ಟರ್ಬನ್ ತೆಗೆದು ಆಡಿ: ಚೀನಿ ಆಯೋಜಕರ ತಾಕೀತು..!

ನವದೆಹಲಿ: ಇತ್ತೀಚೆಗಷ್ಟೇ ಚೀನಾದ ವೂಹಾನ್ ನಲ್ಲಿ ಅಂತ್ಯಗೊಂಡ ಫಿಬಾ ಏಷ್ಯಾಕಪ್ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಜನಾಂಗೀಯ ನಿಂದನೆ ಆರೋಪ ಕೇಳಿಬಂದಿದ್ದು, ಚೀನೀ ಆಯೋಜಕರು ಭಾರತೀಯ ಸಿಖ್ ಆಟಗಾರರನ್ನು ತಮ್ಮ ತಮ್ಮ ಟರ್ಬನ್ ತೆಗೆದು ಆಡುವಂತೆ ತಾಕೀತು ಮಾಡಿದ್ದರು ಎಂಬ ಆತಂಕಕಾರಿ ಅಂಶ ತಿಳಿದುಬಂದಿದೆ.
ಕಳೆದ ಜುಲೈ 12ರಂದು ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಆಟಗಾರರಾದ ಅಮೃತಪಾಲ್ ಸಿಂಗ್, ಅಮ್ಜೋತ್ ಸಿಂಗ್ ಅವರನ್ನು ಕರೆಯಿಸಿಕೊಂಡ ಚೀನಾ ಆಯೋಜಕರು ತಲೆಯ ಮೇಲಿನ ಟರ್ಬನ್(ಪೇಟ)ಗಳನ್ನು ತೆಗೆದು ಆಟವಾಡುವಂತೆ ತಾಕೀತು ಮಾಡಿದ್ದರು. ತಮ್ಮ ಸಂಸ್ಕೃತಿಯ ಪ್ರತೀಕವಾದ ಟರ್ಬನ್ ತೆಗೆಯುವ ಕುರಿತು ಆಟಗಾರರು ಆಯೋಜಕರನ್ನು ಎಷ್ಟೇ ಮನವೊಲಿಸಿದರೂ ಕೇಳದ ಆಯೋಜಕರು ಟರ್ಬನ್ ತೆಗೆದರಷ್ಟೇ ತಮಗೆ ಆಡಲು ಅನುಮತಿ ನೀಡುವುದಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇರದ ಹಿನ್ನಲೆಯಲ್ಲಿ ಆಟಗರಾರರು ತಮ್ಮ ಟರ್ಬನ್ ತೆಗೆದು ಆಟವಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಆಯೋಜಕರನ್ನು ಕೇಳಿದಾಗ, ಈ ಇಬ್ಬರು ಆಟಗಾರರು ತಲೆಗೆ ಧರಿಸಿದ್ದ ಟರ್ಬನ್ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ನಿಯಮಾವಳಿಗಳ ಉಲ್ಲಂಘನೆಯಾಗಿದ್ದರಿಂದ ಅದನ್ನು ತೆಗೆಯುವಂತೆ ನಿರ್ದೇಶನ ನೀಡಿದ್ದೆವು. ನಿಯಮಾವಳಿಗಳ ಪ್ರಕಾರ ಪೇಟವನ್ನು ಧರಿಸಿ ಮೈದಾನ ಪ್ರವೇಶ ಅಥವಾ ಆಟವನ್ನು ಆಡುವಂತಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಫಿಭಾದ ನಿಯಮಾವಳಿ 4.4.2ರ ಅನ್ವಯ ಆಟಗಾರರಿಗೆ ಗಾಯಗೊಳಿಸುವಂತಹ ಪರಿಕರಗಳಾದ ಆಭರಣಗಳು, ಶಿರಸ್ತ್ರಾಣಗಳು ಅಥವಾ ಕೂದಲಿಗೆ ಹಾಕಿಕೊಳ್ಳುವ ಪರಿಕರಗಳನ್ನು ಪಂದ್ಯದ ಸಮಯದಲ್ಲಿ ನಿಷೇಧಿಸಲಾಗಿದೆ ಎಂಬ ನಿಯಮವಿದೆ.
ಕಳೆದ ಬಾರಿ ಮನಿಲಾದಲ್ಲಿ ನಡೆದ ಏಷ್ಯಾಕಪ್ ಚಾಂಪಿಯನ್ ಷಿಪ್ನಲ್ಲಿ ಮತ್ತು ಗೋವಾದಲ್ಲಿ ನಡೆದಿದ್ದ ಲುಸೋಫೋನಿಯಾ ಪಂದ್ಯಾವಳಿಗಳ ವೇಳೆ ಭಾರತೀಯ ಆಟಗಾರರು ಪೇಟವನ್ನು ಧರಿಸಿಕೊಂಡೇ ಆಡಿದ್ದರು. ಆಗ ಅಲ್ಲಿನ ಆಯೋಜಕರಿಂದ ಇದಕ್ಕೆ ಯಾವುದೇ ಅಭ್ಯಂತರ ಕೇಳಿಬಂದಿರಲಿಲ್ಲ. ಆದರೆ ಚೀನಾ ಮಾತ್ರ ಪೇಟಕ್ಕೆ ತನ್ನ ವಿರೋಧವ್ಯಕ್ತಪಡಿಸಿದೆ. ಇದು ಭಾರತೀಯ ಆಟಗಾರರಿಗೆ ಚೀನಾ ಆಯೋಜಕರು ಮಾಡುತ್ತಿರುವ ತಾರತಮ್ಯ ಎಂದು ಆಟಗಾರರು ಆರೋಪಿಸಿದ್ದಾರೆ.
ಚೀನಾದಲ್ಲಿ ತಮಗಾದ ಅಪಮಾನದ ನಡುವೆಯೂ ಅಮೃತಪಾಲ್ ಸಿಂಗ್ ಮತ್ತು ಅಮ್ಜೋತ್ ಸಿಂಗ್ ಅವರು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲಿಯೂ ಪೇಟಕ್ಕೆ ಚೀನಾ ಆಯೋಜಕರು ನಿಷೇಧವೇರಿದ್ದ ಜಪಾನ್ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ತಂಡಕ್ಕೆ 15 ಪಾಯಿಂಟ್ಸ್ಗಳನ್ನು ತಂದುಕೊಟ್ಟಿದ್ದರು. ಇವಿಷ್ಟೇ ಅಲ್ಲದೆ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಭಾರತೀಯ ತಂಡ ಪ್ರಬಲ ಚೀನಾವನ್ನು ಮಣಿಸಿ ಇತಿಹಾಸ ನಿರ್ಮಿಸಿತ್ತು. ಅಲ್ಲದೆ ಇರಾನ್, ಫಿಲಿಫೈನ್ಸ್ ಮತ್ತು ಜೋರ್ಡಾನ್ ನಂತಹ ಬಲಿಷ್ಟ ತಂಡಗಳ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


