ಈಗಿನ ಸುದ್ದಿ

ಪರಿಹಾರಕ್ಕಾಗಿ ನೌಕಾನೆಲೆ ನಿರಾಶ್ರಿತರ ಆಗ್ರಹ

Published On :

ಬೆಂಗಳೂರು: ಏಷ್ಯಾ ನೌಕಾನೆಲೆ ಸ್ಥಾಪನೆಗಾಗಿ ಸ್ಥಳೀಯರಿಂದ ಪಡೆದ ಭೂಮಿಗೆ ಬದಲಿ ಪರಿಹಾರ ನೀಡುವಂತೆ ನೌಕಾನೆಲೆ ನಿರಾಶ್ರಿತರ ಮತ್ತು ಸ್ಥಳೀಯರ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೌಕಾನೆಲೆ ನಿರಾಶ್ರಿತರ ಮತ್ತು ಸ್ಥಳೀಯರ ಹೋರಾಟ ಸಮಿತಿ ಸಂಚಾಲಕ ನಾಗರಾಜ್ ನಾಯಕ್ ಅವರು, ಏಷ್ಯಾ ನೌಕಾನೆಲೆ ಸ್ಥಾಪನೆಗಾಗಿ ಸ್ಥಳೀಯರಿಂದ ಭೂಮಿ ತೆಗೆದುಕೊಂಡು, ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ ಇಂದಿಗೂ ಯಾವುದೇ ಕ್ರಮ ಕೈ ಗೊಳ್ಳದೇ ಅಂಕೋಲಾ ನಿವಾಸಿಗಳು ಸಂಕಷ್ಟದಲ್ಲಿ ಕಾಲ ಕಳೆಯುವಂತೆ ಮಾಡಿದ್ದಾರೆ.

ಭೂಮಿ ತೆಗೆದುಕೊಳ್ಳುವಾಗ ಪ್ರತಿ ಗುಂಟೆಗೆ ಕೇವಲ 150 ರುಪಾಯಿಗಳಂತೆ ನೀಡುತ್ತೇವೆಂದು ತಿಳಿಸಿದ್ದರು. ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಕಾರಣ ಪ್ರಕರಣ ಕೋರ್ಟ್ ಮೊರೆ ಹೋಯಿತು. ಈ ಬಗ್ಗೆ ವಿಚಾರಣೆ ನಡೆಸಿದ ಕಾರವಾರ ಸಿವಿಲ್ ನ್ಯಾಯಾಲಯ ಪ್ರತಿ ಗುಂಟೆಗೆ 11,500 ರುಪಾಯಿ ನೀಡುವಂತೆ ಹಲವು ವರ್ಷಗಳ ಹಿಂದೆಯೇ ತೀರ್ಪು ನೀಡಿತ್ತು.

ಈ ತೀರ್ಪನ್ನು ಕರ್ನಾಟಕ ಉಚ್ಛನ್ಯಾಯಾಲಯ ಮತ್ತು ರಾಷ್ಟ್ರೀಯ ಸರ್ವೋಚ್ಛ ನ್ಯಾಯಾಲಯಗಳೂ ಎತ್ತಿ ಹಿಡಿದ ಕಾರಣ ನೌಕಾ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇದಾಗಿ ಹಲವು ವರ್ಷಗಳೇ ಕಳೆದರೂ ಕಾರವಾರ ಹಾಗು ಅಂಕೋಲಾ ನಿವಾಸಿಗಳಿಗೆ ಯಾವುದೇ ಪರಿಹಾರ ದೊರಕಿಲ್ಲ. ಅಲ್ಲದೆ ಭೂಮಿ ಪಡೆಯುವ ಮೊದಲು ನೀಡಿದ್ದ ಉದ್ಯೋಗ ಭರವಸೆಯೂ ಆಶ್ವಾಸನೆಗಳಾಗಿಯೇ ಉಳಿದಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಈ ಬಗ್ಗೆ ನೌಕಾನೆಲೆ ಮತ್ತು ಸ್ಥಳೀಯರ ಹೋರಾಟ ಸಮಿತಿಯು ಸ್ಥಳೀಯ ಮತ್ತು ನಿರಾಶ್ರಿತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದೇ ಜುಲೈ 25ರಂದು, ಬೆಳಿಗ್ಗೆ 9 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. ಈ ಧರಣಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಚಲನಚಿತ್ರ ನಿರ್ದೇಶಕ ಮತ್ತು ಲೇಖಕ ನಾಗತಿಹಳ್ಳಿ ಚಂದ್ರಶೇಖರ, ನಟ ಅನಂತನಾಗ್ ಅವರು ಕೈಜೋಡಿಸಲಿದ್ದಾರೆ ಎಂದು ನಾಗರಾಜ್ ನಾಯಕ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.