ಈಗಿನ ಸುದ್ದಿ

ಲೈಸೆನ್ಸ್‌ಗಾಗಿ ಬೀದಿ ವ್ಯಾಪಾರಿಗಳು ಆಗ್ರಹ

Published On :

ಬೆಂಗಳೂರು: ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪರವಾನಗಿ ನೀಡುವಂತೆ ಮತ್ತು ತಮ್ಮ ಸಮಸ್ಯೆಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಬೀದಿ ವ್ಯಾಪಾರಿ ಸಂಫಟನೆಗಳ ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರು, ಸರ್ಕಾರವು ಬೀದಿ ವ್ಯಾಪಾರಿಗಳಿಗೆ ಸಮಾಜದಲ್ಲಿ ಸ್ಥಾನವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದೆ. ಮಹಿಳೆಯರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ನೀಡಲು ಇಂದಿನ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಬೀದಿ ವ್ಯಾಪಾರಿಗಳ ಮೇಲಿನ ಪೊಲೀಸರ ಮಿತಿ ಮೀರುತ್ತಿದೆ. ಬಿಬಿಎಂಪಿಯೂ ಸಹ ಮಾಹಿತಿ ನೀಡದೆಯೇ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಿ, ಜಾಗ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬೀದಿ ವ್ಯಾಪಾರಿಗಳ ಸಂಫಟನೆಯ ಅಧ್ಯಕ್ಷ ವಿನಯ್ ಅವರು, ಬಿಬಿಎಂಪಿ ಬೀದಿ ವ್ಯಾಪಾರಸ್ಥರ ಮೇಲೆ ನಡೆಸುತ್ತಿರುವ ದೌರ್ಜನ್ಯ ಸರಿಯಲ್ಲ. ಬಿಬಿಎಂಪಿ ತನ್ನ ಕರ್ತವ್ಯ ನಿರ್ವಹಿಸಲು ನಾವು ಅನುವು ಮಾಡಿಕೊಡುತ್ತೇವೆ. ಅದಕ್ಕೆ ನಮ್ಮ ನಮ್ಮ ಬೆಂಬಲವಿದ್ದೇ ಇರುತ್ತದೆ. ಆದರೆ ಯಾವುದೇ ಕಾರ್ಯವನ್ನು ಮಾಡಬೇಕಾದರೆ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಮೊದಲೇ ಮಾಹಿತಿ ನೀಡಿ ಕೆಲಸ ಮಾಡಬೇಕಾದದ್ದು, ಬಿಬಿಎಂಪಿಯ ಜವಾಬ್ದಾರಿಯುತ ಕಾರ್ಯವಾಗಿರುತ್ತದೆ. ಆದರೆ ಇಂದು ಅಧಿಕಾರಿಗಳು ವಿನಾ ಕಾರಣ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದ್ದು, ಇದನ್ನು ಸಂಫಟನೆ ಒಪ್ಪುವುದಿಲ್ಲ. ಬಿಬಿಎಂಪಿ ನಮಗೂ ಪರವಾನಗಿಯನ್ನು ನೀಡಿ ತೆರಿಗೆಯನ್ನು ತೆಗೆದುಕೊಳ್ಳಲಿ ಅದಕ್ಕೆ ನಾವು ತಯಾರಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಸಿಟಿ ಮಾರ್ಕೆಟ್‌ನ ಬೀದಿ ವ್ಯಾಪಾರಿ ಸಂಘಟನೆಯ ಅಧ್ಯಕ್ಷ ಎಂ.ಮುತ್ತು, ಸಿಟಿ ಮಾರ್ಕೆಟ್ ಹೊಸ ಆಯಾಮದ ಯೋಜನೆಗೆ ನಮ್ಮ ಬೆಂಬಲವಿದೆ. ಆದರೆ ಬೀದಿ ವ್ಯಾಪಾರಿಗಳಿಗೆ ಸೂಕ್ತ ಆಧಾರ ಅಥವಾ ಪರ್ಯಾಯ ಜಾಗ ನೀಡಿ ಕಾರ್ಯ ಪ್ರಾರಂಭಿಸುವುದು ಉತ್ತಮ. ಆದರೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆಯೇ ರಾತ್ರಿ ವೇಳೆಯಲ್ಲಿ ತಮ್ಮ ಕಾರ್ಯಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ಸಾವಿರಾರು ಬೀದಿ ವ್ಯಾಪಾರಿಗಳ ಬದುಕು ಬೀದಿಗೆ ಬೀಳುವಂತಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಿ ಬೀದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕೆಂದು ಅವರು ಮನವಿ ಮಾಡಿದರು.

ಅಲ್ಲದೆ ಅಸಂಘಟಿತ ಭಾಗವಾಗಿರುವ ಬೀದಿ ವ್ಯಾಪಾರಿಗಳನ್ನು ಒಗ್ಗೂಡಿಸುವ ದಿಸೆಯಿಂದ ಮತ್ತು ಅವರಿಗೆ ಬೀದಿ ವ್ಯಾಪಾರಿಗಳ ಕಾನೂನಿನ ಅರಿವು ಮೂಡಿಸುವುದರಿಂದ ಬೃಹತ್ ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟವನ್ನು ಸ್ಥಾಪಿಸಿದ್ದು, ದೌರ್ಜನ್ಯಕ್ಕೊಳಗಾಗಿರುವ ಅಥವಾ ಸಹಾಯ ಪಡೆಯಲಿಚ್ಛಿಸುವ ಬೀದಿ ವ್ಯಾಪಾರಿಗಳು ನಮ್ಮ ಸಂಘಟನೆಯನ್ನು ಸಂಪರ್ಕಿಸಬಹುದು ಎಂದು ಎಂ.ಮುತ್ತು ತಿಳಿಸಿದರು.

ಬೃಹತ್ ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ
ರಂಗಸ್ವಾಮಿ: 9845637421,
ವಿನಯ್: 9880595032
ಎಸ್.ಬಾಬು: 988031961

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.