರಾಜ್ ಭಟ್ರು ಬರೆದ ಹಾಡೊಂದಿದ್ದರೆ ಸಾಕು, ಚಿತ್ರ ಹಿಟ್ ಆಗುತ್ತದೆ ಎಂಬ ಮಾತುಗಳೂ ಗಾಂಧಿನಗರದಲ್ಲಿ ಓಡಾಡುತ್ತಿವೆ. 'ಹಳೆ ಪಾತ್ರೆ ಹಳೆ ಕಬ್ಣ', ''ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ' ಹಾಡಿರಬಹುದು, ತೀರಾ ಇತ್ತೀಚಿಗೆಷ್ಟೆ ಬಿಡುಗಡೆಯಾದ ಶರಣ್ ನಟನೆಯ ಹಿಟ್ ಚಿತ್ರ 'ವಿಕ್ಟರಿ'ಯ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು' ಇರಬಹುದು, ಭಟ್ರು ಬರೆದ ಎಲ್ಲ ಹಾಡುಗಳೂ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಬ್ರಹ್ಮ ಚಿತ್ರದಲ್ಲಿ ಭಟ್ರ ಹಾಡುಗಳಿಲ್ಲ ಎನ್ನುವುದು ಚಿತ್ರದ ಮೈನಸ್ ಪಾಯಿಂಟ್. ಆದ್ದರಿಂದ ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಗುರುಬಲ ಬರೆದಿಲ್ಲ ಬ್ರಹ್ಮ.

3. ಉಪೇಂದ್ರ, ಪ್ರಣೀತರ ಕೆಮಿಸ್ಟ್ರಿ

ಬ್ರಹ್ಮ ಚಿತ್ರದ ನಾಯಕಿ ಪ್ರಣೀತ ಪರಭಾಷೆಯ ಚಿತ್ರಗಳಲ್ಲೆಲ್ಲಾ ನಟಿಸಿದ್ದರೂ ನಟನೆಯ ವಿಷಯಕ್ಕೆ ಬಂದಾಗ ಅಷ್ಟಕ್ಕಷ್ಟೆ. ದಂತದ ಬೊಂಬೆಯಂತಿರುವ ಅವರನ್ನು ಚಿತ್ರಕ್ಕೆ ಆರಿಸುವುದು ಕೇವಲ ಗ್ಲಾಮರ್ ತರಲು ಎಂಬ ಮಾತು ಕೂಡ ಇದೆ. ಪ್ರಣೀತರನ್ನು ಯಾರೇ ನೆನೆಸಿಕೊಂಡಾಗಲೂ ಹಾಡುಗಳು ಜ್ಞಾಪಕಕ್ಕೆ ಬರುತ್ತವೆಯೇ ಹೊರತು ಚಿತ್ರವಲ್ಲ ಎನ್ನುವುದು ಕೂಡ ದಿಟ. ಆದ್ದರಿಂದ ಅವರಿಂದ ಚಿತ್ರದಲ್ಲಿ ಹೆಚ್ಚಿನದೇನನ್ನೂ ನಿರೀಕ್ಷಿಸುವ ಹಾಗಿಲ್ಲ. ಕಾಶ್ಮೀರಿ ಸೇಬಿನಂತೆ ಬೆಳ್ಳಗೆ, ಕೆಂಪಗೆ ಹೊಳೆಯುವ ಪ್ರಣೀತ ರಫ್ ಆ್ಯಂಡ್ ಟಫ್ ಉಪೇಂದ್ರರಿಗೆ ಸರಿ ಜೋಡಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ನಟನೆಯ ವಿಷಯದಲ್ಲಂತೂ ಅವರಿಬ್ಬರ ನಡುವೆ ಹೋಲಿಕೆಯೆ ಬೇಡ. ಹೀಗಾಗಿ ಉಪೇಂದ್ರ ಹಾಗೂ ಪ್ರಣೀತ ಕೆಮಿಸ್ಟ್ರಿ ವರ್ಕ್ ಆಗೋದು ಡೌಟು. ಇಷ್ಟಕ್ಕೂ ಉಪೇಂದ್ರರನ್ನು ಯಾವತ್ತೂ ಪ್ರೇಕ್ಷಕರು