ಸಚಿವರ ಸಭೆಯಲ್ಲೇ 'ವಿಬ್ ಗಯಾರ್' ಪೋಷಕರ ಕಣ್ಣೀರು

ಬೆಂಗಳೂರು: ವಿಬ್ಗಯಾರ್ ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಸೋಮವಾರ ವಿಕಾಸಸೌಧದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಕ್ಕಳ ಪೋಷಕರು ಕಣ್ಣೀರು ಹಾಕುವ ಮೂಲಕ ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ವಿಕಾಸಸೌಧದಲ್ಲಿ ಪೋಷಕರ ಸಭೆ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು, ತಮ್ಮ ಮಕ್ಕಳ ಸುರಕ್ಷತೆ ಕುರಿತಂತೆ ಸಚಿವರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಕ್ಕಳ ಮೇಲೆಯೇ ಪೈಶಾಚಿಕ ಕೃತ್ಯವೆಸಗುತ್ತಿರುವ ಇಂತಹ ಅಪಾಯಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೇಗೆ ಕಳುಹಿಸುವುದು ಎಂದು ಪೋಷಕರು ಪ್ರಶ್ನಿಸಿದ್ದಾರೆ. ಹೀಗಾಗಿ ಇಂತಹ ಶಾಲೆಗಳ ವಿರುದ್ಧ ಸೂಕ್ತ ಕಣ್ಗಾವಲು ಇಡುವಂತೆ ಪೋಷಕರು ಆಗ್ರಹಿಸಿದ್ದಾರೆ.
ಅಲ್ಲದೆ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳಬೇಕಾದ ಅಂಶಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅತ್ತ ಸಭೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದರೆ ಇತ್ತ ಕೆಲ ಪೋಷಕರು ತಮ್ಮ ಮಕ್ಕಳನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದರು. ಅಲ್ಲದೆ ಒಂದು ವೇಳೆ ಸರ್ಕಾರ ವಿಬ್ಗಯಾರ್ ಶಾಲೆಯ ಪರವಾನಗಿಯನ್ನು ರದ್ದು ಮಾಡಿದರೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇತರೆ ಮಕ್ಕಳಿಗೂ ತೊಂದರೆಯಾಗುತ್ತದೆ. ಈಗಾಗಲೇ ಒಂದೂವರೆ ತಿಂಗಳುಗಳು ಕಳೆದಿದ್ದು, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಷಕರು ಸಲಹೆ ನೀಡಿದರು.
ಪೋಷಕರ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, ಮಕ್ಕಳ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.
ವಿಬ್ಗಯಾರ್ ಶಾಲೆ ಮೇಲೆ ಸರ್ಕಾರದ ಕಣ್ಗಾವಲು
ಇದೇ ವೇಳೆ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಬ್ಗಯಾರ್ ಶಾಲೆಯ ಮೇಲೆ ಸರ್ಕಾರ ಕಣ್ಗಾವಲಿಗೆ ಮುಂದಾಗಿದ್ದು, ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರ ಸಭೆ ಬಳಿಕ ವಿಶೇಷ ಪರೀಕ್ಷಕರನ್ನು ನೇಮಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ವಿಬ್ಗಯಾರ್ ಶಾಲೆಯಲ್ಲಿ ಸುಮಾರು 3,500 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾದರೆ ಈ ಎಲ್ಲ ಮಕ್ಕಳ ಭವಿಷ್ಯ ಅತಂತ್ರವಾಗುತ್ತದೆ. ಇದೇ ವಿಚಾರ ಇಂದಿನ ಸಭೆಯಲ್ಲಿಯೂ ಚರ್ಚೆಗೆ ಬಂದಿದ್ದು, ಹೀಗಾಗಿಯೇ ಶಾಲೆಯ ಪರವಾನಗಿ ರದ್ದುಗೊಳಿಸುವ ಬದಲು ವಿಶೇಷ ಪರೀಕ್ಷಕರನ್ನು ನೇಮಿಸುವ ನಿರ್ಧಾರ ಕೈಗೊಳ್ಳುವಂತೆ ಪೋಷಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಕ್ಕಳ ಸುರಕ್ಷತಾ ದೃಷ್ಟಿಯಿಂದ ವಿಶೇಷ ಮಾರ್ಗ ಸೂಚಿ ರಚನೆಗೆ ಚಿಂತನೆ
ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ಅನ್ವಯಿಸುವಂತೆ ವಿಶೇಷ ಮಾರ್ಗ ಸೂಚಿ ರಚನೆಗೆ ಸರ್ಕಾರ ಮುಂದಾಗಿದ್ದು, ಗೃಹ ಇಲಾಖೆಯ ಮಾರ್ಗ ಸೂಚಿ ಮತ್ತು ಎನ್ಜಿಓಗಳು ನೀಡುವ ಮಾರ್ಗ ಸೂಚಿಗಳನ್ನು ಪರಿಶೀಲಿಸಿ ರಾಜ್ಯಾದ್ಯಂತ ಇರುವ ಎಲ್ಲ ಶಾಲೆಗಳಿಗೆ ಅನ್ವಯಿಸುವಂತೆ ವಿಶೇಷ ಮಾರ್ಗ ಸೂಚಿ ರಚಿಸುತ್ತೇವೆ. ಮಗು ಶಾಲಾ ಬಸ್ ಹತ್ತಿ ಶಾಲೆ ಮುಗಿಸಿಕೊಂಡು ಬಳಿಕ ಸುರಕ್ಷಿತವಾಗಿ ಮತ್ತೆ ಮರಳಿ ಮನೆ ಸೇರುವರೆಗೂ ಅನುಸರಿಸಬೇಕಾದ ಸುರಕ್ಷಾ ಮಾರ್ಗಗಳ ಮಾರ್ಗ ಸೂಚಿಯನ್ನು ರಚಿಸುವುದಾಗಿ ಸಚಿವರು ಹೇಳಿದರು.
ಒಟ್ಟಾರೆ ವಿಬ್ಗಯಾರ್ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಸುರಕ್ಷತಾ ಮಾರ್ಗ ಅಳವಡಿಕೆಗೆ ಚಿಂತನೆ ನಡೆಸುತ್ತಿದೆ. ಆದರೆ ಸರ್ಕಾರದ ಪ್ರಸಕ್ತ ಚರ್ಚೆ ಕೇವಲ ಮಾತುಕತೆಗೆ ಮಾತ್ರ ಸೀಮಿತವಾಗಿರದೇ ಕಾರ್ಯರೂಪಕ್ಕೆ ಬಂದರೆ ಮಾತ್ರ ಮಕ್ಕಳ ಸುರಕ್ಷತೆ ಸಾಧ್ಯ. ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳ ಸುರಕ್ಷತಾ ದೃಷ್ಟಿಕೋನದಿಂದ ಕನಿಷ್ಟ ಪಕ್ಷ ಈಗಲಾದರೂ ಸರ್ಕಾರ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


