ಯುಜಿಸಿ, ದೆಹಲಿ ವಿವಿ ಜಟಾಪಟಿ: ಕುಲಪತಿ ದಿನೇಶ್ ಸಿಂಗ್ ರಾಜಿನಾಮೆ

ನವದೆಹಲಿ: ದೆಹಲಿ ವಿಶ್ವ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಡುವಿನ ಜಟಾಪಟಿ ತಾರಕ್ಕೇರಿದ್ದು, ಮಂಗಳವಾರ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ದಿನೇಶ್ ಸಿಂಗ್‌ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಾಲ್ಕು ವರ್ಷಗಳ ಪದವಿಪೂರ್ವ ಶೈಕ್ಷಣಿಕ ಕಾರ್ಯಕ್ರಮ ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ದೆಹಲಿ ವಿಶ್ವವಿದ್ಯಾಲಯದ ಕುಲಪತಿ ದಿನೇಶ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ದಿನೇಶ್ ಸಿಂಗ್ ಅವರು ಈಗಾಗಲೇ ತಮ್ಮ ರಾಜಿನಾಮೆಯನ್ನು ಫ್ಯಾಕ್ಸ್ ಮೂಲಕ ದೆಹಲಿ ಉಪರಾಜ್ಯಪಾಲ ನಜೀಬ್ ಜಂಗ್ ಅವರಿಗೆ ರವಾನಿಸಿದ್ದು, ಇಂದು ಸಂಜೆಯೊಳಗೆ ಅವರನ್ನು ಭೇಟಿ ಮಾಡಿ ಚರ್ಚಿಸಲಿದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಪ್ರವೇಶ ಸ್ಥಗಿತಗೊಳಿಸಿದ ದೆಹಲಿ ವಿವಿ
ಇದಕ್ಕೂ ಮುನ್ನ ವಿವಿ ಮತ್ತು ಯುಜಿಸಿ ನಡುವಿನ ಜಟಾಪಟಿ ಮುಂದುವರೆದಿರುವಂತೆಯೇ ದೆಹಲಿ ವಿವಿ ತನ್ನ ಪ್ರವೇಶಾತಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
ವಿಶ್ವವಿದ್ಯಾಲಯದ ವೇಳಾಪಟ್ಟಿಯಂತೆ ಇಂದಿನಿಂದ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಳ್ಳಬೇಕಿತ್ತು. ಆದರೆ ಯುಜಿಸಿ ಮತ್ತು ವಿಶ್ವ ವಿದ್ಯಾಲಯದ ನಡುವಿನ ಬಿಕ್ಕಟ್ಟಿನಿಂದಾಗಿ ಪ್ರಸ್ತುತ ಎಲ್ಲ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತ 4 ವರ್ಷಗಳ ಪದವಿ ಕೋರ್ಸ್‌ಗಳ ಪರಿಚಯಿಸುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ದೆಹಲಿಯಲ್ಲಿ ವಿದ್ಯಾರ್ಥಿಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಎಬಿವಿಪಿ, ಭಾರತೀಯ ವಿದ್ಯಾರ್ಥಿ ಸೇನಾ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ದೆಹಲಿವಿವಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂತೆಯೇ ಪ್ರಾಧ್ಯಾಪಕರ ವತಿಯಿಂದಲೂ ಕೂಡ ನಾಲ್ಕು ವರ್ಷದ ಪದವಿ ಪೂರ್ವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ದೆಹಲಿ ವಿವಿಯ ಪ್ರಧ್ಯಾಪಕರಾದ ಎಸ್.ಕೆ.ಮಿಶ್ರಾ ಅವರು ದೆಹಲಿ ವಿವಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 'ಯುಜಿಸಿ ನಿರ್ದೇಶನ ಶೈಕ್ಷಣಿಕ ಸ್ವಾತಂತ್ರ್ಯದ ಹರಣದ ಪ್ರತೀಕವಾಗಿದ್ದು, ಯುಜಿಸಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಆಣತಿಯಂತೆ ನಡೆದುಕೊಳ್ಳುತ್ತಿದೆ' ಎಂದು ಅವರು ಟೀಕಿಸಿದ್ದಾರೆ. ಇನ್ನು ದೆಹಲಿ ವಿಶ್ವ ವಿದ್ಯಾಲಯ ಮತ್ತು ಯುಜಿಸಿ ನಡುವಿನ ಜಟಾಪಟಿಯಿಂದಾಗಿ ಬೇಸತ್ತಿರುವ ದೆಹಲಿ ವಿವಿಯ ಕೆಲ ಪ್ರಾಧ್ಯಾಪಕರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿ ಸಾಂಕೇತಿಕ ಧರಣಿ ನಡೆಸುತ್ತಿದ್ದಾರೆ.
