ಈಗಿನ ಸುದ್ದಿ

ಇರಾಕ್: ಭಾರಿ ವಿನಾಶಕ್ಕೆ ಉಗ್ರರ ಹವಣಿಕೆ

ಇರಾಕ್: ಭಾರಿ ವಿನಾಶಕ್ಕೆ ಉಗ್ರರ ಹವಣಿಕೆ
Published On :

ಬಾಗ್ದಾದ್: ಪ್ರಸ್ತುತ ಇರಾಕ್‌ನಲ್ಲಿ ಸಂಭವಿಸುತ್ತಿರುವ ಇರಾಕ್ ಸಂಘರ್ಷದಲ್ಲಿ ಉಗ್ರರ ಅಟ್ಟಹಾಸ ಮುಗಿಲುಮುಟ್ಟುತ್ತಿದ್ದು, ಇದಕ್ಕಿಂತಲೂ ಭಾರಿ ವಿನಾಶಕ್ಕೆ ಕೈಹಾಕಲು ಉಗ್ರರು ಹವಣಿಸುತ್ತಿದ್ದಾರೆ.

ಈಗಾಗಲೇ ಬಾಗ್ದಾದ್‌ನ ಸಮೀಪಕ್ಕೆ ಧಾವಿಸಿರುವ ಸುನ್ನಿ ಬಂಡುಕೋರರು, ಭಾರಿ ವಿಧ್ವಂಸಕ್ಕೆ ಪ್ರಯತ್ನಿಸುತ್ತಿದ್ದಾರೆ. ಇರಾಕ್‌ನ ಎರಡನೇ ಅತಿದೊಡ್ಡ ಅಣೆಕಟ್ಟು ಎಂದು ಖ್ಯಾತಿ ಪಡೆದಿರುವ ಹಡಿತಾ ಡ್ಯಾಮ್ ಅನ್ನು ಧ್ವಂಸಗೊಳಿಸಲು ಉಗ್ರರು ಯೋಜನೆ ರೂಪಿಸಿದ್ದು, ಡ್ಯಾಂ ಅನ್ನು ಧ್ವಂಸಗೊಳಿಸುವ ಮೂಲಕ ಅಪಾರ ಪ್ರಮಾಣದ ನೀರನ್ನು ಹರಿಸಿ ಪ್ರವಾಹ ಸೃಷ್ಟಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಾಗ್ದಾದ್ ನಿಂದ ಕೇವಲ 120 ಕಿ.ಮೀ ದೂರದಲ್ಲಿರುವುದರಿಂದ ಡ್ಯಾಮ್ ಅನ್ನು ಧ್ವಂಸಗೊಳಿಸುವುದು ಉಗ್ರರ ಯೋಜನೆಯಾಗಿದ್ದು, ಇದಕ್ಕಾಗಿ ಅಲ್ ಖೈದಾ ಸೇರಿದಂತೆ ಕೆಲ ಉಗ್ರ ಸಂಘಟನೆಗಳು ಈಗಾಗಲೇ ಸುನ್ನಿ ಬಂಡುಕೋರರ ಬೆಂಬಲಕ್ಕೆ ನಿಂತಿವೆ. ಒಂದು ವೇಳೆ ಉಗ್ರರು ಇದರಲ್ಲಿ ಯಶಸ್ವಿಯಾಗಿದ್ದೇ ಆದರೆ ಇರಾಕ್‌ನಲ್ಲಿ ನಿರೀಕ್ಷಿಸಲು ಅಸಾಧ್ಯವಾದಷ್ಟರ ಮಟ್ಟಿಗೆ ವಿಧ್ವಂಸವಾಗುವ ಸಾಧ್ಯತೆ ಇದೆ. ಡ್ಯಾಂ ಅನ್ನು ಸ್ಫೋಟಿಸಿದರೆ ಡ್ಯಾಂನಲ್ಲಿರುವ ಸುಮಾರು 1 ಲಕ್ಷದ 10 ಸಾವಿರ ಕ್ಯುಸೆಕ್ಸ್ ನೀರು ಒಮ್ಮೆಲೆ ಹರಿದು ರಾಜಧಾನಿ ಬಾಗ್ದಾದ್‌ನಲ್ಲಿ ವಿನಾಶಕಾರಿ ಪ್ರಳಯವನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿಯೇ ಇರಾಕ್ ಸರ್ಕಾರ ಉಗ್ರರ ಯೋಜನೆ ಬಗ್ಗೆ ತೀವ್ರ ಕಳವಳಗೊಂಡಿದ್ದು, ಡ್ಯಾಂಗಳ ಸುರಕ್ಷತೆಗಾಗಿ ಭದ್ರತಾಪಡೆಗಳನ್ನು ನಿಯೋಜಿಸಿದೆ.

ಅಲ್ಲದೆ ಡ್ಯಾಂ ಸುತ್ತಮುತ್ತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು. ಅಲ್ಲಿನ ಎಲ್ಲ ಸಿಬ್ಬಂದಿಗಳನ್ನು ಒಳಗೇ ಇರುವಂತೆ ಸೂಚನೆ ನೀಡಲಾಗಿದೆ. ಡ್ಯಾಂ ಅನ್ನು ಸುತ್ತುವರೆದಿರುವ ಭದ್ರತಾ ಸಿಬ್ಬಂದಿಗಳು ಹದ್ದಿನ ಕಣ್ಣಿನಿಂದ ಡ್ಯಾಂ ಅನ್ನು ಕಾವಲು ಕಾಯುತ್ತಿದ್ದಾರೆ. ಇತ್ತ ಸುನ್ನಿ ಬಂಡುಕೋರರು ಕೂಡ ದಿನಕಳೆದಂತೆ ತಮ್ಮ ಪ್ರಭುತ್ವ ಹೆಚ್ಚಿಸಿಕೊಳ್ಳುತ್ತಿದ್ದು, ಹಡಿತಾ ಡ್ಯಾಂನತ್ತ ಉಗ್ರರು ಮುನ್ನುಗ್ಗುತ್ತಿದ್ದಾರೆ.

ಇನ್ನು ಇರಾಕ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮ್ಮ ಪಾಶ್ಚಾತ್ಯ ವಿರೋಧಿಗಳತ್ತ ಬೊಟ್ಟು ಮಾಡಿ ತೋರಿಸುತ್ತಿರುವ ಪ್ರಧಾನಿ ನೂರಿ ಅಲಿ ಮಲಿಕಿ ಅವರು, ಯಾವುದೇ ಕಾರಣಕ್ಕೂ ದೇಶವನ್ನು ಉಗ್ರ ಕೈವಶವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸೌದಿ ಅರೇಬಿಯಾ ಸೇರಿದಂತೆ ತಮ್ಮ ರಾಜಕೀಯ ವೈರಿಗಳ ವಿರುದ್ಧವಾಗಿಯೂ ಹರಿಹಾಯ್ದಿರುವ ಮಲಿಕಿ ಅವರು, ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಇತರೆ ರಾಜಕೀಯ ಸಮೂಹಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ ದಿನಕಳೆದಂತೆ ಇರಾಕ್ ಬಿಕ್ಕಟ್ಟು ತಾರಕಕ್ಕೇರುತ್ತಿದ್ದು, ಸುನ್ನಿ ಬಂಡುಕೋರರ ಉಪಟಳ ಹೆಚ್ಚಾಗುತ್ತಿದೆ. ಆದರೆ ಪ್ರತಿಬಾರಿಯಂತೆ ಈ ಭಾರಿಯೂ ಇರಾಕ್ ಬಿಕ್ಕಟ್ಟಿಗೆ ತಮ್ಮ ಪಾಶ್ಚಾತ್ಯ ವಿರೋಧಿಗಳನ್ನು ದೂರುತ್ತಿರುವ ಪ್ರಧಾನಿ ಮಲಿಕಿ ಅವರು ವಿಧ್ವಂಸ ನಡೆಯುವ ಮುನ್ನವೇ ಎಚ್ಚೆತ್ತು, ಅಂತಾರಾಷ್ಟ್ರೀಯ ಸಮುದಾಯದ ಸಹಾಯ ಪಡೆದು ಸಂಘರ್ಷಕ್ಕೆ ಶೀಘ್ರ ಅಂತ್ಯ ಹಾಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.