ಪ್ರೇಯಸಿಯೊಡನೆ ಮರ ಸುತ್ತುತ್ತ ಡ್ಯಾನ್ಸ್ ಮಾಡುವ ನಾಯಕನ ಪಾತ್ರಗಳಿಗಿಂತ ರಿಯಲಿಸ್ಟಿಕ್ ಪಾತ್ರಗಳಲ್ಲಿ ನೋಡಲಿಚ್ಛಿಸುತ್ತಾರೆ. ಆ ದೃಷ್ಟಿಯಲ್ಲಿ ನೋಡುವುದಾದರೆ ಉಪೇಂದ್ರರಿಗೆ ಉಪೇಂದ್ರರಂತಹ ನಿರ್ದೇಶಕ ಇನ್ನೂ ಸಿಕ್ಕಿಲ್ಲ ಅಂತಾನೆ ಹೇಳಬಹುದು.

4. ಚಿತ್ರದ ಕತೆ ಚಿತ್ರಾನ್ನ
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಚಿತ್ರದ ತಾರಾಗಣ ಎರಡು ಭಾಷೆಗಳ ಸಮ್ಮಿಶ್ರ ಸರಕಾರದ ಹಾಗಿದೆ. ಚಿತ್ರ ತಂಡದವರೇ ಹೇಳಿಕೊಂಡಿರುವ ಹಾಗೆ ಉಪ್ಪಿಯವರಿಲ್ಲಿ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಚಿತ್ರದ ಕತೆ 16ನೇ ಶತಮಾನದಿಂದ ಪ್ರಾರಂಭಗೊಂಡು ಪ್ರಸ್ತುತ ಕಾಲಮಾನಕ್ಕೆ ಕಾಲಿಡಲಿದೆಯಂತೆ. ಚಂದ್ರುರವರ ಈ ಚಿತ್ರ, ಹಿಂದೆ ಬಂದ ತೆಲುಗಿನ 2-3 ಚಿತ್ರಗಳ ಕಾಪಿಯಂತೆ ಕಾಣುತ್ತಿದೆ. ಚಿತ್ರದಲ್ಲಿ ಉಪ್ಪಿ 16ನೇ ಶತಮಾನದ ರಾಜನಾಗಿ ಮತ್ತು ಗ್ಯಾಂಗ್ ಸ್ಟರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಇದು ತಿಳಿಯುತ್ತದೆ. ಪೌರಾಣಿಕ ಮತ್ತು ಪ್ರಸ್ತುತ ಜಗತ್ತಿನ ಮಿಕ್ಸ್ ಕತೆಯುಳ್ಳ ಚಿತ್ರಗಳು ತೆಲುಗಿನಲ್ಲಿ ಬಂದಿವೆ ಅಲ್ಲದೆ ಕನ್ನಡದಲ್ಲು ಅನೇಕ ಚಿತ್ರಗಳಲ್ಲಿ ಕಾಪಿ ಮಾಡಿದ್ದಾರೆ. ಚಿತ್ರದಲ್ಲಿ ಗ್ಯಾಂಗ್ ಸ್ಟರ್  ಬ್ರಹ್ಮನನ್ನು ಹಿಡಿಯಲು ಪೋಲಿಸ್ ಅಧಿಕಾರಿಯೊಬ್ಬನನ್ನು ನಿಯುಕ್ತಿಗೊಳಿಸಲಾಗುತ್ತದೆ, ಆದರೆ ಅಷ್ಟರಲ್ಲಿ ಒಂದು ಸೀಕ್ರೆಟ್ ಮಿಷನ್ ಮೇಲೆ ಬ್ರಹ್ಮ ಮಲೇಶ್ಯಕ್ಕೆ ತಪ್ಪಿಸಿಕೊಂಡು ಹೋಗುತ್ತಾನೆ, ಅಲ್ಲಿ ನಾಯಕಿ ಪ್ರಣೇತಾಳ ಪ್ರೀತಿಯ ಬಲೆಯಲ್ಲಿ ಬಿದ್ದರೂ ಆಕೆಯ ಪ್ರೀತಿಯನ್ನು ತಿರಸ್ಕರಿಸಿ ಭಾರತಕ್ಕೆ ಬರುತ್ತಾನೆ, ನಾಯಕಿ ನಾಯಕನನ್ನರಸಿ ಭಾರತಕ್ಕೆ ಬರುತ್ತಾಳೆ. ನಂತರ ಕತೆ ತೆರೆದುಕೊಳ್ಳುತ್ತಾ ಬೇರೆಯೇ ತಿರುವನ್ನು ಪಡೆಯುತ್ತಾ ಸಾಗಲಿದೆ.

