ಈಗಿನ ಸುದ್ದಿ

ಡೀವಿ ಬಜೆಟ್‌ನಲ್ಲಿ ದೇಶದ ಪ್ರಥಮ ಬುಲೆಟ್ ರೈಲು ಘೋಷಣೆ

ಡೀವಿ ಬಜೆಟ್‌ನಲ್ಲಿ ದೇಶದ ಪ್ರಥಮ ಬುಲೆಟ್ ರೈಲು ಘೋಷಣೆ
Published On :

ನವದೆಹಲಿ: ಮಂಗಳವಾರ ರೇಲ್ವೇ ಬಜೆಟ್ ಮಂಡನೆ ಮಾಡಿರುವ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶದ ಪ್ರಪ್ರಥಮ ಬುಲೆಟ್ ರೈಲು ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಆರಂಭಿಕ ಹಂತವಾಗಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಪ್ರಥಮ ಬುಲೆಟ್ ರೈಲನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಒಂದು ಬುಲೆಟ್ ರೈಲನ್ನು ಓಡಿಸಲು ಸುಮಾರು 9 ಲಕ್ಷ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಬುಲೆಟ್ ರೈಲು ಆರಂಭಿಸಲು ಸುಮಾರು 60 ಸಾವಿರ ಕೋಟಿ ವೆಚ್ಚ ತಗುಲಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಚೀನಾ ಮತ್ತು ಜಪಾನ್ ದೇಶಗಳಲ್ಲಿ ತನ್ನ ವೇಗದಿಂದಲೇ ಖ್ಯಾತಿಗಳಿಸಿರುವ ಬುಲೆಟ್ ರೈಲುಗಳು ಕೆಲವೇ ನಿಮಿಷಗಳ ತನ್ನ ನಿಗದಿತ ನಿಲ್ದಾಣಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ.

ಬುಲೆಟ್ ರೈಲಿನ ವೇಗ ಸಾಮಾನ್ಯ ರೈಲುಗಳಿಗಿಂತಲೂ ಹೆಚ್ಚಾಗಿದ್ದು, ಗಂಟೆಗೆ ಕನಿಷ್ಟ 200 ಕಿ.ಮೀನಿಂದ ಗರಿಷ್ಟ 250 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಚೀನಾ ಮತ್ತು ಜಪಾನ್ ದೇಶಗಳು ಅತಿ ವೇಗದ ಬುಲೆಟ್ ರೈಲುಗಳನ್ನು ಹೊಂದಿರುವ ಖ್ಯಾತಿಗಳಿಸಿವೆ. ಚೀನಾದಲ್ಲಿರುವ ಡಿ ಕ್ಯಾಟೆಗರಿಯ ಬುಲೆಟ್ ರೈಲಿನ ವೇಗ ಪ್ರತಿ ಗಂಟೆಗೆ ಕನಿಷ್ಟ 200 ಕಿ.ಮೀಗಳಾಗಿದ್ದು, ಗರಿಷ್ಟ 300 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಆರಂಭಿಕ ಹಂತದಲ್ಲಿ ಮುಂಬೈನಿಂದ ಅಹಮಾದಾಬಾದ್ ನಡುವೆ ಬುಲೆಟ್ ರೈಲು ಓಡಿಸಲು ಯೋಜನೆ ರೂಪಿಸಲಾಗಿದ್ದು, ಸುರಕ್ಷತಾ ದೃಷ್ಟಿಕೋನದಿಂದ ಬುಲೆಟ್ ರೈಲಿನ ವೇಗವನ್ನು ಆರಂಭಿಕ ಹಂತದಲ್ಲಿ ಕಡಿತಗೊಳಿಸಿ ಪ್ರತಿ ಗಂಟೆಗೆ 160 ಕಿ.ಮೀ ನಿಂದ 200 ಕಿ.ಮೀಗಳಿಗೆ ಮಿತಿಗೊಳಿಸಲಾಗುವುದು ಎಂದು ಸದಾನಂದಗೌಡ ಅವರು ಸದನಕ್ಕೆ ವಿವರಿಸಿದರು.

ಅಲ್ಲದೆ ಬುಲೆಟ್ ರೈಲನ್ನು ಓಡಿಸಲು ವಿಶೇಷ ಹಳಿಗಳ ನಿರ್ಮಾಣದ ಅವಶ್ಯಕತೆ ಇದ್ದು, ಇದಕ್ಕಾಗಿ ಸುಮಾರು 9 ಲಕ್ಷ ಕೋಟಿ ವೆಚ್ಚವಾಗಬಹುದು ಮತ್ತು ರೈಲು ಆರಂಭಿಸಲು ಸುಮಾರು 60 ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಸದಾನಂದಗೌಡ ಅವರು ತಿಳಿಸಿದರು.

ದೆಹಲಿಯಿಂದ ನಾಲ್ಕು ಸೆಮಿ ಬುಲೆಟ್ ರೈಲುಗಳು
ಇದೇ ವೇಳೆ ದೇಶದ ವಿವಿಧೆಡೆಯಿಂದ 4 ಸೆಮಿ ಬುಲೆಟ್ ರೈಲುಗಳನ್ನು ಓಡಿಸುವುದಾಗಿ ಸದಾನಂದಗೌಡ ಅವರು ಘೋಷಣೆ ಮಾಡಿದ್ದಾರೆ. ದೆಹಲಿಯಿಂದ ಕಾನ್ಪುರ, ದೆಹಲಿ-ಚಂಡೀಗಡ, ದೆಹಲಿ-ಪಠಾಣ್ ಕೋಟ್ ಮತ್ತು ದೆಹಲಿ-ಆಗ್ರಾಗೆ ಸೆಮಿ ಬುಲೆಟ್ ರೈಲುಗಳ ಯೋಜನೆ ಘೋಷಣೆ ಮಾಡಲಾಗಿದೆ. ಇದಲ್ಲದೆ ದೇಶದ ವಿವಿಧ ಪ್ರತಿಷ್ಟಿತ ನಗರಗಳನ್ನು ಸಂಪರ್ಕಿಸುವಂತೆ 9 ವಿವಿಧ ಮಾರ್ಗಗಳಲ್ಲಿ ಸೆಮಿ ಬುಲೆಟ್ ರೈಲುಗಳ ಪ್ರಸ್ತಾಪ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.