ರೇಲ್ವೇ ದರ ಏರಿಕೆಗೆ ವಿರೋಧ: ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ರೇಲ್ವೇ ಪ್ರಯಾಣ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿಲುವಿಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಟನೆ ನಡೆಸಿದ್ದಾರೆ.
ನವದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಕಾಂಗ್ರೆಸ್ ಮುಖಂಡ ಅರವಿಂದರ್ ಲೌಲಿ ನೇತೃತ್ವದಲ್ಲಿ 400ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನಕಪುರಿಯ ಮುಖ್ಯರಸ್ತೆಯನ್ನು ಕಾರ್ಯಕರ್ತರು ಬಂದ್ ಮಾಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಲಘು ಲಾಠಿ ಪ್ರಹಾರ ಮತ್ತು ಜಲಫಿರಂಗಿ ಬಳಸಲಾಗುತ್ತಿದ್ದು, ಪ್ರಸ್ತುತ ವಾತಾವರಣ ಶಾಂತವಾಗಿದೆ.
ಅಂತೆಯೇ ವಾರಣಾಸಿಯಲ್ಲಿಯೂ ಕೂಡ ರೇಲ್ವೇ ದರ ಏರಿಕೆ ವಿರೋಧಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಲಹಾಬಾದ್‌ನಲ್ಲಿಯೂ ಕೂಡ ದರ ಏರಿಕೆ ಖಂಡಿಸಿ ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ಖಂಡಿಸಿರುವ ವಿವಿಧ ರಾಜಕೀಯ ಪಕ್ಷಗಳು, ಜನರಿಗೆ ಹುಸಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ದೇಶದ ಜನತೆಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಈ ಬಗ್ಗೆ ಮಾತನಾಡಿ, ರೈಲ್ವೇ ದರ ಏರಿಕೆಯಿಂದಾಗಿ ಮಧ್ಯಮ ಮತ್ತು ಬಡ ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಯುಪಿಎ ಸರ್ಕಾರ ಕೂಡ ಬೆಲೆ ಏರಿಕೆಯಿಂದಾಗಿಯೇ ಕುಖ್ಯಾತಿಗಳಿಸಿತ್ತು. ಇದೀಗ ಬಿಜೆಪಿ ಸರ್ಕಾರ ಕೂಡ ಯುಪಿಎ ಸರ್ಕಾರಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ರೈಲು ದರ ಏರಿಕೆಯಿಂದ ಬಡವರ ಮೇಲೆ ಹೆಚ್ಚು ಹೊಡೆತ ಬೀಳಲಿದೆ. ಹೀಗಾಗಿ ಕೂಡಲೇ ಕೇಂದ್ರಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಹೇಳಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ದರ ಏರಿಕೆಯನ್ನು ಖಂಡಿಸಿದರು. ಅಲ್ಲದೆ ಕೇಂದ್ರ ಸರ್ಕಾರ ಕೂಡಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅಂತೆಯೇ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರು ಮಾತನಾಡಿ, ಚುನಾವಣೆ ವೇಳೆ ಭಾರತಕ್ಕೆ ಒಳ್ಳೆ ದಿನಗಳು ಬರಲಿವೆ ಎಂಬ ಘೋಷಣೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದೇ ಏನು ಅವರ ಒಳ್ಳೆ ದಿನಗಳು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಒಂದು ವರ್ಗದ ಜನ ಮಾತ್ರ ಅದರಿಂದ ಲಾಭ ಪಡೆಯುತ್ತಾರೆ ಎಂದು ರೈಲ್ವೇ ಇಲಾಖೆಯ ಸಚಿವರು ಕೂಡ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರು ಗಂಭೀರ ಅರೋಪ ಮಾಡಿದರು.
ದರ ಏರಿಕೆ ವಾಪಸ್ ಇಲ್ಲ: ರಾಜನಾಥ್ ಸಿಂಗ್
ಇನ್ನು ಕೇಂದ್ರಸರ್ಕಾರದ ದರ ಏರಿಕೆ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಏರಿಕೆ ಪ್ರಮಾಣದಲ್ಲಿ ಸರ್ಕಾರ ಇಳಿಕೆ ಮಾಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಅಭಿವೃದ್ಧಿ ದೃಷ್ಟಿಕೋನದಿಂದ ಮತ್ತು ಸಮರ್ಥ ಆಡಳಿತ ನೀಡಲು ಕೆಲವೊಂದಿಷ್ಟು ಕಠಿಣ ನಿರ್ಧಾರಗಳು ಅನಿವಾರ್ಯವಾಗಿದೆ. ಹೀಗಾಗಿ ರೈಲ್ವೇ ಇಲಾಖೆಯಲ್ಲಿನ ನಷ್ಟವನ್ನು ತಡೆಯಲು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದರು. ಅಲ್ಲದೆ ದರ ಏರಿಕೆ ನಿರ್ಧಾರ ವಾಪಸ್ ಪಡೆಯುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಜನತೆಗೆ ಮೊದಲ ಬಿಸಿ ಮುಟ್ಟಿಸಿದ್ದು, ಸಂಕಷ್ಟದಲ್ಲಿರುವ ರೇಲ್ವೇ ಇಲಾಖೆಯ ನಷ್ಟವನ್ನು ಭರಿಸಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


