ರಾಜ್ಯಸಭೆ: ಜೆಡಿಯುಗೆ ಆರ್ಜೆಡಿ ಬೆಂಬಲ

ಪಾಟ್ನಾ: ರಾಜ್ಯಸಭೆ ಉಪ ಚುನಾವಣೆಯಲ್ಲಿ ಜೆಡಿಯು ಪಕ್ಷಕ್ಕೆ ಬೆಂಬಲ ನೀಡುವಂತೆ ಆರ್ಜೆಡಿ ಪಕ್ಷದ ಸದಸ್ಯರಿಗೆ ಪಕ್ಷದ ಹಿರಿಯ ಮುಖಂಡ ಲಾಲು ಪ್ರಸಾದ್ ಯಾದವ್ ಅವರು ಸೂಚಿಸಿದ್ದಾರೆ.
ರಾಜ್ಯಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಯು ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಘೋಷಿಸಿದ್ದಾರೆ. ಕೋಮುವಾದಿಗಳನ್ನು ಸೋಲಿಸುವ ಉದ್ದೇಶದಿಂದ ತಾವು ಜೆಡಿಯು ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವುದಾಗಿ ಲಾಲು ಪ್ರಸಾದ್ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಜೆಡಿಯು ಪಕ್ಷದ ಕೆಲ ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ಅಲ್ಲದೆ ಸ್ವತಃ ಬಿಹಾರ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು ಕೂಡ ಮುಖ್ಯಮಂತ್ರಿ ಸ್ಥಾನವನ್ನು ತೊರೆದಿದ್ದರು. ಅಲ್ಪಮತಕ್ಕೆ ಕುಸಿದಿದ್ದ ಜೆಡಿಯುಗೆ ಲಾಲು ಪ್ರಸಾದ್ ಯಾದವನ್ ನೇತೃತ್ವದ ಆರ್ಜೆಡಿ ಪಕ್ಷ ಬೆಂಬಲ ನೀಡುವ ಮೂಲಕ ಜೆಡಿಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇದೀಗ ರಾಜ್ಯಸಭೆ ಉಪ ಚುನಾವಣೆಯಲ್ಲಿಯೂ ಜೆಡಿಯು ಪಕ್ಷವನ್ನು ಬೆಂಬಲಿಸುವುದಾಗಿ ಲಾಲು ಪ್ರಸಾದ್ ಹೇಳಿದ್ದಾರೆ.
ಕಳೆದ ವಾರವಷ್ಟೇ ಬಿಹಾರ ಮಾಜಿ ಸಿಎಂ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ಭೇಟಿ ಮಾರ್ಡಿ ಚರ್ಚಿಸಿದ್ದರು. ಇಂದು ಜೆಡಿಯು ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರನ್ನು ಲಾಲು ಪ್ರಸಾದ್ ಅವರು ಭೇಟಿ ಮಾಡಿದ ಬಳಿಕ ಜೆಡಿಯು ಪಕ್ಷವನ್ನು ಬೆಂಬಲಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು. ಪ್ರಸ್ತುತ ರಾಜ್ಯಸಭಾ ಉಪಚುನಾವಣೆಯಲ್ಲಿ ಜೆಡಿಯು ಪರವಾಗಿ ಪವನ್ ವರ್ಮಾ ಮತ್ತು ಗುಲಾಂ ರಸೂಲ್ ಬಲ್ಯಾವಿ ಅವರು ಸ್ಪರ್ಧಿಸಿದ್ದು, ಇವರಿಗೆ ಪಕ್ಷೇತರ ಅಭ್ಯರ್ಥಿಗಳಿಂದ ತೀವ್ರ ಪೈಪೋಟಿ ಎದುರಾಗಿದೆ.
ಬಿಹಾರ ವಿಧಾನಸಭೆಯಲ್ಲಿ ಜೆಡಿಯುಗೆ ಒಟ್ಟು 117 ಶಾಸಕರ ಬಲವಿದ್ದು, ಆರ್ಜೆಡಿ 21 ಶಾಸಕರನ್ನು ಹೊಂದಿದೆ. ಅಂತೆಯೇ ಪ್ರತಿಪಕ್ಷ ಬಿಜೆಪಿ 84 ಶಾಸಕರನ್ನು ಹೊಂದಿದೆ. ಇನ್ನು ಕೆಲವೇ ತಿಂಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿಯೂ ಆರ್ಜೆಡಿ, ಜೆಡಿಯು ಮೈತ್ರಿ ಮುಂದುವರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


