ಈಗಿನ ಸುದ್ದಿ

ಧೋತಿಗೆ ನಿಷೇಧ: ಕ್ರಿಕೆಟ್ ಕ್ಲಬ್‌ಗಳಿಗೆ ಜಯಾ ಎಚ್ಚರಿಕೆ

ಧೋತಿಗೆ ನಿಷೇಧ: ಕ್ರಿಕೆಟ್ ಕ್ಲಬ್‌ಗಳಿಗೆ ಜಯಾ ಎಚ್ಚರಿಕೆ
Published On :

ಚೆನ್ನೈ: ಧೋತಿಗಳಿಗೆ ನಿಷೇಧ ಹೇರಿದ್ದ ತಮಿಳುನಾಡು ಕ್ರಿಕೆಟ್ ಕ್ಲಬ್‌ಗಳಿಗೆ ಮುಖ್ಯಮಂತ್ರಿ ಜಯಲಲಿತಾ ಅವರು ಎಚ್ಚರಿಕೆ ನೀಡಿದ್ದು, ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಸೇರಿದಂತೆ ಇಬ್ಬರು ವಕೀಲರು ಧೋತಿ ಧರಿಸಿದ್ದರಿಂದ ತಮಿಳುನಾಡು ಕ್ರಿಕೆಟ್ ಕ್ಲಬ್‌ವೊಂದು ಪ್ರವೇಶ ನಿರಾಕರಿಸಿತ್ತು. ಅಲ್ಲದೆ ಧೋತಿ ಧರಿಸಿ ಕ್ಲಬ್ ಪ್ರವೇಶಿಸುವಂತಿಲ್ಲ ಎಂದು ಸೂಚನೆ ನೀಡಿತ್ತು. ಕ್ರಿಕೆಟ್ ಕ್ಲಬ್‌ನ ಈ ಧೋರಣೆಯನ್ನು ಕಟುವಾಗಿ ಖಂಡಿಸಿರುವ ಮುಖ್ಯಮಂತ್ರಿ ಜಯಲಲಿತಾ ಅವರು, ಕ್ಲಬ್ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾದರೆ ಕ್ರಿಕೆಟ್ ಕ್ಲಬ್‌ನ ಪರವಾನಗಿಯನ್ನೇ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಜಯಲಲಿತಾ ಅವರು, ಧೋತಿ ತಮಿಳುನಾಡು ಸಂಸ್ಕೃತಿಯ ಪ್ರತೀಕವಾಗಿದ್ದು, ಕ್ರಿಕೆಟ್ ಕ್ಲಬ್‌ನ ನಡೆ ಅಸಂವಿಧಾನಿಕವಾಗಿದೆ. ಘಟನೆ ಕುರಿತಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಕ್ಲಬ್ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಅಲ್ಲದೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಕ್ಲಬ್‌ಗಳಿಗೆ ನೀಡಲಾಗಿರುವ ಪರವಾನಗಿಯನ್ನು ರದ್ದುಗೊಳಿಸುತ್ತೇವೆ ಎಂದು ಅವರು ಹೇಳಿದರು.

ಕಳೆದ ಜುಲೈ 11ರಂದು ಕ್ರಿಕೆಟ್ ಕ್ಲಬ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಧೋತಿಯಲ್ಲಿ ಆಗಮಿಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಇಬ್ಬರು ವಕೀಲರಿಗೆ ಕ್ಲಬ್‌ನ ಸಿಬ್ಬಂದಿಗಳು ಪ್ರವೇಶ ನಿರಾಕರಿಸಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಜಯಾ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾ ಪ್ರಹಾರವನ್ನೇ ನಡೆಸಿ, ಕ್ರಿಕೆಟ್ ಕ್ಲಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.