ದೆಹಲಿ ವಿಶ್ವ ವಿದ್ಯಾಲಯ ಆವರಣದಲ್ಲಿ ಈಗಾಗಲೇ ಕೆಲ ಪ್ರಾಧ್ಯಾಪಕರು ಧರಣಿ ಆರಂಭಿಸಿದ್ದು, ನಾಲ್ಕು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮ ಅಥವಾ 3 ವರ್ಷಗಳ ಪದವಿ ಕಾರ್ಯಕ್ರಮಗಳ ಕುರಿತಾಗಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಈ ಹಿಂದೆ ಅಮೆರಿಕದಲ್ಲಿ ಜಾರಿಯಲ್ಲಿರುವಂತೆ ನಾಲ್ಕು ವರ್ಷಗಳ ಪದವಿ ಪೂರ್ವ ಶಿಕ್ಷಣ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದ ದೆಹಲಿ ವಿಶ್ವವಿದ್ಯಾಲಯ, ಇದೇ ಕಾರ್ಯಕ್ರಮವನ್ನು ಜಾರಿಗೊಳಿಸುವಂತೆ ನಿರ್ಣಯ ಕೈಗೊಂಡು ತನ್ನ ಅಧೀನದಲ್ಲಿರುವ ಎಲ್ಲ ಕಾಲೇಜುಗಳಿಗೆ ಆದೇಶ ನೀಡಿತ್ತು. ಆದರೆ ನಿನ್ನೆ ದೆಹಲಿ ವಿವಿಯ ನಿರ್ಧಾರಕ್ಕೆ ತಡೆ ನೀಡಿದ್ದ ಯುಜಿಸಿ, 3 ವರ್ಷಗಳ ಪದವಿ ಕಾರ್ಯಕ್ರಮವನ್ನೇ ಮುಂದುವರೆಸುವಂತೆ ಸೂಚನೆ ನೀಡಿತ್ತು. ಇದೇ ವಿಚಾರ ಇದೀಗ ಉಭಯ ಸಂಸ್ಥೆಗಳ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡುವ ಅಧಿಕಾರ ಯುಜಿಸಿಗೆ ಇಲ್ಲ. ಕೇವಲ ಸಲಹೆ ಮಾತ್ರ ನೀಡಬಹುದು ಎಂದು ದೆಹಲಿ ವಿವಿ ವಾದಿಸುತ್ತಿದೆ. ಹೀಗಾಗಿ ಇಂದಿನಿಂದ ಆರಂಭಗೊಳ್ಳಬೇಕಿದ್ದ ಪ್ರವೇಶಾತಿ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ.
ಒಟ್ಟಾರೆ ವಿಶ್ವ ವಿದ್ಯಾಲಯ ಮತ್ತು ಯುಜಿಸಿ ಜಟಾಪಟಿಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿರುವಂತಾಗಿದೆ.
ಬೆಂಗಳೂರು ವಿವಿಯಲ್ಲೂ ವಿರೋಧ
ನಾಲ್ಕು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ವಿರೋಧ ಕೇಳಿಬರುತ್ತಿದ್ದು, ಬೆಂಗಳೂರು ವಿವಿಯ ವಿಜ್ಞಾನ ವಿಭಾಗ ಈ ಕಾರ್ಯಕ್ರಮದ ವಿರುದ್ಧ ಗೊತ್ತುವಳಿಯನ್ನು ಅಂಗೀಕರಿಸಿದೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ವಿವಿಯ ಕುಲಪತಿ ಪ್ರೋ.ತಿಮ್ಮೇಗೌಡ ಅವರು, ವಿದ್ಯಾರ್ಥಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ನಾಲ್ಕು ವರ್ಷದ ಪದವಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಮುಂದಾಗಿದ್ದೇವೆ. ಆದರೆ ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಪಠ್ಯಕ್ರಮದ ಕರಡು ಪ್ರತಿ ಬಂದ ಬಳಿಕ ಅದನ್ನು ಪರೀಕ್ಷಿಸಿ, ಅದು ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಪೂರಕವಾಗಿದ್ದರೆ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


