ಈಗಿನ ಸುದ್ದಿ

ಯಶವಂತ್ ಸಿನ್ಹಾ ಜೈಲಿನಿಂದ ಬಿಡುಗಡೆ

ಯಶವಂತ್ ಸಿನ್ಹಾ ಜೈಲಿನಿಂದ ಬಿಡುಗಡೆ
Published On :

ನವದೆಹಲಿ: ಪ್ರತಿಭಟನೆಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಾಮೀನು ತಿರಸ್ಕರಿಸಿ ಕಳೆದ 15ದಿನಗಳಿಂದ ಜೈಲುವಾಸದಲ್ಲಿದ್ದ ಯಶವಂತ್ ಸಿನ್ಹಾ ಅವರು, ಈ ಹಿಂದೆ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಸಲಹೆಯಂತೆ ಜಾಮೀನು ಪಡೆಯಲು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಇಂದು ಜಾಮೀನು ಪಡೆದ ಯಶವಂತ್ ಸಿನ್ಹಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸಿನ್ಹಾ ಅವರು ಜೈಲಿನಿಂದ ಹೊರಬರುತ್ತಿದ್ದಂತೆಯೇ ಸ್ಥಳೀಯ ಬಿಜೆಪಿ ನಾಯಕರು ಅವರ ಮೇಲೆ ಹೂ ಎರಚುತ್ತಾ ಭರಮಾಡಿಕೊಂಡರು.

ಜಾರ್ಖಂಡ್ನಲ್ಲಿ ಉದ್ಭವಿಸಿದ್ದ ವಿದ್ಯುತ್ ಬಿಕ್ಕಟ್ಟನ್ನು ವಿರೋಧಿಸಿ ಕಳೆದ ಜೂನ್ 2ರಂದು ಪ್ರತಿಭಟನೆ ನಡೆಸುತ್ತಿದ್ದ ಯಶ್ವಂತ್ ಸಿನ್ಹಾ ಅವರನ್ನು ಜೂನ್ 3ರಂದು ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ವೇಳೆ ವಿದ್ಯುತ್ ಮಂಡಳಿಯ ಪ್ರಧಾನ ವ್ಯವಸ್ಥಾಪಕ ದನೇಶ್ ಝಾ ಅವರ ಕೈಗಳನ್ನು ಕಟ್ಟಿಹಾಕುವಂತೆ ಸಿನ್ಹಾ ಕಾರ್ಯಕರ್ತರಿಗೆ ಸೂಚಿಸಿದ್ದರು. ಸಿನ್ಹಾ ಆದೇಶದಂತೆ ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಝಾ ಅವರ ಕೈಗಳನ್ನು ಕಟ್ಟಿಹಾಕಿದ್ದರು.

ಯಶವಂತ್ ಸಿನ್ಹಾ ಮತ್ತು ಬಿಜೆಪಿ ಕಾರ್ಯಕರ್ತರು ತಮಗೆ ಅವಮಾನ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದನೇಶ್ ಝಾ ಅವರು ಹಜಾರಿಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸಿನ್ಹಾರನ್ನು ಬಂಧಿಸಿದ್ದ ಪೊಲೀಸರು ಅವರನ್ನು ನ್ಯಾಯಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿದಾಗ ಜಾಮೀನು ಪಡೆಯುವಂತೆ ನ್ಯಾಯಾಲಯ ಸಲಹೆ ನೀಡಿತ್ತು. ಆದರೆ ಜಾಮೀನು ತಿರಸ್ಕರಿಸಿದ್ದ ಸಿನ್ಹಾ ಅವರಿಗೆ ನ್ಯಾಯಾಲಯ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.

ನಿನ್ನೆ ಸಿನ್ಹಾ ಅವರು ಜಾಮೀನಿಗೆ ಸಮ್ಮತಿ ನೀಡಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ತಮ್ಮ ತಮ್ಮ ಸ್ವಕ್ಷೇತ್ರಕ್ಕೆ ತೆರಳುತ್ತಿರುವ ಯಶ್ವಂತ್ ಸಿನ್ಹಾ ಅವರು ಅಲ್ಲಿ ವಿದ್ಯುತ್ ಯೊಜನೆಯೊಂದನ್ನು ಉದ್ಘಾಟಿಸಲಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಿಗೆ ಪ್ರಸ್ತುತ ವಿದ್ಯುತ್ ಕೊರತೆ ಸಮಸ್ಯೆ ಚುನಾವಣಾ ಪ್ರಚಾರದ ಪ್ರಮುಖ ಅಂಶವಾಗಿರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.