ಈಗಿನ ಸುದ್ದಿ

ಇರಾಕ್: ಅಪಹೃತ ಭಾರತೀಯರ ಜಾಡು ಪತ್ತೆ

ಇರಾಕ್: ಅಪಹೃತ ಭಾರತೀಯರ ಜಾಡು ಪತ್ತೆ
Published On :

ನವದೆಹಲಿ: ಇರಾಕ್‌ನ ಮೊಸುಲ್ ನಗರದಲ್ಲಿ ನಾಪತ್ತೆಯಾಗಿದ್ದ 40 ಭಾರತೀಯರ ಜಾಡು ಪತ್ತೆಯಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಸುನ್ನಿ ಉಗ್ರರ ದಾಳಿಯಿಂದಾಗಿ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಇರಾಕ್‌ನಲ್ಲಿ ನಿನ್ನೆ ನಾಪತ್ತೆಯಾಗಿದ್ದ 40 ಮಂದಿ ಭಾರತೀಯ ಮೂಲದ ಕಾರ್ಮಿಕರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಇರಾಕ್ ಮೊಸುಲ್ ನಗರದಿಂದ ಅಪಹರಣಕ್ಕೀಡಾಗಿದ್ದ ಭಾರತೀಯರನ್ನು ಎಲ್ಲಿ ಬಂಧಿಸಿಡಲಾಗಿದೆ ಎಂಬುದನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಅವರು ಹೇಳಿದ್ದಾರೆ. 'ಇರಾಕ್ ಸರ್ಕಾರದಿಂದ ನಮಗೆ ಮಾಹಿತಿ ಬಂದಿದ್ದು, ನಿನ್ನೆ ನಾಪತ್ತೆಯಾಗಿದ್ದ 40 ಭಾರತೀಯರು ಇರುವ ಸ್ಥಳ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಈ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಸುಷ್ಮಾರನ್ನು ಭೇಟಿ ಮಾಡಿದ ಅಪಹೃತರ ಸಂಬಂಧಿಕರು

ಈ ನಡುವೆ ಇರಾಕ್‌ನಲ್ಲಿ ಉಗ್ರರಿಂದ ಅಪಹರಣಕ್ಕೀಡಾದ ಭಾರತೀಯ ಮೂಲದ ಕಾರ್ಮಿಕರ ಸಂಬಂಧಿಕರು ಇಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ತಮ್ಮವರನ್ನು ಶೀಘ್ರವೇ ಭಾರತಕ್ಕೆ ವಾಪಸ್ ಕರೆತರುವಂತೆ ಸುಷ್ಮಾ ಅವರ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹೃತ ಭಾರತೀಯರ ಬಿಡುಗಡೆಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮತ್ತು ಅಪಹರಣಕ್ಕೀಡಾಗಿರುವ ಎಲ್ಲರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ. ಇರಾಕ್ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸ್ವತಃ ನಾನೇ ವೈಯುಕ್ತಿಕವಾಗಿ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದರು.

ಇನ್ನು ಇರಾಕ್‌ನಲ್ಲಿ ಆಂತರಿಕ ಬಿಕ್ಕಟ್ಟು ಮುಂದುವರೆದಿದ್ದು, ಸುನ್ನಿ ಉಗ್ರರ ದಾಳಿ ಮುಂದುವರೆದಿದೆ. ನಿನ್ನೆ ಇರಾಕ್‌ನ ಅತಿದೊಡ್ಡ ತೈಲಾಗಾರ ಬೈಜಿ ತೈಲಘಟಕದ ಮೇಲೆ ದಾಳಿ ಮಾಡಿದ್ದ ಉಗ್ರರು, ಇಂದು ತೈಲ ಘಟಕದ ಮೇಲೆ ಪ್ರಭುತ್ವ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ಗ್ರಾಮಸ್ಥರು ಹೇಳುವಂತೆ ನಿನ್ನೆಯಿಂದ ನಡೆಯುತ್ತಿದ್ದ ಗುಂಡಿನ ದಾಳಿ ಇಂದು ಕೂಡ ಮುಂದುವೆರಿದ್ದು, ಉಗ್ರರು ಇಂದು ತಮ್ಮ ಗೆಲುವಿನ ಲಾಂಛನವನ್ನಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ದಿನಗಳೆದಂತೆ ಇರಾಕ್ ಬಿಕ್ಕಟ್ಟು ತಾರಕಕ್ಕೇರುತ್ತಿದ್ದು, ದಿನೇ ದಿನೇ ಉಗ್ರರು ಪ್ರಭುತ್ವ ಸಾಧಿಸುತ್ತಿದ್ದಾರೆ. ಉಗ್ರರ ದಾಳಿಯಿಂದಾಗಿ ಇದೀಗ ಇರಾಕ್‌ನಲ್ಲಿ ಸಾಂವಿಧಾನ ಬಿಕ್ಕಟ್ಟು ಏರ್ಪಟ್ಟಿದ್ದು, ಇರಾಕ್ ಸರ್ಕಾರದ ಅಸ್ತಿತ್ವವೇ ಅಲುಗಾಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.