ದೆಹಲಿ ವಿವಿ, ಯುಜಿಸಿ ಜಟಾಪಟಿ: ತುರ್ತು ವಿಚಾರಣೆ ಇಲ್ಲ: ಹೈಕೋರ್ಟ್ ಸ್ಪಷ್ಟನೆ

ನವದೆಹಲಿ: ದೆಹಲಿ ವಿಶ್ವ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಡುವಿನ ಬಿಕ್ಕಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಪ್ರಕರಣದ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಅರ್ಜಿಗಳು ದಾಖಲಾಗಿದ್ದು, ನಾಲ್ಕು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮದ ಪರವಾಗಿ ಒಂದು ಅರ್ಜಿ ದಾಖಲಾಗಿದ್ದರೆ, ಮತ್ತೊಂದು ಇದರ ವಿರುದ್ಧ ದಾಖಲಾಗಿದೆ. ಎರಡು ಅರ್ಜಿಗಳ ಕುರಿತಂತೆ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ರಾಣಿ ಮತ್ತು ನ್ಯಾ. ವಿಕಾಮೇಶ್ವರ ರಾವ್ ಅವರ ದ್ವಿಸದಸ್ಯ ಪೀಠ, ಪ್ರಕರಣ ಸಂಬಂಧ ಪರಿಣಾಮಕಾರಿ ವಿಚಾರಣೆ ಅಗತ್ಯ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ರೋಸ್ಟರ್ ಬೆಂಚ್‌ನಲ್ಲಿ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
'ನಮಗೆ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಗೊಂದಲ ಅರ್ಥವಾಗುತ್ತದೆ. ಆದರೆ ವಿವಿ ಮತ್ತು ಯುಜಿಸಿ ಬಿಕ್ಕಟ್ಟಿನಿಂದಾಗಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಪ್ರವೇಶಾತಿಯಲ್ಲಿ ಕೊಂಚ ವಿಳಂಬವಾಗಬಹುದು. ಜುಲೈ ತಿಂಗಳಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ಆಶ್ವಾಸನೆ ನೀಡಿದೆ. ದೆಹಲಿ ವಿವಿಯ ನಿರ್ಧಾರಕ್ಕೆ ತಡೆ ನೀಡಿದ್ದ ಯುಜಿಸಿ ಕ್ರಮವನ್ನು ಪ್ರಶ್ನಿಸಿ ದೆಹಲಿ ವಿವಿಯ ಪ್ರಾಧ್ಯಪಕರಾದ ಆದಿತ್ಯಾ ನಾರಾಯಣ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಯುಜಿಸಿ ನೀಡಿದ್ದ ಸಲಹೆಯಂತೆ ಮೂರು ವರ್ಷಗಳ ಪದವಿ ಕಾರ್ಯಕ್ರಮವನ್ನೇ ಮುಂದುವರೆಸುವಂತೆ ಆದೇಶ ನೀಡಬೇಕು ಎಂದು ವಕೀಲ ಆರ್.ಕೆ.ಕಪೂರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೆ ತಮ್ಮ ಅರ್ಜಿಯಲ್ಲಿ 'ಪ್ರಸ್ತುತ ಬಿಕ್ಕಟ್ಟಿನಿಂದಾಗಿ ದೆಹಲಿ ವಿವಿ ಅಧೀನದಲ್ಲಿ ಬರುವ ಬಹುತೇಕ ಕಾಲೇಜುಗಳು ಗೊಂದಲಕ್ಕೀಡಾಗಿದ್ದು, ಪ್ರವೇಶಾತಿ ರದ್ದುಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಎಫ್‌ವೈಯುಪಿ 1986ರ ರಾಷ್ಟ್ರೀಯ ಶೈಕ್ಷಣಿಕ ನೀತಿಯ 10,2,3 ಪದ್ದತಿಯ ಉಲ್ಲಂಘನೆಯಾಗಿದೆ. ದೆಹಲಿ ವಿಶ್ವ ವಿದ್ಯಾಲಯ ಕೂಡ ಇದೇ ಪದ್ದತಿಯನ್ನು ಪುನರ್ ಅಳವಡಿಸಿಕೊಳ್ಳ ಬೇಕು. ಹೀಗಾಗಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಪೂರ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಮಿಶ್ರಾ ಅವರು ಇದೇ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ನ ಗಮನ ಸೆಳೆಯಲು ಪ್ರಯತ್ನಿಸಿದರಾದರೂ, ಪ್ರಕರಣದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್‌ನಲ್ಲಿ ವಿಷಯ ಪ್ರಸ್ತಾಪಿಸುವಂತೆ ಸಲಹೆ ನೀಡಿತ್ತು.
ಒಟ್ಟಾರೆ ಯುಜಿಸಿ ಮತ್ತು ದೆಹಲಿ ವಿವಿ ನಡುವಿನ ಬಿಕ್ಕಟ್ಟು ಶಮನವಾಗುವ ಯಾವುದೇ ಲಕ್ಷಣಗಳು ಗೋಚರಿಸಿದೇ ಇರುವುದು ವಿದ್ಯಾರ್ಥಿಗಳ ಆತಂಕವನ್ನು ಇಮ್ಮಡಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


