"ಕೈ'' ಪಕ್ಕ ಕುಳಿತುಕೊಳ್ಳಲು ರಾಜಕೀಯ ಪಕ್ಷಗಳ ನಕಾರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಮುಜುಗರ ಉಂಟಾಗಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಕ್ಕ ಕುಳಿತು ಕೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳಲು ಇತರೆ ಪಕ್ಷಗಳ ಸಂಸದರು ನಕಾರಾ ಸೂಚಿಸುತ್ತಿದ್ದು, ಸಂಸದರ ನಡವಳಿಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ತಲೆನೋವಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳಿಗೂ ತಮ್ಮ ಪಕ್ಷದ ತತ್ವಸಿದ್ಧಾಂತಗಳಿಗೂ ವ್ಯತ್ಯಾಸವಿದ್ದು, ತಮ್ಮ ಪಕ್ಷದ ನಿಲುವನ್ನು ಆಪಕ್ಷದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಬಿಂಬಿಸಬೇಕು ಎಂದು ಇತರೆ ಪಕ್ಷಗಳು ಪ್ರತಿಪಾದಿಸಿವೆ.
ಹೀಗಾಗಿ ಲೋಕಸಭೆಯಲ್ಲಿ ಇತರೆ ಪಕ್ಷಗಳಿಗೆ ಆಸನಗಳನ್ನು ಹೊಂದಾಣಿಕೆ ಮಾಡುವುದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖವಾಗಿ ಎಐಡಿಎಂಕೆ, ತೃಣಮೂಲ ಕಾಂಗ್ರೆಸ್, ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈಎಸ್ಆರ್ ಪಕ್ಷಗಳು ಕಾಂಗ್ರೆಸ್ ಪಕ್ಷದ ಪಕ್ಕದ ಆಸನಗಳನ್ನು ತಿರಸ್ಕರಿಸಿವೆ ಎಂದು ತಿಳಿದುಬಂದಿದೆ.
ಆ ಮೂಲಕ ತಾವು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗಿಂತಲೂ ವಿಭಿನ್ನ ಎಂದು ತೋರಿಸಲು ಈ ಪಕ್ಷಗಳು ಪ್ರಯತ್ನಿಸಿವೆ. ಅಲ್ಲದೆ ತಾವು ಈ ಪಕ್ಷಗಳಿಗಿಂತಲೂ ತಾವು ಕಡಿಮೆ ಏನೂ ಇಲ್ಲ ಎಂಬ ಸಂದೇಶ ಸಾರಲು ಈ ಪಕ್ಷಗಳು ಹೊಸದಾರಿ ಹುಡುಕಿದಂತಿವೆ. ಅತಿ ಹೆಚ್ಚು ಸಂಖ್ಯೆಯ ಸದಸ್ಯ ಬಲವನ್ನು ಹೊಂದಿರುವ ಆಡಳಿತಾರೂಢ ಬಿಜೆಪಿ ಪಕ್ಷದ ಸದಸ್ಯರು ಲೋಕಸಭೆಯ ಸುಮಾರು ಅರ್ಧದಷ್ಟು ಆಸನಗಳಲ್ಲಿ ಆಸೀನರಾಗಿದ್ದಾರೆ. ಸ್ಪೀಕರ್ ಅವರು ಹಂಚಿಕೆ ಮಾಡಿರುವ ಆಸನ ವ್ಯವಸ್ಥೆಯ ಅನುಸಾರ ಸ್ಪೀಕರ್ ಅವರ ಎಡಬದಿಯಲ್ಲಿ ಮುಖ್ಯ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಮೀಸಲಿಡಲಾಗಿದ್ದು, ಅವರ ಪಕ್ಕದಲ್ಲಿ ಬಿಜು ಜನತಾದಳದ ಸಂಸದರಿಗೆ ಆಸನಗಳನ್ನು ಮೀಸಲಾಗಿಡಲಾಗಿದೆ. ಆದರೆ ಪ್ರಸ್ತುತ ಬಿಜೆಡಿ ಪಕ್ಷದ ಸದಸ್ಯರು ಆ ಸ್ಥಾನಗಳಲ್ಲಿ ಕುಳಿತುಕೊಳ್ಳಲು ನಿರಾಕರಿಸುತ್ತಿದ್ದು, ಬೇರೆ ಪಕ್ಷಗಳು ಕೂಡ ಕಾಂಗ್ರೆಸ್ ಪಕ್ಷದ ಪಕ್ಕದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿವೆ.
ಆಡಳಿತಾರೂಢ ಬಿಜೆಪಿ ಪಕ್ಷದ ನಂತರ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ತಮಗೆ ಪ್ರತಿಪಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳ ಈ ನಿರ್ಧಾರ ತೀವ್ರ ಮುಜುಗರವನ್ನುಂಟು ಮಾಡಿದೆ. ಪ್ರಸ್ತುತ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ 44 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ನಂತರ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ನಂತರ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳೆಂದರೆ ಎಐಡಿಎಂಕೆ (37 ಸಂಸದರು), ತೃಣಮೂಲ ಕಾಂಗ್ರೆಸ್ (34), ಬಿಜೆಡಿ (20) ಟಿಆರ್ಎಸ್ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು ನಂತರದ ಸ್ಥಾನದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


