ಮತ್ತೆ ಎಂಇಎಸ್ ಪುಂಡಾಟ: ಪತ್ರಕರ್ತರನ್ನು ಕೂಡಿ ಹಾಕಿ ಬೆದರಿಕೆ

ಬೆಳಗಾವಿ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಭಾನುವಾರವೂ ತಮ್ಮ ಪುಂಡಾಟಿಕೆಯನ್ನು ಮುಂದುವೆರಸಿದ್ದು, ಪತ್ರಕರ್ತರನ್ನು ಮನೆಯಲ್ಲಿ ಕೂಡಿಹಾಕಿ ಬೆದರಿಕೆ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಎಳ್ಳೂರು ಗ್ರಾಮದಲ್ಲಿ ಪುನರ್‌ನಿರ್ಮಿಸಲಾಗಿದ್ದ ಮರಾಠಿ ನಾಮಫಲಕ ಕುರಿತ ಸುದ್ದಿಗಾಗಿ ಗ್ರಾಮಕ್ಕೆ ತೆರಳಿದ್ದ ಪತ್ರಕರ್ತರನ್ನು ಎಂಇಎಸ್ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಅವರನ್ನು ಕಾರ್ಯಕರ್ತರು ಥಳಿಸಲು ಮುಂದಾಗಿದ್ದು, ಅವರಿಂದ ತಪ್ಪಿಸಿಕೊಳ್ಳಲು ಪತ್ರಕರ್ತರು ಸಮೀಪದ ಮನೆಯೊಂದರಲ್ಲಿ ಅವಿತುಕೊಂಡಿದ್ದಾರೆ. ಈ ವೇಳೆ ಪತ್ರಕರ್ತರು ಕನ್ನಡಿಗರು ಎಂದು ತಿಳಿದ ಮನೆಯವರು ಅವರನ್ನು ಕೂಡಲೇ ಮನೆ ಬಿಟ್ಟು ಹೊರಹೋಗುವಂತೆ ಸೂಚಿಸಿದ್ದಾರೆ.
ಅಷ್ಟು ಹೊತ್ತಿಗಾಗಲೇ ಮನೆಯ ಸುತ್ತ ಸುಮಾರು 100ರಿಂದ 150ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರು ಮನೆಯನ್ನು ಸುತ್ತುವರೆದು ಪತ್ರಕರ್ತರಿಗೆ ಜೀವಬೆದರಿಕೆ ಹಾಕುತ್ತಿದ್ದರು. ಸುದ್ದಿ ತಿಳಿದ ಕೂಡಲೇ ತುರ್ತು ಪ್ರಹಾರ ದಳದೊಂದಿಗೆ ಸ್ಥಳಕ್ಕಾಮಿಸಿದ ಪೊಲೀಸರು ಲಾಠಿಚಾರ್ಜ್ ಮೂಲಕ ಕಾರ್ಯಕರ್ತರನ್ನು ಚದುರಿಸಿ, ಪತ್ರಕರ್ತರನ್ನು ರಕ್ಷಿಸಿದ್ದಾರೆ. ಅಲ್ಲದೆ ನಿನ್ನೆ ಎಂಇಎಸ್ ಕಾರ್ಯಕರ್ತರು ಪುನರ್ ನಿರ್ಮಿಸಿದ್ದ ನಾಮಫಲಕವನ್ನು ಇಂದು ಮತ್ತೆ ಜೆಸಿಬಿ ಮೂಲಕ ಪೊಲೀಸರು ತೆರವುಗೊಳಿಸಿದರು. ಇದರಿಂದ ಮತ್ತಷ್ಟು ಕೆರಳಿದ ಎಂಇಎಸ್ ಪುಂಡರು ಪೊಲೀಸರ ಮೇಲೆಯೇ ಕಲ್ಲು ತೂರಾಟಕ್ಕೆ ಮುಂದಾಗಿದ್ದರು.
ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಎಳ್ಳೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ಉಂಟಾಗಿದ್ದ ಘರ್ಷಣೆಗೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈ ಹಿಂದೆ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಬೆಳಗಾವಿಗೆ ನಿಯೋಜಿಸಲಾಗಿದೆ. ನಿಂಬಾಳ್ಕರ್ ಅವರು ಪ್ರಸ್ತುತ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


