26/11 ಮುಂಬೈ ದಾಳಿ: ಪಾಕಿಸ್ತಾನ ರಾಯಭಾರಿಗೆ ಸಮನ್ಸ್

ನವದೆಹಲಿ: 26/11 ಮುಂಬೈ ದಾಳಿ ಪ್ರಕರಣದ ತನಿಖೆಯಲ್ಲಿ ಪಾಕಿಸ್ತಾನ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಭಾರತೀಯ ವಿದೇಶಾಂಗ ಇಲಾಖೆ ಶುಕ್ರವಾರ ಪಾಕಿಸ್ತಾನ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗುತ್ತಿದ್ದು, ಇದರಿಂದ ಬೇಸರ ವ್ಯಕ್ತಪಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಕಚೇರಿಗೆ ತೆರಳಿ ವಿಚಾರಣೆಯ ನಿಧಾನಗತಿಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಈ ಕುರಿತಂತೆ ಅಧಿಕೃತವಾಗಿ ತಮ್ಮ ಪ್ರತಿಭಟನಾ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2008ರಲ್ಲಿ ಪಾಕಿಸ್ತಾನ ಮೂಲದ 10 ಉಗ್ರರು ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಸುಮಾರು 166 ಜನರ ಮಾರಣ ಹೋಮಕ್ಕೆ ಕಾರಣರಾಗಿದ್ದರು. ಅಲ್ಲದೆ ಘಟನೆಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಉಗ್ರರ ವಿರುದ್ಧ ಸುಮಾರು 70 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಮತ್ತು ಎನ್ಎಸ್ಜಿ ಕಮಾಂಡೊಗಳು ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾಗಿದ್ದರು.
ಘಟನೆಯಲ್ಲಿ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳಾದ ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ, ಹೇಮಂತ್ ಕರ್ಕರೆ ಮತ್ತು ಕರ್ನಾಟಕ ಮೂಲದ ಎನ್ಎಸ್ಜಿ ಕಮಾಂಡೋ ಸಂದೀಪ್ ಉನ್ನಿಕೃಷ್ಣನ್ರಂತಹ ಹಿರಿಯ ಅಧಿಕಾರಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಉಗ್ರರನ್ನು ಸದೆಬಡೆದಿದ್ದರು. ಅಲ್ಲದೆ ಸಿಎಸ್ಟಿಯಲ್ಲಿ ದಾಳಿ ನಡೆಸಿ ಪರಾರಿಯಾಗುತ್ತಿದ್ದ ಉಗ್ರ ಅಜ್ಮಲ್ ಕಸಬ್ನನ್ನು ಜೀವಂತವಾಗಿ ಬಂಧಿಸಲಾಗಿತ್ತು. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಏಕೈಕ ಜೀವಂತ ಉಗ್ರ ಅಜ್ಮಲ್ ಕಸಬ್ನನ್ನು 2012ರ ಪುಣೆಯ ಯರವಾಡಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.
ಪ್ರಕರಣ ಸಂಬಂಧ ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಾಯದ ಮೇರೆಗೆ ತನಿಖೆ ನಡೆಸುತ್ತಿರುವ ಪಾಕಿಸ್ತಾನ, ದಾಳಿಯ ಮಾಸ್ಟರ್ ಮೈಂಡ್ ಉಗ್ರ ಜಾಕಿರ್ ಉರ್ ರೆಹಮನ್ ಲಖ್ವಿ ಸೇರಿದಂತೆ ಏಳು ಪ್ರಮುಖ ಉಗ್ರರನ್ನು ಬಂಧಿಸಿದೆ. ಆದರೆ ಪ್ರಕರಣದ ತನಿಖೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದು, ಪಾಕಿಸ್ತಾನ ಬೇಕೆಂದೇ ಪ್ರಕರಣದ ತನಿಖೆಯನ್ನು ವಿಳಂಬಗೊಳಿಸುತ್ತಿದೆ ಎಂದು ಭಾರತ ಆರೋಪಿಸಿದೆ. ಹೀಗಾಗಿಯೇ ಪಾಕಿಸ್ತಾನದ ವಿರುದ್ಧ ಇಂದು ಭಾರತೀಯ ವಿದೇಶಾಂಗ ಇಲಾಖೆ ಸಮನ್ಸ್ ಜಾರಿ ಮಾಡಿದೆ.
ಇದೇ ಆಗಸ್ಟ್ 25ರಂದು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ 26/11 ಮುಂಬೈ ದಾಳಿ ಪ್ರಕರಣ ಮತ್ತು ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ದಾಳಿಗಳ ಕುರಿತು ಭಾರತ ಪ್ರಶ್ನಿಸಲಿದೆ. ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಈ ಸಭೆಗೆ ಭಾರತದ ವತಿಯಿಂದ ವಿದೇಶಾಂಗ ಕಾರ್ಯದರ್ಶಿಗಳಾದ ಸುಜಾತ ಸಿಂಗ್ ಅವರು ತೆರಳಲಿದ್ದು, ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹಮದ್ ಚೌದರಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


