ಈಗಿನ ಸುದ್ದಿ

ಸಹರಣ್‌ಪುರದಲ್ಲಿ ಮುಂದುವರೆದ ಕರ್ಫ್ಯೂ: ಕಂಡಲ್ಲಿ ಗುಂಡು ಆದೇಶ

ಸಹರಣ್‌ಪುರದಲ್ಲಿ ಮುಂದುವರೆದ ಕರ್ಫ್ಯೂ: ಕಂಡಲ್ಲಿ ಗುಂಡು ಆದೇಶ
Published On :

ಲಖನೌ: ಉತ್ತರ ಪ್ರದೇಶದ ಸಹರಣ್‌ಪುರದಲ್ಲಿ ಕೋಮು ಹಿಂಸಾಚಾರ ಮುಂದುವರೆದಿದ್ದು, ಕರ್ಫ್ಯೂವನ್ನು ಮುಂದುವರೆಸಲಾಗಿದೆ.

ನಿನ್ನೆ ಧಾರ್ಮಿಕ ಸಂಸ್ಥೆಗಳ ನಡುವೆ ನಡೆದಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ಕೂಡ ಮುಂದುವರೆಸಲಾಗಿದ್ದು, ಕಂಡಲ್ಲಿ ಗುಂಡು ಆದೇಶ ನೀಡಲಾಗಿದೆ. ಅಲ್ಲದೆ ಹಿಂಸಾಚಾರದಲ್ಲಿ ತೊಡಗಿದ್ದ 20 ಮಂದಿ ಉದ್ರಿಕ್ತ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಮು ಹಿಂಸಾಚಾರ ನಡೆದಿರುವ ಕುತುಬ್‌ಶೇರ್ ಪ್ರದೇಶದಲ್ಲಿ ಕರ್ಫ್ಯೂವನ್ನು ಕಠಿಣಗೊಳಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು 20ಕ್ಕೂ ಹೆಚ್ಚು ಅಂಗಡಿಗಳನ್ನು ಮತ್ತು 15ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದಾರೆ. ಈವರೆಗೂ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಗುರುದ್ವಾರ ಸಮಿತಿಗೆ ಸೇರಿದೆ ಎನ್ನಲಾಗುತ್ತಿದ್ದ ಭೂಮಿಯಲ್ಲಿ ಸಿಖ್ ಸಮುದಾಯದವರು ಗುರುದ್ವಾರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಆ ಜಾಗ ತಮ್ಮದೆಂದು ವಾದಿಸುತ್ತಿದ್ದ ವಕ್ಫ್ ಸಮಿತಿ ಸದಸ್ಯರು ಗುರುದ್ವಾರ ಸಮಿತಿ ಸದಸ್ಯರೊಂದಿಗೆ ಜಗಳಕ್ಕಿಳಿದಿದ್ದಾರೆ. ಅಲ್ಲದೆ ಉಭಯ ಕೋಮಿನ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಘರ್ಷಣೆ ಸಂಭವಿಸಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಎರಡೂ ಸಮಿತಿ ಸದಸ್ಯರನ್ನು ಮನವೋಲಿಸಲು ಮುಂದಾಗಿದ್ದರು.

ಆದರೆ ಪೊಲೀಸ್ ಮಧ್ಯಸ್ಥಿಕೆ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ ವಕ್ಫ್ ಸಮಿತಿ ಸದಸ್ಯರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರವನ್ನು ನಡೆಸಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲುಗಳನ್ನು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ. ಹೀಗಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ನಿಷೇಧಾಜ್ಞೆ ಹೊರಡಿಸಲಾಗಿದೆ.

ಪ್ರಸ್ತುತ ಗುರುದ್ವಾರ ನಿರ್ಮಾಣವಾಗುತ್ತಿರುವ ಭೂಮಿ ಕುರಿತಂತೆ ಗುರುದ್ವಾರ ಸಮಿತಿ ಮತ್ತು ವಕ್ಫ್ ಸಮಿತಿ ನಡುವೆ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದ್ದು, ಪ್ರಕರಣ ಹೈಕೋರ್ಟ್ ಮೊರೆ ಹೋಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇತ್ತೀಚೆಗೆ ತನ್ನ ತೀರ್ಪು ನೀಡಿ, ವಿವಾದಿತ ಭೂಮಿ ಗುರದ್ವಾರ ಸಮಿತಿಗೆ ಸೇರಬೇಕು ಎಂದು ಆದೇಶ ಹೊರಡಿಸಿತ್ತು. ಹೀಗಾಗಿ ಗುರುದ್ವಾರ ಸಮಿತಿ ಸದಸ್ಯರು ಆ ಜಾಗದಲ್ಲಿ ಗುರುದ್ವಾರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ವಕ್ಫ್ ಸಮಿತಿ ಸದಸ್ಯರು ಅಡ್ಡಿಪಡಿಸಿದಾಗ ಘರ್ಷಣೆ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.