ಮುಂಬೈನಲ್ಲಿ ಭಾರಿ ಅಗ್ನಿ ಅವಘಡ: ಅಪಾಯಕ್ಕೆ ಸಿಲುಕಿದ ಅಗ್ನಿ ಶಾಮಕ ಸಿಬ್ಬಂದಿ

ಮುಂಬೈ: ಮುಂಬೈನ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದ ಅಗ್ನಿ ಶಾಮಕ ಸಿಬ್ಬಂದಿಗಳೇ ಅಪಾಯಕ್ಕೆ ಸಿಲುಕಿದ್ದಾರೆ.
ಬಾಲಿವುಡ್‌ನ ಪ್ರಮುಖ ನಟರ ಕಚೇರಿಗಳೇ ಅಧಿಕವಾಗಿರುವ ಮುಂಬೈನ ಅಂಧೇರಿಯ ಲೋಖಂಡ್ ವಾಲಾ ಲಿಂಕ್ ರಸ್ತೆಯಲ್ಲಿರುವ 22 ಅಂತಸ್ತುಗಳ ಲೋಟಸ್ ಬಿಸಿನೆಸ್ ಪಾರ್ಕ್ ಕಟ್ಟಡದಲ್ಲಿ ಇಂದು ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಇಂದು ಬೆಳಗ್ಗೆ 11 ಗಂಟೆಯ ಸುಮಾರಿನಲ್ಲಿ ಕಟ್ಟಡದ 20ನೇ ಮಹಡಿಯವರೆಗೂ ಬೆಂಕಿ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸುಮಾರು 20ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಕಟ್ಟಡದಲ್ಲಿ ವ್ಯಾಪಿಸುತ್ತಿದ್ದು, ಕಟ್ಟಡದ 20ನೇ ಮಹಡಿಯಲ್ಲಿ ಬೆಂಕಿ ತೀವ್ರವಾಗಿದೆ. ಮತ್ತೊಂದೆಡೆ ಬೆಂಕಿ ನಂದಿಸಲು ಬಂದಿದ್ದ ಕೆಲ ಅಗ್ನಿಶಾಮಕ ಸಿಬ್ಬಂದಿಗಳೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅಪಾಯಕ್ಕೆ ಒಳಗಾಗಿದ್ದಾರೆ.
ಹೀಗಾಗಿ ರಕ್ಷಣಾ ಕಾರ್ಯಾಚರಣೆಗಾಗಿ ಕರಾವಳಿ ಕಾವಲು ಪಡೆಯ 2 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಈ ನಡುವೆ ಕಟ್ಟಡದಲ್ಲಿ ಅಪಾಯಕ್ಕೆ ಸಿಲುಕಿದ್ದ ಮಹಿಳೆಯ ರಕ್ಷಣೆಗಾಗಿ ತೆರಳಿದ್ದ ಅಗ್ನಿ ಶಾಮಕ ಸಿಬ್ಬಂದಿ ಕೂಡ ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ಮತ್ತು ಅಗ್ನಿ ಶಾಮಕ ಸಿಬ್ಬಂದಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಆಗಮನ
ಇನ್ನು ಘಟನಾ ಸ್ಥಳಕ್ಕೆ ಬಾಲಿವುಡ್ ಹೃತಿಕ್ ರೋಷನ್ ಅವರು ಆಗಮಿಸಿದ್ದು, ಅಧಿಕಾರಿಗಳಿಂದ ಕಾರ್ಯಾಚರಣೆಯ ವಿವರ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಅಗ್ನಿ ಅವಘಡಕ್ಕೀಡಾಗಿರುವ ಇದೇ ಲೋಟಸ್ ಬಿಸಿನೆಸ್ ಪಾರ್ಕ್ ಕಟ್ಟಡದಲ್ಲಿ ಹೃತಿಕ್ ಅವರ ಕಚೇರಿ ಕೂಡ ಇದೆ ಎಂದು ತಿಳಿದುಬಂದಿದೆ. ಕೇವಲ ಹೃತಿಕ್ ರೋಷನ್ ಮಾತ್ರವಲ್ಲದೆ ಬಾಲಿವುಡ್ ನ ಪ್ರಮುಖ ನಟರ ಕಚೇರಿಗಳು ಕೂಡ ಇದೇ ಕಟ್ಟಡದಲ್ಲಿ ಇದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದಂತೆ ಘಟನೆಯಲ್ಲಿ ಸಾವು-ನೋವುಗಳಾದ ವರದಿಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


