ಇಂದಿನಿಂದ ಸೇನಾ ಮುಖ್ಯಸ್ಥರ ಚೀನಾ ಪ್ರವಾಸ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಅವರು ಬುಧವಾರದಿಂದ ಚೀನಾ ಪ್ರವಾಸಕ್ಕೆ ತೆರಳಲಿದ್ದು, ಗಡಿ ಅತಿಕ್ರಮಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ಮಾಡುವ ಸಾಧ್ಯತೆ ಇದೆ.
ಇನ್ನು ಕೆಲವೇ ವಾರಗಳಲ್ಲಿ ನಿವೃತ್ತರಾಗಲಿರುವ ಜನರಲ್ ಬಿಕ್ರಮ್ ಸಿಂಗ್ ಅವರು, ಇಂದಿನಿಂದ ನಾಲ್ಕು ದಿನಗಳ ಕಾಲ ಚೀನಾ ಪ್ರವಾಸ ಕೈಗೊಂಡಿದ್ದಾರೆ.ಈ ನಾಲ್ಕು ದಿನಗಳ ಅವಧಿಯಲ್ಲಿ ಅವರು ಚೀನಾ ಯೋಧರಿಂದ ಗಡಿ ಅತಿಕ್ರಮಣ, ಚೀನಿ ಭೂಪಟದಲ್ಲಿ ಅರುಣಾಚಲ ಪ್ರದೇಶದ ಸೇರ್ಪಡೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಭಾರತ ಮತ್ತು ಚೀನಾ ದೇಶಗಳ ಗಡಿಯಲ್ಲಿ 'ಶಾಂತಿ ಸ್ಥಾಪನೆ' ಪ್ರವಾಸದ ಪ್ರಮುಖ ವಿಚಾರವಾಗಿದ್ದು, ಉಭಯ ದೇಶಗಳ ಯೋಧರ ನಡುವಿನ ಜಂಟಿ ಸಮರಾಭ್ಯಾಸದ ಕುರಿತಾಗಿಯೂ ಸೇನಾ ಮುಖ್ಯಸ್ಥರು, ಚೀನಾ ಸೇನಾ ಮುಖ್ಯಸ್ಥರೊಂದಿಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಅಲ್ಲದೆ ಚೀನಿ ಯೋಧರ ಗಡಿ ಅತಿಕ್ರಮಣ ವಿಚಾರ ಮತ್ತು ಅರುಣಾಚಲ ಪ್ರದೇಶ ವಿಚಾರಗಳ ಕುರಿತು ಬಿಕ್ರಮ್ ಸಿಂಗ್ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೇ ಪ್ರವಾಸದ ಅವಧಿಯಲ್ಲಿ ಬಿಕ್ರಮ್ ಸಿಂಗ್ ಅವರು ಚೀನಾ ಉಪಾಧ್ಯಕ್ಷ ಲಿಯೌಂಚೌ, ಆರ್ಮಿ ಮುಖ್ಯ ಕಾರ್ಯದರ್ಶಿ ಫಾಂಗ್ ಫೆಂಗ್ಯೂ, ಚೀನಾ ವಿದೇಶಾಂಗ ಸಚಿವ ಝಾಂಗೆ ಸ್ಯೂ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಚೀನಾ ಪ್ರವಾಸದಲ್ಲಿರುವಾಗಲೇ ಚೀನಿ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ್ದ ವಿವಾದಿತ ಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಲಡಾಕ್ ಗಡಿಯ ಕೆಲ ಪ್ರದೇಶಗಳು ಸೇರಿಕೊಂಡಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ, ಚೀನಾ ವಿರುದ್ಧ ಕಿಡಿಕಾರಿತ್ತು. ಅಲ್ಲದೆ ಚೀನೀ ಆರ್ಮಿಯ ಕಿಡಿಗೇಡಿ ಕೃತ್ಯಕ್ಕೆ ಭಾರತೀಯ ಮಾಧ್ಯಮಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


