ಈಗಿನ ಸುದ್ದಿ

ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿ ಶೂಮಾಕರ್

ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿ ಶೂಮಾಕರ್
Published On :

ನವದೆಹಲಿ: ಕಳೆದ 6 ತಿಂಗಳಿಂದ ಕೋಮಾದಲ್ಲಿದ್ದ ಫಾರ್ಮುಲಾ 1 ಚಾಲಕ ಮೈಕಲ್ ಶೂಮಾಕರ್ ಪ್ರಸ್ತುತ ಕೋಮಾದಿಂದ ಹೊರಬಂದಿದ್ದರೂ ಕೂಡ ಅವರು ಇನ್ನು ಮುಂದೆ ನಡೆದಾಡಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಬ್ರಿಟೀಷ್ಯೊಂದು ವರದಿ ಮಾಡಿರುವಂತೆ ಕೋಮಾದಿಂದ ಹೊರಬಂದಿರುವ ಮೈಕಲ್ ಶೂಮಾಕರ್ ಅವರು ಜೀವನ ಪರ್ಯಂತ ಹಾಸಿಗೆಯಲ್ಲೇ ಕಾಲ ದೂಡಬೇಕಾಗಿದೆ. ಸ್ಕೀಯಿಂಗ್ ವೇಳೆ ಅಪಘಾತಕ್ಕೀಡಾಗಿದ್ದ ಶೂಮಾಕರ್ ಅವರ ದೇಹದ ಕೆಲ ಪ್ರಮುಖ ಭಾಗಗಳು ಶಾಶ್ವತ ಹಾನಿಗೊಳಗಾಗಿದ್ದು, ಶೂಮಾಕರ್ ಅವರ ಪ್ರಾಣ ಉಳಿದದ್ದೇ ದೊಡ್ಡ ವಿಸ್ಮಯ ಎಂದು ಪತ್ರಿಕೆ ಅಭಿಪ್ರಾಯಟ್ಟಿದೆ.

ಕಳೆದ 6 ತಿಂಗಳಿಂದ ಕೋಮಾದಲ್ಲಿದ್ದ ಶೂಮಾಕರ್ ಅವರು ಕೋಮಾದಿಂದ ಹೊರಬಂದಿರುವುದು ಸಕಾರಾತ್ಮಕ ಬೆಳವಣಿಗೆಯೇ ಆಗಿದ್ದರೂ, ಅವರ ದೇಹದ ಪ್ರಮುಖ ಭಾಗಗಳು ಶಾಶ್ವತ ಹಾನಿಗೊಳಗಾಗಿವೆ. ಹೀಗಾಗಿ ಶೂಮಾಕರ್ ಅವರು ಸಹಾಯಕರ ನೆರವಿಲ್ಲದೆ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಬ್ರಿಟೀಷ್ ಮೂಲದ ವೈಧ್ಯ ಎರಿಕ್ ರೀಡರರ್ ಅವರು ಅಭಿಪ್ರಾಯಪಟ್ಟಿದ್ದಾರೆ. 'ಕೋಮಾದಲ್ಲಿದ್ದ ವ್ಯಕ್ತಿಯೊಬ್ಬ 6 ತಿಂಗಳ ಬಳಿಕ ಕೋಮಾದಿಂದ ಹೊರಬಂದಿರುವುದು ಸಕಾರಾತ್ಮಕ ಬೆಳವಣಿಗೆಯಾದರೂ, ಶೂಮಾಕರ್ ಅವರು ಪ್ರತಿಯೊಂದು ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಭಿಸಬೇಕಿದೆ' ಎಂದು ಹೇಳಿದ್ದಾರೆ.

ಇನ್ನು ಶುಮಾಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಗ್ಯಾರಿ ಹರ್ಟ್ಸ್ಟೈನ್ ಅವರು ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಮಾಕರ್ ಅವರು ಕೋಮಾದಿಂದ ಹೊರಬಂದಿರುವುದು ಸಂತೋಷದ ಸಂಗತಿಯಾಗಿದೆ. ನಾವು ಇನ್ನು ಹೆಚ್ಚಿನ ಭರವಸೆಯೊಂದಿಗೆ ಕಾರ್ಯ ನಿರ್ವಹಿಸಿದರೆ ಇನ್ನು ಮೂರು ತಿಂಗಳಲ್ಲಿ ಶುಮಾಕರ್ ಅವರು ತಾವಾಗಿಯೇ ಎದ್ದು ಕುಳಿತುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅದು ಸಾಧ್ಯವಾದರೆ ಮುಂದಿನ ಆರುತಿಂಗಳಲ್ಲಿ ಅವರು ವ್ಹೀಲ್ ಚೇರ್ನಲ್ಲಿ ಕುಳಿತು ಅದನ್ನು ನಿಯಂತ್ರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಶ್ವಕಪ್ ವಿಜಯವನ್ನು ಶುಮಾಕರ್ ಅವರಿಗೆ ಸಮರ್ಪಿಸಿದ ಜರ್ಮನಿ
ಅಪಘಾತಕ್ಕೀಡಾಗಿ ಈಗಷ್ಟೇ ಕೋಮಾದಿಂದ ಹೊರಬಂದಿರುವ ಫಾರ್ಮುಲ-1 ಚಾಲಕ ಶುಮಾಕರ್ ಅವರಿಗೆ ವಿಶ್ವಾದ್ಯಂತ ಶುಭ ಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ. ವಿಶ್ವಕಪ್ ಫುಟ್ಬಾಲ್ ನಲ್ಲಿ ಪಾಲ್ಗೊಂಡಿರುವ ಜರ್ಮನಿ ತಂಡ ಪೋರ್ಚುಗಲ್ ವಿರುದ್ಧದ ತಮ್ಮ ವಿಜಯವನ್ನು ವಿಶ್ವದ ನಂಬರ್ 1 ಚಾಲಕ ಶುಮಾಕರ್ ಅವರಿಗೆ ಸಮರ್ಪಿಸಿದೆ. ಆ ಮೂಲಕ ಶುಮಾಕರ್ ಅವರು ಶೀಘ್ರ ಚೇತರಿಕೆ ಕಾಣಲೆಂದು ಶುಭ ಹಾರೈಸಿದೆ.

ಕಳೆದ ಡಿಸೆಂಬರ್ 29ರಂದು ಫ್ರಾನ್ಸ್ನ ಆಲ್ಪ್ಸ್ ರೆಸಾರ್ಟ್ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ಶುಮಾಕರ್ ಅವರು ಅಪಘಾತಕ್ಕೀಡಾಗಿದ್ದರು. ಈ ವೇಳೆ ಅವರು ತಲೆಗೆ ಗಂಭೀರ ಪೆಟ್ಟಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಆರು ತಿಂಗಳಿಂದ ಗ್ರೆನೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶುಮಾಕರ್ ಅವರು ಇತ್ತೀಚಗಷ್ಟೇ ಕೋಮಾದಿಂದ ಹೊರಬಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.