ಈಗಿನ ಸುದ್ದಿ

ಇರಾಕ್‌ನಲ್ಲಿ ಉಗ್ರರಿಂದ 40 ಭಾರತೀಯರ ಅಪಹರಣ..?

ಇರಾಕ್‌ನಲ್ಲಿ ಉಗ್ರರಿಂದ 40 ಭಾರತೀಯರ ಅಪಹರಣ..?
Published On :

ಬಾಗ್ದಾದ್: ಇರಾಕ್‌ನಲ್ಲಿ ಶಿಯಾ ಉಗ್ರರ ದಾಳಿ ಮುಂದುವರೆದಿದ್ದು, ಬುಧವಾರ ಉಗ್ರರು 40 ಭಾರತೀಯರನ್ನು ಅಪಹರಿಸಿರುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.

ಇರಾಕ್‌ನ ಉತ್ತರ ಮೊಸುಲ್‌ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಭಾರತೀಯ ಮೂಲದ ಸುಮಾರು 40 ಮಂದಿ ಕಾರ್ಮಿಕರ ನಾಪತ್ತೆಯಾಗಿದ್ದು, ಯಾವುದೇ ರೀತಿಯ ಸಂಪರ್ಕಕ್ಕೂ ಅವರು ಸಿಗದೇ ಇರುವುದು ಅಪಹರಣವಾಗಿರಬಹುದೆಂದು ಶಂಕಿಸಲಾಗುತ್ತಿದೆ. ಆದರೆ ಈ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆ, '40 ಮಂದಿ ಭಾರತೀಯರು ಸಂಪರ್ಕಕ್ಕೆ ಸಿಗದೇ ಇರುವುದು ನಿಜ. ಆದರೆ ಅವರನ್ನು ಉಗ್ರರು ಅಪಹರಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ'.

'ಆದರೆ ನಾವು ನಾಪತ್ತೆಯಾದ ಭಾರತೀಯರ ಹುಡುಕಾಟಕ್ಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾವುದೇ ಕಾರಣಕ್ಕೂ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಇಲ್ಲಿಯವರೆವಿಗೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನಮ್ಮ ಪ್ರಯತ್ನವನ್ನು ಮುಂದುವರೆಸಿದ್ದೇವೆ. ಪ್ರಸ್ತುತ ಅವರೊಂದಿಗೆ ಸಂಪರ್ಕ ಸಾಧಿಸುವುದೇ ನಮ್ಮ ಮೊದಲ ಕಾರ್ಯವಾಗಿದೆ. ಇದಕ್ಕಾಗಿ ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ಸೈಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಟಿಕ್ರಿತ್‌ನಲ್ಲಿ ಅಪಾಯಕ್ಕೆ ಸಿಲುಕಿರುವ 46ಮಂದಿ ದಾದಿಯರು
ಮೊಸುಲ್ ನಗರದಲ್ಲಿರುವಂತೆಯೇ ಟಿಕ್ರಿತ್‌ನಗರದಲ್ಲಿಯೂ ಬಂಡುಕೋರರ ಉಪಟಳ ಹೆಚ್ಚಾಗಿದ್ದು, ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ 46 ಮಂದಿ ದಾದಿಯರು ಇದೀಗ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ 14 ಮಂದಿ ದಾದಿಯರು ಸ್ವದೇಶಕ್ಕೆ ಮರಳು ತೀರ್ಮಾನಿಸಿದ್ದರೆ, ಉಳಿದವರು ಅಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಶಿಯಾ ಬಂಡುಕೋರರ ದಾಳಿಯಿಂದ ಇರಾಕ್ ತತ್ತರಿಸಿಹೋಗಿದ್ದು, ಇರಾಕ್‌ನಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಷ್ಟು ದಿನ ಬಾಗ್ದಾದ್ ನಗರದ ಹೊರವಲಯದಲ್ಲಿ ಅಟ್ಟಹಾಸಗೈಯ್ಯುತ್ತಿದ್ದ ಉಗ್ರರು ಇದೀಗ ರಾಜಧಾನಿಯ ಸಮೀಪಕ್ಕೆ ಬಂದಿರುವುದು ಇರಾಕ್ ಸರ್ಕಾರದ ಅಸ್ತಿತ್ವವೇ ಅಲುಗಾಡುವಂತೆ ಮಾಡಿದೆ.