5. ರಾಜಮೌಳಿ vs ಚಂದ್ರು
ಚಂದ್ರು ಹಿಂದೆ ಅನೇಕ ಚಿತ್ರಗಳನ್ನು ಕೊಟ್ಟಿದ್ದರೂ ಯಾವುದೂ 'ತಾಜ್‌ಮಹಲ್‌'ನಷ್ಟು ಹೆಸರು ತಂದುಕೊಟ್ಟಿಲ್ಲ. ಆದ್ದರಿಂದ ಅವರ ಹೆಸರು ನೋಡಿಕೊಂಡು ಚಿತ್ರ ನೋಡಲು ಬರುವ ಮಂದಿ ಕಡಿಮೆ. ಉಪ್ಪಿ, ಶೂಟಿಂಗ್ ಸಂದರ್ಭದಲ್ಲಿ ಚಂದ್ರು ಕುರಿತು 'ನೀವು ರಾಜಮೌಳಿ ತರಹದ ನಿರ್ದೇಶಕರು' ಎಂದು ಹೊಗಳಿದ್ದರಂತೆ. ಯಾಕೋ ಉಪ್ಪಿ ಹೊಗಳಿದ್ದೋ ಕಾಲೆಳೆದಿದ್ದೋ ಎಂದನುಮಾನ ಮೂಡುತ್ತಿದೆ. ತೆಲುಗಿನಲ್ಲಿ ಅರುಂಧತಿ, ಮಗಧೀರದಂತಹ ಚಿತ್ರಗಳು ವಿಶ್ವಾದ್ಯಂತ ಜನ ಮೆಚ್ಚುಗೆ ಗಳಿಸಿತು. ನಂತರವೇ ಈ ಅಲೆ ಕನ್ನಡದಲ್ಲೂ ತಟ್ಟಿದ್ದು, ಹಾಗೂ ತಟ್ಟುತ್ತಲೇ ಇರುವುದು. ಇದೇ ತರಹದ ಕತೆಯುಳ್ಳ ಸಾರಥಿ, ಜಯಮ್ಮನ ಮಗ, ಭಜರಂಗಿ ಉದಾಹರಿಸಬಹುದು. ಪರಭಾಷೆಯ ಹಿಟ್ ಚಿತ್ರಗಳ ಫಾರ್ಮ್ಯುಲಾ ಬಳಸಿ ಕನ್ನಡ ಚಿತ್ರ ಮಾಡುವುದು ಹೊಸತೇನಲ್ಲ. ರಾಜಮೌಳಿ ನಿರ್ದೇಶನದ ತೆಲುಗಿನ ಮಗಧೀರ, ಸೋಲಿನ ಸುಳಿಯಲ್ಲಿದ್ದ ನಾಯಕ ಚಿರಂಜೀವಿ ಪುತ್ರ ರಾಮ್ ಚರಣ್ ಗೆ ಲೈಫ್ ಕೊಟ್ಟ ಚಿತ್ರ. ರಾಜಮೌಳಿಯ ಇತರ ಚಿತ್ರಗಳನ್ನು ನೋಡಿದರೆ ಎಂತಹವರಿಗೂ ಮೊದಲ ನೋಟಕ್ಕೆ ತಿಳಿಯುವುದೇನೆಂದರೆ ಅವರ ಚಿತ್ರಗಳಲ್ಲಿ ನಾಯಕ ಬಳಸುವ ಆಯುಧಗಳು ಹೈಲೈಟೆಂದು. ರಾಜಮೌಳಿಯವರು ಅತ್ಯಂತ ಶ್ರದ್ಧೆ ವಹಿಸಿ ತಮ್ಮ ಚಿತ್ರದ ನಾಯಕರ ಆಯುಧಗಳನ್ನು ವಿನ್ಯಾಸಗೊಳಿಸುತ್ತಾರೆ ಎಂಬ ಮಾತಿದೆ. ಅದೇನೆ ಇರಲಿ ಈಗ ಆ ವಿಷಯ ಯಾಕೆ ಬಂತು ಅಂದ್ರೆ ಬ್ರಹ್ಮ ಚಿತ್ರದ ಪೋಸ್ಟರ್ ಗಳಲ್ಲಿ ನಾಯಕ ಉಪೇಂದ್ರ ಹಿಡಿದಿರುವ ಆಯುಧಕ್ಕೂ, ರಾಜಮೌಳಿ 2006ರಲ್ಲಿ ವಿಕ್ರಮಾರ್ಕುಡು ಚಿತ್ರದಲ್ಲಿ ರವಿತೇಜರಿಗೆ ಕೊಟ್ಟ ತುದಿಯಲ್ಲಿನ ಚಕ್ರಾಕಾರದ ಆಯುಧಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಇನ್ನೊಂದು ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಬ್ರಹ್ಮ ನಿರ್ದೇಶಕ ಆರ್. ಚಂದ್ರು ಕೂಡಾ ರಾಜಮೌಳಿಯಂತೆಯೇ ತಮ್ಮ ಚಿತ್ರದ ಪೋಸ್ಟರ್ ಗಳಲ್ಲಿ ತಮ್ಮ ಹೆಸರನ್ನು ಸೀಲು ಒತ್ತಿರುವಂತೆ ತೋರಿಸುತ್ತಾರೆ. ರಾಜಮೌಳಿಯಿಂದ ಇಷ್ಟೆಲ್ಲವನ್ನೂ ಕಾಪಿ ಮಾಡುವ ಚಂದ್ರು ನಿರ್ದೇಶನದ ವಿಷಯಕ್ಕೆ ಬಂದರೆ ಮಾತ್ರ ಅವರಿಬ್ಬರ ನಡುವೆ ಅಜಗಜಾಂತರ ವ್ಯತ್ಯಾಸ. ಒಂದೇ ತರಹದ ಚಿತ್ರಗಳನ್ನು ಎಷ್ಟು ದಿನ ಅಂತ ತಾನೆ ಸಹಿಸಿಕೊಂಡಾರು ಕನ್ನಡ ಪ್ರೇಕ್ಷಕರು, ಆದ್ದರಿಂದ ಬೇರೆ ಶೇಡ್ ಎಂದು ಚಿತ್ರತಂಡ ಹೇಳಿಕೊಳ್ಳುತ್ತಿದ್ದರೂ ಚಿತ್ರ'ಬ್ರಹ್ಮ'ರು ತಾಜ್ಮಹಲ್ ಚಂದ್ರು ತಾಜ ಶೇಡ್ ತರಬಲ್ಲರೆ ಕಾದು ನೋಡಬೇಕಿದೆ.

- ಹರ್ಷವರ್ಧನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.