ಈರುಳ್ಳಿ ಬೆಲೆ ಏರಿಕೆ: 'ದಾಸ್ತಾನುಗಳ ಮೇಲೆ ಕಣ್ಗಾವಲು ಅವಶ್ಯಕ'

ನವದೆಹಲಿ: ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ದಾಸ್ತಾನುಗಳ ಮೇಲೆ ಕಣ್ಗಾವಲು ಇಡುವುದು ಅವಶ್ಯಕ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾಕಷ್ಟು ಈರುಳ್ಳಿ ಮತ್ತು ಆಲೂಗಡ್ಡೆಯ ದಾಸ್ತಾನಿದೆ. ಹೀಗಾಗಿ ದೇಶದ ಜನತೆ ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ. ಮಧ್ಯವರ್ತಿಗಳು ತಮ್ಮ ಬಳಿ ಅತ್ಯಧಿಕ ಪ್ರಮಾಣದ ದಾಸ್ತಾನು ಇಟ್ಟುಕೊಂಡಿರುವುದೇ ಬೆಲೆ ಏರಿಕೆಗೆ ಕಾರಣ. ಹೀಗಾಗಿ ಎಲ್ಲ ದಾಸ್ತಾನು ಕೇಂದ್ರಗಳ ಮೇಲೆ ಕಣ್ಗಾವಲು ಇಡುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಿನೇ ದಿನೇ ಏರಿಕೆಯತ್ತ ಮುಖ ಮಾಡಿರುವ ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಿಂದಾಗಿ ಕೇಂದ್ರಸರ್ಕಾರ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಬೆಲೆ ನಿಯಂತ್ರಣಕ್ಕಾಗಿ ಈರುಳ್ಳಿ ಮತ್ತು ಆಲೂಗಡ್ಡೆ ರಫ್ತು ತೆರಿಗೆಯನ್ನು ಶೇ.67ರಷ್ಟು ಏರಿಕೆ ಮಾಡಿತ್ತು. ಈ ಹಿಂದೆ ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿರುವುದರಿಂದ ದೇಶದ ಪ್ರಮುಖ ದಾಸ್ತಾನುದಾರರು ತಮ್ಮ ಬಳಿ ಇದ್ದ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದರು. ಇದರಿಂದ ದೇಶಿಯಾ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆಯಾಗಿ ಈರುಳ್ಳಿ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈರುಳ್ಳಿಯ ಪ್ರಮುಖ ಮಾರುಕಟ್ಟೆಯಾದ ನಾಸಿಕ್ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಪ್ರತಿ ಕಿಲೋ ಈರುಳ್ಳಿ ದರ 15ರಿಂದ 20 ರುಪಾಯಿ ಇತ್ತು. ಆದರೆ ಇಂದು 30ರಿಂದ 32 ರುಪಾಯಿಗೆ ಏರಿಕೆಯಾಗಿದೆ.
ಅಲ್ಲದೆ ಮುಂಗಾರು 3 ವಾರಗಳ ತಡವಾಗಿ ಆಗಮಿಸಿದ್ದರಿಂದಲೇ ಬಿತ್ತನೆ ತಡವಾಗಿದೆ. ಹೀಗಾಗಿ ಸಾಮಾನ್ಯವಾಗಿಯೇ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಪ್ರಮಾಣದಲ್ಲಿಯೂ ಕುಸಿತವಾಗಿದ್ದು, ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


