'ಸೌಜನ್ಯ' ತನಿಖೆಯ ಮೇಲೆ ಹೆಗಡೆ ಕುಟುಂಬದ ಪ್ರಭಾವ

ಬೆಂಗಳೂರು: ಸೌಜನ್ಯ "ಹತ್ಯಾಚಾರ" ಪ್ರಕರಣದ ತನಿಖೆಯ ಮೇಲೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಕುಟುಂಬ ಪ್ರಭಾವ ಬೀರುತ್ತಿದೆ ಎಂದು ಪ್ರಜಾಪ್ರಭುತ್ವ ವೇದಿಕೆ ಆರೋಪಿಸಿದೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ಎಂಬುವವರು, ವಿರೇಂದ್ರ ಹೆಗಡೆ ಅವರ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ. ಸೌಜನ್ಯ ಅತ್ಯಾಚಾರ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ ಕೃತ್ಯಗಳಲ್ಲಿ ವಿರೇಂದ್ರ ಹೆಗಡೆ ಅವರ ಕುಟುಂಬಸ್ಥರು ಭಾಗಿಯಾಗಿದ್ದು, ಈ ಬಗ್ಗೆ ತುರ್ತು ತನಿಖೆ ಅಗತ್ಯ ಎಂದು ಆಗ್ರಹಿಸಿದ್ದಾರೆ.
'ಸೌಜನ್ಯ ಪ್ರಕರಣ ಒಂದು ಚಿಕ್ಕ ನಿದರ್ಶನವಷ್ಟೇ. ಇದಕ್ಕಿಂತಲೂ ಭೀಕರವಾದ ಅಪರಾಧ ಕೃತ್ಯಗಳು ಜಿಲ್ಲೆಯಲ್ಲಿ ನಡೆದಿದ್ದು, ಈ ಅಪರಾಧಗಳ ಹಿಂದೆ ಹೆಗಡೆ ಅವರ ಕುಟುಂಬದ ಸದಸ್ಯರ ಕೈವಾಡವಿದೆ. ಆದರೆ ಈ ಬಗ್ಗೆ ಧನಿ ಎತ್ತಲು ಅಥವಾ ದೂರು ನೀಡಲು ಯಾರೂ ಮುಂದೆ ಬಾರದೇ ಇರುವುದರಿಂದ ಅವೆಲ್ಲವೂ ಮುಚ್ಚಿಹೋಗಿವೆ. ಉಡುಪಿ ಜಿಲ್ಲೆಯ ರತ್ನಾ ಕೊಠಾರಿ, ಬೆಂಗಳೂರಿನ ಆರು ವರ್ಷದ ಶಾಲಾ ಬಾಲಕಿ ಪ್ರಕರಣ, ಸೆಮಿನರಿ ಸಿಸ್ಟರ್ ಮೇಲಿನ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ಪ್ರಕರಣಗಳಾಗಿದ್ದರೆ, ಇಂತಹ ಸಾವಿರಾರು ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ'.
'ಕಳೆದ 2013ರಲ್ಲಿ ಧರ್ಮಸ್ಥಳ ಗ್ರಾಮದ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಲವಾರು ವರ್ಷಗಳಿಂದ ವಾಸ ಮಾಡಿಕೊಂಡಿದ್ದ ನಿವೃತ್ತ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿಯನ್ನು ಕಲ್ಲು ಎತ್ತಿಹಾಕಿ ಅಮಾನುಷವಾಗಿ ಕೊಲ್ಲಲಾಗಿತ್ತು. ಅವರ ಬಳಿ ಯಾವುದೇ ಆಸ್ತಿ ಇಲ್ಲದಿದ್ದರೂ ಕೇವಲ ಅವರ ವಾಸಮಾಡಿಕೊಂಡಿದ್ದ ಮನೆ ಮತ್ತು ಸುತ್ತಲಿನ ಪ್ರದೇಶಕ್ಕಾಗಿ ಅವರನ್ನು ಭೀಕರವಾಗಿ ಕೊಲ್ಲಲಾಗಿತ್ತು. ಈ ಕೊಲೆಯ ಹಿಂದೆ ಧರ್ಮಸ್ಥಳದ ನಿರ್ವಾಹಕ ನಿರ್ದೇಶಕ ಹರ್ಷೇಂದ್ರ ಕುಮಾರ್ ಹೆಗಡೆ ಅವರ ಕೈವಾಡವಿದ್ದು, ಕೊಲೆಯ ಹಿಂದಿದ್ದ ಆರೋಪಿ ಹರ್ಷೇಂದ್ರ ಕುಮಾರ್ ಅವರೇ ದೂರು ನೀಡುವ ಮೂಲಕ ಫಿರ್ಯಾದುದಾರರಾಗಿ ಬದಲಾಗಿದ್ದಾರೆ. ಅಲ್ಲದೆ ಮಾವುತ ವಾಸ ಮಾಡಿಕೊಂಡಿದ್ದ ಮನೆಯನ್ನು ಆತನ ಪತ್ನಿಗೆ ನೀಡದೇ ವಿನಾಕಾರಣ ಮನೆಗ ಬೀಗ ಹಾಕಿ ಮನೆಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಮಾವುತ ನಾರಾಯಣನ ಪತ್ನಿ ಮತ್ತು ಮಕ್ಕಳು ಧರ್ಮಸ್ಥಳದಿಂದ 15 ಕಿ.ಮೀ ದೂರದಲ್ಲಿ ನೆಲೆಸುವಂತಾಗಿದೆ'.
'ಪ್ರಸ್ತುತ ಅವರ ಮನೆಯ ಸುತ್ತ ಹರ್ಷೇಂದ್ರ ಕುಮಾರ್ ಹೆಗಡೆ ಅವರು ಕಾನೂನು ಬಾಹಿರವಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರ ವಿರುದ್ಧ ಯಾರೇ ದೂರು ನೀಡಲು ಹೋದರೂ, ಅವರ ಬಂಟರು ಅವರಿಗೆ ತೀವ್ರ ತೊಂದರೆ ನೀಡುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿದರೂ ಸಹ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವುದೇ ಇಲ್ಲ. ಹೀಗಾಗಿ ಅವರ ವಿರುದ್ಧ ಯಾರೂ ಕೂಡ ಧನಿ ಎತ್ತುವುದಿಲ್ಲ ಎಂದು ಮಹೇಶ್ ಶೆಟ್ಟಿ ಆರೋಪಿಸಿದ್ದಾರೆ'.
ನನ್ನ ಹತ್ಯೆಗೆ ಹರ್ಷೇಂದ್ರ ಹೆಗಡೆ ಅವರೇ ನೇರ ಕಾರಣ: ಮಹೇಶ್ ಶೆಟ್ಟಿ
ಧರ್ಮಸ್ಥಳದ ನಿರ್ವಾಹಕ ನಿರ್ದೇಶಕ ಹರ್ಷೇಂದ್ರ ಹೆಗಡೆ ಅವರ ಪಾಪಕೃತ್ಯಗಳ ವಿರುದ್ಧ ಹೋರಾಟ ಮಾಡುತ್ತಿರುವ ತಮಗೆ ಕೊಲೆ ಬೆದರಿಕೆ ಇದ್ದು, ಒಂದು ವೇಳೆ ನನ್ನನ್ನು ಯಾರಾದರೂ ಕೊಲೆ ಮಾಡಿದರೆ ಅದರ ಹಿಂದೆ ಹರ್ಷೇಂದ್ರ ಹೆಗಡೆ ಅವರೇ ನೇರಕಾರಣ ಎಂದು ಮಹೇಶ್ ಶೆಟ್ಟಿ ಹೇಳಿದ್ದಾರೆ. ಅಲ್ಲದೆ ಈ ಪತ್ರಿಕಾ ಹೇಳಿಕೆಯನ್ನೇ ದೂರಾಗಿ ಪರಿಗಣಿಸಿ ಹರ್ಷೇಂದ್ರ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಸಿಬಿಐ ಅಧಿಕಾರಿಗಳಿಂದ ಮಾನಸಿಕ ಕಿರುಕುಳ: ಸೌಜನ್ಯ ಪೋಷಕರು
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸೌಜನ್ಯ ಅವರ ಪೋಷಕರು ಮಾತನಾಡಿ, ತಮ್ಮ ಮಗಳ ಹತ್ಯಾಚಾರ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸ್ಥಳೀಯ ಪ್ರಭಾವಿ ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದು, ತಮಗೆ ಮತ್ತು ತಮ್ಮ ಕುಟುಂಬಸ್ಥರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಸೌಜನ್ಯಾಳನ್ನು ನಾವೇ ಹತ್ಯೆ ಮಾಡಿರುವಂತೆ ಮನಸ್ಸಿಗೆ ನೋವುಂಟಾಗುವಂತೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮನೆ ಕಬಳಿಸಲು ಪತಿಯ ಹತ್ಯೆ: ಮಾವುತ ನಾರಾಯಣ ಅವರ ಪತ್ನಿ ಸುಂದರಿ ಆರೋಪ
ಇದೇ ವೇಳೆ ಧರ್ಮಸ್ಥಳದಲ್ಲಿ ಕೊಲೆಯಾಗಿದ್ದ ನಿವೃತ್ತ ಮಾವುತ ನಾರಾಯಣ ಅವರ ಕೊಲೆಗೆ ಹರ್ಷೇಂದ್ರ ಹೆಗಡೆ ಅವರೇ ಕಾರಣ ಎಂದು ನಾರಾಯಣ ಪತ್ನಿ ಸುಂದರಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುಂದರಿ ಅವರು, 'ತಾವು ವಾಸವಾಗಿದ್ದ ಮನೆಯನ್ನು ತಮಗೆ ನೀಡುವಂತೆ ಹರ್ಷೇಂದ್ರ ಹೆಗಡೆ ಅವರು ಕೇಳಿದ್ದರು. ಆದರೆ ತಮಗಿರುವುದು ಇದೊಂದೇ ಸೂರು. ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದು ನಾರಾಯಣ ಅವರು ಹೇಳಿದಾಗ ಕುಪಿತಗೊಂಡಿದ್ದ ಹರ್ಷೇಂದ್ರ ಹೆಗಡೆ ಅವರು ತಮ್ಮ ಬೆಂಬಲಿಗರನ್ನು ಬಿಟ್ಟು ತಮ್ಮ ಪತಿಯ ಕಾಲನ್ನು ಮುರಿಸಿದ್ದರು'.
'ಸುಮಾರು ನಾಲ್ಕು ತಿಂಗಳ ಬಳಿಕ ಸುಧಾರಿಸಿಕೊಂಡ ತಮ್ಮ ಪತಿ ವಿನಾಯಕ ಹಬ್ಬದ ದಿನ ತಮ್ಮ ತಂಗಿಯೊಂದಿಗೆ ನಾಟಕ ನೋಡಿ ಮನೆಗೆ ವಾಪಸಾಗಿದ್ದರು. ಆ ವೇಳೆ ನಾನು ನಮ್ಮ ಸಂಬಂಧಿಕರ ಮನೆಗೆ ತೆರಳಿದ್ದೆ. ಮನೆಗೆ ವಾಪಸ್ ಬಂದಾಗ ನನ್ನ ನಾದಿನಿ ಮತ್ತು ನನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ತಮ್ಮ ನಿವಾಸವನ್ನು ಅವರಿಗೆ ನೀಡಲಿಲ್ಲ ಎಂಬ ಒಂದೇ ಕಾರಣದಿಂದ ಹರ್ಷೇಂದ್ರ ಅವರು ತಮ್ಮ ಪತಿಯನ್ನು ಕೊಲೆ ಮಾಡಿಸಿದ್ದಾರೆ. ಅಲ್ಲದೆ ತಾವು ವಾಸವಿದ್ದ ಮನೆಗೆ ವಿಚಾರಣೆಯ ನೆಪದಲ್ಲಿ ಬೀಗ ಹಾಕಿದ್ದಾರೆ. ಇದೀಗ ತಮಗೆ ವಾಸಕ್ಕೆ ಮನೆಯಿಲ್ಲದೇ ಧರ್ಮಸ್ಥಳದಿಂದ 15 ಕಿ.ಮೀ ದೂರದಲ್ಲಿ ವಾಸವಾಗುವಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಂದ ಹಿಡಿದು ಪೊಲೀಸರವರೆಗೂ ದೂರು ನೀಡಿದರೂ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸುಂದರಿ ಆರೋಪಿಸಿದ್ದಾರೆ'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