ಬಾಗ್ದಾದ್‌ನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ದಿಯಾಲಾ ಪ್ರಾಂತ್ಯದ ರಾಜಧಾನಿ ಬಕೂಬ ನಗರವನ್ನು ಈಗಾಗಲೇ ಉಗ್ರರು ವಶಪಡಿಸಿಕೊಂಡಿದ್ದಾರೆ. ಉಗ್ರರನ್ನು ನಿಯಂತ್ರಿಸಲು ಇರಾಕ್ ಸೇನೆ ಹರಸಾಹಸ ಪಡುತ್ತಿದ್ದು, ಇರಾಕ್‌ಗೆ ಅಮೆರಿಕ ಬೆಂಬಲ ಸೂಚಿಸಿದೆ. 2011ರ ನಂತರ ಇದೇ ಮೊದಲ ಬಾರಿಗೆ ಇರಾಕ್‌ಗೆ ಅಮೆರಿಕ ಸೇನಾ ಬೆಂಬಲ ನೀಡಿದೆ. ಅಲ್ಲದೆ ಉಗ್ರರ ಮೇಲೆ ವಾಯುದಾಳಿ ನಡೆಸುವ ಕುರಿತು ಅಮೆರಿಕ ಚಿಂತನೆ ನಡೆಸುತ್ತಿದೆ.

ಭಾರತೀಯರ ರಕ್ಷಣೆಗೆ ತಂಡ ರವಾನೆ
ಈ ನಡುವೆ ಇರಾಕ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅಪಾಯಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಭಾರತದ ಮಾಜಿ ರಾಯಭಾರಿ  ಸುರೇಶ್ ರೆಡ್ಡಿ ಅವರ ನೇತೃತ್ವದಲ್ಲಿ ರಕ್ಷಣಾ ತಂಡವನ್ನು ರಚನೆ ಮಾಡಿ ಬಾಗ್ದಾದ್‌ಗೆ ರವಾನಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಎ.ಕೆ.ದೋವಲ್ ಅವರು ರಕ್ಷಣಾ ಕಾರ್ಯಾಚರಣೆಯ ಸಮನ್ವಯವನ್ನು ನೋಡಿಕೊಳ್ಳುತ್ತಿದ್ದಾರೆ. ಉಗ್ರರು ಪ್ರಭುತ್ವ ಸಾಧಿಸಿರುವ ಮೊಸುಲ್ ನಗರದಲ್ಲಿ ನಾಪತ್ತೆಯಾಗಿರುವ ಭಾರತೀಯರ ಹುಡುಕಾಟದ ಜವಾಬ್ದಾರಿಯನ್ನು ಇದೇ ತಂಡಕ್ಕೆ ನೀಡಲಾಗಿದೆ. ಕುರ್ದ್ ಜನಾಂಗೀಯರ ನಿಯಂತ್ರಣದಲ್ಲಿದ್ದ ಮೊಸುಲ್ ನಗರವನ್ನು ಉಗ್ರರು ವಶಪಡಿಸಿಕೊಂಡಿದ್ದರು. ಆದರೆ ಇದೀಗ ಮತ್ತೆ ಕುರ್ದ್ ಮಿಲಿಟರಿ ಪಡೆಗಳು ನಗರದಲ್ಲಿ ನಿಯಂತ್ರಣ ಸಾಧಿಸಿವೆ. ಮೂಲಗಳ ಪ್ರಕಾರ ಮೊಸುಲ್ ನಗರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಘಟಕಗಳಿದೆ. ಹೀಗಾಗಿಯೇ ಉಗ್ರರು ಮೊಸುಲ್ ನಗರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮೊಸುಲ್‌ನಗರದಲ್ಲಿ ಸುಮಾರು 120 ಮಂದಿ ಭಾರತೀಯರು ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

ಕೇಂದ್ರ ವಿದೇಶಾಂಗ ಇಲಾಖೆ ಇರಾಕ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಕ್ಷಣಕ್ಷಣ ಮಾಹಿತಿ ಪಡೆಯುತ್ತಿದೆ. ಅಲ್ಲದೆ ನಾಪತ್ತೆಯಾಗಿರುವ ಭಾರತೀಯರ ಕುರಿತ ಮಾಹಿತಿಗಾಗಿ ವಿದೇಶಾಂಗ ಇಲಾಖೆ ರಾಜಧಾನಿ ದೆಹಲಿಯಲ್ಲಿ 24ಗಂಟೆಗಳ ಕಂಟ್ರೋಲ್ ರೂಂ ಅನ್ನು ಕೂಡ ತೆರೆದಿದೆ.

ನವದೆಹಲಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಸಂಖ್ಯೆ: +91 11 2301 2113, +91 11 2301 7905, +91 11 2301 4104
ಇ-ಮೇಲ್:  controlroom@mea.gov.in.
ಬಾಗ್ದಾದ್‌ನಲ್ಲಿರುವ ರಾಯಭಾರ ಕಚೇರಿಯ ದೂರವಾಣಿ ಸಂಖ್ಯೆ: +964 770 444 4899, +964 770 484 3247

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.