ಈಗಿನ ಸುದ್ದಿ

ಸಿಬಿಐ ತನಿಖೆಗೆ 'ಸುನಂದಾ ಪುಷ್ಕರ್ ಸಾವು' ಪ್ರಕರಣ..?

ಸಿಬಿಐ ತನಿಖೆಗೆ 'ಸುನಂದಾ ಪುಷ್ಕರ್ ಸಾವು' ಪ್ರಕರಣ..?
Published On :

ನವದೆಹಲಿ: ಅನುಮಾನಾಸ್ಪದವಾಗಿ ಸಾವಿಗೀಡಾದ ಕಾಂಗ್ರೆಸ್ ಮುಖಂಡ ಶಶಿತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಗೊಂದಲ ಅಥವಾ ಒತ್ತಡದಲ್ಲಿ ಇಲ್ಲ. ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಅವರು ತಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ತಾವು ಚರ್ಚೆ ನಡೆಸಿ ಬಳಿಕ ಅಗತ್ಯ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಅಲ್ಲದೆ ಅಗತ್ಯ ಬಿದ್ದರೆ ಪ್ರಕರಣ ಕುರಿತಂತೆ ಸಿಬಿಐ ತನಿಖೆಯನ್ನು ಕೂಡ ನಡೆಸುವುದಾಗಿ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.

2010ರ ಆಗಸ್ಟ್‌ನಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಮದುವೆಯಾಗಿದ್ದ ವಾಣಿಜ್ಯ ಉದ್ಯಮಿ ಸುನಂದಾ ಪುಷ್ಕರ್ ಅವರು, ಕಳೆದ ವರ್ಷ ಜನವರಿ 17ರಂದು ದೆಹಲಿಯ ಖಾಸಗಿ ಹೊಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ಸುನಂದಾ ಪುಷ್ಕರ್ ಮತ್ತು ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹರ್ ತರಾರ್‌ರ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬಹಿರಂಗ ಮಾತಿನ ಚಕಮಕಿ ನಡೆದಿತ್ತು.

ಶಶಿ ತರೂರ್ ಮತ್ತು ಮೆಹರ್ ತರಾರ್ ನಡುವಿನ ಸಂಬಂಧದ ಕುರಿತು ಸುನಂದಾ ಪುಷ್ಕರ್ ಅವರು ಟ್ವಿಟರ್‌ನಲ್ಲಿ ಬಹಿರಂಗವಾಗಿ ವಾಕ್ಸಮರಕ್ಕೆ ಮುಂದಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿ, ಶಶಿ ತರೂರ್ ಅವರು ತೀವ್ರ ಮುಜುಗರಕ್ಕೀಡಾಗಿದ್ದರು.

ಇದರ ಬೆನ್ನಲ್ಲೇ ನವದೆಹಲಿಯ ಖಾಸಗಿ ಹೊಟೆಲ್‌ನಲ್ಲಿ ಸುನಂದಾ ಪುಷ್ಕರ್ ಅವರ ಮೃತದೇಹ ಪತ್ತೆಯಾಗಿತ್ತು. ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಬಳಿಕ ನಡೆದ ಅವರ ಮರಣೋತ್ತರ ಪರೀಕ್ಷೆಯಲ್ಲಿ ಅವರ ಹೊಟ್ಟೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿ, ಪ್ರಕರಣದ ಕುರಿತಂತೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡವು. ಪ್ರಸ್ತುತ  ಈ ಪ್ರಕರಣ ತನಿಖಾ ಹಂತದಲ್ಲಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.