ಈಗಿನ ಸುದ್ದಿ

ಇರಾಕ್: ಅಪಹೃತರ ಬಿಡುಗಡೆಗೆ ಶತ ಪ್ರಯತ್ನ: ಸುಷ್ಮಾ ಸ್ವರಾಜ್

ಇರಾಕ್: ಅಪಹೃತರ ಬಿಡುಗಡೆಗೆ ಶತ ಪ್ರಯತ್ನ: ಸುಷ್ಮಾ ಸ್ವರಾಜ್
ಅಪಹರಣಕ್ಕೀಡಾದ ತಮ್ಮ ಮಗನ ಫೋಟೋ ತೋರಿಸುತ್ತಿರುವ ತಾಯಿ ಮತ್ತು ಆತನ ಕುಟುಂಬ..
Published On :

ನವದೆಹಲಿ: ಇರಾಕ್‌ನಲ್ಲಿ ಆಂತರಿಕ ಬಿಕ್ಕಟ್ಟಿನಿಂದಾಗಿ ಮೊಸುಲ್ ನಗರದಿಂದ ಸುನ್ನಿ ಬಂಡುಕೋರರು ಅಪಹರಿಸಿದ್ದ 40 ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಮೊಸುಲ್ ನಗರದಿಂದ ಅಪಹರಣಕ್ಕೀಡಾಗಿರುವ ಎಲ್ಲರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ. ಇರಾಕ್ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸ್ವತಃ ನಾನೇ ವೈಯುಕ್ತಿಕವಾಗಿ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಸುಷ್ಮಾ ಹೇಳಿದರು.

ನಿನ್ನೆ ಇರಾಕ್‌ನ ಮೊಸುಲ್ ನಗರದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 40 ಕಾರ್ಮಿಕರನ್ನು ಸುನ್ನಿ ಬಂಡುಕೋರರು ಅಪಹರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಅಹಪರಣಕ್ಕೀಡಾಗಿದ್ದಾರೆ ಎಂದು ಹೇಳಲಾಗುತ್ತಿರುವ ಭಾರತೀಯರು ಅವರ ಕುಟುಂಬಕ್ಕಾಗಲಿ ಅಥವಾ ಭಾರತೀಯ ರಾಯಭಾರ ಕಚೇರಿಯ ಸಂಪರ್ಕಕ್ಕೆ ಸಿಗದೇ ಇರುವುದು ಅಪಹರಣವಾಗಿರಬಹುದೆಂಬ ಶಂಕೆಯನ್ನು ಬಲಪಡಿಸಿದೆ.

ಹೀಗಾಗಿಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಹಿಂದೆ ಬಾಗ್ದಾದ್‌ನ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ರಾಯಭಾರ ಅಧಿಕಾರಿ ಸುರೇಶ್ ರೆಡ್ಡಿ ನೇತೃತ್ವದ ತಂಡವನ್ನು ಬಾಗ್ದಾದ್‌ಗೆ ಕಳುಹಿಸಲು ತೀರ್ಮಾನಿಸಿದೆ. ಅಲ್ಲದೆ ಕ್ಷಣಕ್ಷಣದ ಮಾಹಿತಿಗಾಗಿ ಬಾಗ್ದಾದ್ ಮತ್ತು ರಾಜಧಾನಿ ನವದೆಹಲಿಯಲ್ಲಿ 24 ಗಂಟೆಗಳ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ.

ನವದೆಹಲಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಸಂಖ್ಯೆ: +91 11 2301 2113, +91 11 2301 7905, +91 11 2301 4104
ಇ-ಮೇಲ್:  controlroom@mea.gov.in
ಬಾಗ್ದಾದ್‌ನಲ್ಲಿರುವ ರಾಯಭಾರ ಕಚೇರಿಯ ದೂರವಾಣಿ ಸಂಖ್ಯೆ: +964 770 444 4899, +964 770 484 3247


ಮತ್ತೊಂದೆಡೆ 40 ಭಾರತೀಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾಕ್‌ನ ಯಾವುದೇ ಉಗ್ರಗಾಮಿ ಸಂಘಟನೆಗಳು ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಶಂಕಿಸಿರುವಂತೆ ಐಎಸ್‌ಐಎಸ್ (the Islamic State in Iraq and Syria) ಸಂಘಟನೆಯ ಸದಸ್ಯರು ಭಾರತೀಯರನ್ನು ಅಪಹರಿಸಿರಬಹುದು ಎಂದು ಶಂಕಿಸಿದ್ದಾರೆ.

ಭಾರತೀಯರ ಹುಡುಕಾಟಕ್ಕೆ ವಿಶೇಷ ಕಾರ್ಯಾಚರಣೆ ಸಾಧ್ಯವಿಲ್ಲ: ಇರಾಕ್ ಸ್ಪಷ್ಟನೆ
ಇತ್ತ ಅಪಹರಣಕ್ಕೀಡಾಗಿರುವ ಭಾರತೀಯರ ಹುಡುಕಾಟಕ್ಕೆ ಭಾರತ ಸರ್ಕಾರ ಶತಪ್ರಯತ್ನ ನಡೆಸುತ್ತಿದ್ದರೆ ಅತ್ತ ಭಾರತೀಯರ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಇರಾಕ್ ಸರ್ಕಾರ ಹೇಳಿದೆ.

ಐಎಸ್‌ಐಸ್ ಸಂಘಟನೆಯ ವಶದಲ್ಲಿರುವ ಭಾರತೀಯರು ಸುರಕ್ಷಿತವಾಗಿಯೇ ಇರುತ್ತಾರೆ. ಏಕೆಂದರೆ ಅಪಹರಣದ ಬಳಿಕ ಸಂಘಟನೆಯ ಯಾವುದೇ ಸದಸ್ಯರು ಬೆದರಿಕೆ ಹಾಕಿಲ್ಲ ಅಥವಾ ಇತರೆ ಬೇಡಿಕೆ ಇಟ್ಟಿಲ್ಲ. ಹೀಗಾಗಿ ಭಾರತೀಯರು ಸುರಕ್ಷಿತವಾಗಿಯೇ ಇರುತ್ತಾರೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯರ ಬಿಡುಗಡೆಗೆ ಕುರಿತಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆಯ ಬೆನ್ನಲ್ಲೇ ಇರಾಕ್ ಸರ್ಕಾರದ ಈ ಹೇಳಿಕೆ ಅಪಹರಣಕ್ಕೀಡಾಗಿರುವವರ ಸಂಬಂಧಿಕರಲ್ಲಿ ಆತಂಕ ಹೆಚ್ಚಿಸಿದೆ. ಅಪಹರಣಕ್ಕೀಡಾಗಿರುವವರ ಪೈಕಿ ಬಹುತೇಕರು ಪಂಜಾಬ್ ಮೂಲದವರಾಗಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಇವರು ಪಂಜಾಬ್ ಜಲಂಧರ್, ಅಮೃತಸರ, ಅಂಬಾಲ, ಹೋಶಿಯಾರ್ ಪುರ, ಕಪುರ್ಥಲಾ ಮೂಲದವರೆಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.